ಮಂಗಳೂರು: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಹೆಬ್ಬಾವಿಗೆ ಚಿಕಿತ್ಸೆ ನೀಡಿ ರಕ್ಷಣೆ

ಮಂಗಳೂರು: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಹೆಬ್ಬಾವಿಗೆ ಚಿಕಿತ್ಸೆ ನೀಡಿ ರಕ್ಷಣೆ


ಮಂಗಳೂರು: ಬಂಟ್ವಾಳ ತಾಲೂಕಿನ ವಗ್ಗದಲ್ಲಿ ಕಾಣಸಿಕ್ಕಿರುವ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಮಂಗಳೂರಿನ ಯುವ ವೈದ್ಯರ ತಂಡವೊಂದು ಚಿಕಿತ್ಸೆ ನೀಡಿ ರಕ್ಷಿಸಿ ಮರಳಿ ಸುರಕ್ಷಿತವಾಗಿ ಬಿಟ್ಟಿದೆ.

ಉರಗ ರಕ್ಷಕ ಧೀರಜ್ ನಾವೂರು ಅವರಿಗೆ‌ ಬಂಟ್ವಾಳದ ವಗ್ಗದಲ್ಲಿ ಈ ಹೆಬ್ಬಾವು ಅಸ್ವಸ್ಥ ಸ್ಥಿತಿಯಲ್ಲಿ ಕಾಣಸಿಕ್ಕಿದೆ. ಯಾರೋ ಹೊಡೆದಿದ್ದಾರೇನೋ ಅಂದುಕೊಂಡ ಅವರು ತಕ್ಷಣ ಮಂಗಳೂರಿನ ಪಶುವೈದ್ಯ ಡಾ.ಯಶಸ್ವಿ ನಾರಾವಿ ಅವರಿಗೆ ಕರೆ ಮಾಡಿದ್ದಾರೆ‌. ಚಿಕಿತ್ಸೆ ನೀಡಲೆಂದು ಅವರು ಹೆಬ್ಬಾವನ್ನು ಕ್ಲಿನಿಕ್ ಗೆ ಕರೆ ತರವಂತೆ ಸೂಚಿಸಿದ್ದಾರೆ. ಅದರಂತೆ ತಂದ ಹೆಬ್ಬಾವನ್ನು ಪರಿಶೀಲಿಸಿದಾಗ ಯಾರೂ ಹೊಡೆದಿರಲಿಲ್ಲ. ಬದಲಾಗಿ ಅದಕ್ಕೆ ಮಲಬದ್ಧತೆ ಸಮಸ್ಯೆಯಿದೆ ಎಂದು ತಿಳಿದುಬಂದಿದೆ.

ತಕ್ಷಣ ಡಾ.ಯಶಸ್ವಿ ನಾರಾವಿಯೊಂದಿಗೆ, ಡಾ.ಮೇಘನಾ ಪೆಮ್ಮಯ್ಯ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿ ಸೇರಿದಂತೆ ವೈದ್ಯರ ತಂಡ ಈ ಹೆಬ್ಬಾವಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸುಮಾರು ಹತ್ತು ಅಡಿಯಷ್ಟು ಉದ್ದವೂ, 13 ಕೆಜಿ ತೂಕದ ಈ ಹೆಬ್ಬಾವು ಸಾಕಷ್ಟು ಗಟ್ಟಿಯಾದ ಮಲಬದ್ಧತೆಯ ದ್ರವ್ಯರಾಶಿಯನ್ನು ಹೊಂದಿತ್ತು. ಅದರ ದೇಹದ ಅರ್ಧ ಭಾಗದಷ್ಟು ಮಲ ತುಂಬಿಕೊಂಡಿತ್ತು. ಅಲ್ಟ್ರಾಸೌಂಡ್ ಮಾಡುವ ಮೊದಲು ಅರಿವಳಿಕೆ ನೀಡಲಾಯಿತು. ಬಳಿಕ  ಮೂರು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲಾ ಮಲಬದ್ಧತೆ ವಸ್ತುಗಳನ್ನು ತೆಗೆದುಹಾಕಲಾಗಿದೆ.  

ಬಳಿಕ, ಐದು ದಿನಗಳವರೆಗೆ ದ್ರವಗಳು,  ಆ್ಯಂಟಿಬಯೋಟಿಕ್ ಮತ್ತು ನೋವಿನ ಔಷಧಿಗಳನ್ನು ನೀಡಲಾಯಿತು. ಇದರಿಂದ ಹೆಬ್ಬಾವು ಮತ್ತೆ ಯಥಾಸ್ಥಿತಿಗೆ ಬಂದಿದೆ. ಹೆಬ್ಬಾವುಗಳಲ್ಲಿ ಮಲಬದ್ಧತೆ ಸಾಮಾನ್ಯ. ಆದರೆ ಇಷ್ಟೊಂದು ಸಮಸ್ಯೆಯನ್ನು 10 ವರ್ಷಗಳ ತನ್ನ ಅನುಭವದಲ್ಲಿ  ಕಂಡಿಲ್ಲ ಎಂದು ಡಾ.ಯಶಸ್ವಿ ನಾರಾವಿ ಹೇಳಿದ್ದಾರೆ. ಬಳಿಕ ಉರಗ ರಕ್ಷಕ ಧೀರಜ್ ನಾವೂರು ಅವರು ಈ ಹೆಬ್ಬಾವನ್ನು ರಕ್ಷಿಸಿದ ಪ್ರದೇಶದ ಸಮೀಪದಲ್ಲಿಯೇ ಸುರಕ್ಷಿತವಾಗಿ ಬಿಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article