ಮಂಗಳೂರು: ಫ್ಲೈಟ್ ನಲ್ಲಿ ಬಂದು ಟ್ರೈನ್ ನಲ್ಲಿ ಕಳವುಗೈಯುತ್ತಿದ್ದ ಖದೀಮರಿಬ್ಬರು ಅರೆಸ್ಟ್
Wednesday, October 4, 2023
ಮಂಗಳೂರು: ಉತ್ತರ ಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣಗಳನ್ನು ದೋಚುತ್ತಿದ್ದ ಖದೀಮರಿಬ್ಬರನ್ನು ರೈಲು ಸಂರಕ್ಷಣಾ ಪಡೆಯ(ಆರ್ ಪಿಎಫ್) ಪೊಲೀಸರ ವಿಶೇಷ ತಂಡ ಕಂಬಿ ಹಿಂದೆ ಕಳಿಸಿದೆ.
ಉತ್ತರ ಪ್ರದೇಶದ ಮಿರ್ಜಾಪುರದ ಧೋರುಪುರದ ಅಭಯ್ ರಾಜ್ ಸಿಂಗ್ (26) ಹಾಗೂ ರಾಜ್ ಪುರದ ಹರಿಶಂಕರ್ ಗಿರಿ(25) ಬಂಧಿತ ಆರೋಪಿಗಳು.
ಸೆಪ್ಟೆಂಬರ್ 28ರಂದು ಮಂಗಳೂರು ಮತ್ತು ಸುರತ್ಕಲ್ ನಡುವೆ ಸಂಚಾರ ಮಾಡುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವಾಗಿತ್ತು. ಆದರೆ ರೈಲಿನಲ್ಲಿದ್ದ ಈ ಯುವಕರಿಬ್ಬರ ವರ್ತನೆಯಲ್ಲಿ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಅವರಿಬ್ಬರನ್ನು ಅಕ್ಟೋಬರ್ 2ರಂದು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಆಗ ಇವರು ಕೃತ್ಯ ಎಸಗಿರುವುದಾಗಿ ಒಪ್ಪಿದ್ದರು. ತಕ್ಷಣ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಆರ್ ಪಿಎಫ್ ತಂಡ ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದಾರೆ.
ತನಿಖೆ ವೇಳೆ ಆರೋಪಿಗಳು ಉತ್ತರಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ರಾತ್ರಿ ವೇಳೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಲಗಿದ್ದ ವೃದ್ಧ ಹಾಗೂ ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ದೋಚಲು ಪ್ಲ್ಯಾನ್ ಮಾಡುತ್ತಿದ್ದರು. ರಾತ್ರಿ ವೇಳೆ ರೈಲಿನ ವೇಗ ಕಡಿಮೆಯಾಗುತ್ತಿದ್ದಂತೆ ಚಿನ್ನಾಭರಣಗಳನ್ನು ಎಳೆದೊಯ್ದು ಬೋಗಿಯಿಂದ ಹೊರಜಿಗಿದು ಪರಾರಿಯಾಗುತ್ತಿದ್ದರು. ಈ ಕೃತ್ಯ ಎಸಗಲು ಅವರು ವಾರಾಂತ್ಯದ ರೈಲನ್ನೇ ಆಯ್ಕೆ ಮಾಡುತ್ತಿದ್ದರು.
ಇದೇ ಆರೋಪಿಗಳು ಉತ್ತರ ಪ್ರದೇಶದಿಂದ ಗೋವಾಕ್ಕೆ ಸೆಪ್ಟೆಂಬರ್ 21ರಂದು ಆಗಮಿಸಿ ಅಲ್ಲಿಂದ ತಿರುವನಂತಪುರಂಗೆ ತೆರಳುವ ರೈಲು ಹತ್ತಿದ್ದರು. ಗೋವಾದಿಂದ ಕುಳೆಂ ಎಂಬಲ್ಲಿ ರೈಲು ಸಂಚರಿಸುತ್ತಿದ್ದಾಗ ವೇಗ ಕಡಿಮೆಯಾಗುತ್ತಿದ್ದಂತೆ ಮಹಿಳೆಯೊಬ್ಬರ ಚಿನ್ನ ಎಳೆದು ಪರಾರಿಯಾಗಿದ್ದರು. ಆರೋಪಿಗಳು ಪಾಲಕ್ಕಾಡ್, ತಿರುವನಂತಪುರಂ ಹಾಗೂ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕದ್ದ 125 ಗ್ರಾಂ ಚಿನ್ನಾಭರಣಗಳನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.