ಮಂಗಳೂರು:ಅತ್ತಾವರದ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ - ಓರ್ವ ಮಹಿಳೆ ಸಾವು
Tuesday, November 28, 2023
ಮಂಗಳೂರು: ಅಪಾರ್ಟ್ಮೆಂಟ್ ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಮಹಿಳೆ ಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಸಹೈನ್ ಮೂಸಬ್ ( 57) ಸಾವನ್ನಪ್ಪಿದ ಮಹಿಳೆ.
ನಗರದ ಅತ್ತಾವರದ ಅಪಾರ್ಟ್ಮೆಂಟ್ ನ ಫ್ಲ್ಯಾಟ್ ವೊಂದರಲ್ಲಿ ಇಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಅಪಾರ್ಟ್ಮೆಂಟ್ ಬೆಂಕಿ ತಗುಲುವ ವೇಳೆ ಮಹಿಳೆ ಸಹೈನ್ ಮೂಸಬ್ ( 57) ಬಾತ್ ರೂಂ ಗೆ ತೆರಳಿದ್ದರು. ಅವರು ಬೆಂಕಿಯ ಹೊಗೆಗೆ ಬಾತ್ ರೂಂ ನೊಳಗೆ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಮನೆಯೊಳಗಿದ್ದ ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ತಗುಲುವ ಸಂದರ್ಭದಲ್ಲಿ ಮನೆಯಲ್ಲಿ ಒಂಭತ್ತು ಮಂದಿ ಇದ್ದರು. ಬೆಂಕಿ ತಗುಲುವ ವೇಳೆ ಅದರಲ್ಲಿ ಏಳು ಮಂದಿ ಹೊರಬಂದಿದ್ದಾರೆ. ನಂತರ ಇಬ್ಬರು ಒಳಗೆ ಇರುವುದು ತಿಳಿದಿದೆ. ಆದರೆ ಅವರನ್ನು ರಕ್ಷಿಸುವ ವೇಳೆ ಒಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿ ಅವಘಡದ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.