ಮಂಗಳೂರು: ಹುತಾತ್ಮರಾದ ಕ್ಯಾ.ಪ್ರಾಂಜಲ್ ಶಾಲೆಯಲ್ಲಿ ಎಲ್ಲರ ಫೇವರೇಟ್ ವಿದ್ಯಾರ್ಥಿ - ಕಣ್ಣೀರಾದ ಶಿಕ್ಷಕಿ

ಮಂಗಳೂರು: ಹುತಾತ್ಮರಾದ ಕ್ಯಾ.ಪ್ರಾಂಜಲ್ ಶಾಲೆಯಲ್ಲಿ ಎಲ್ಲರ ಫೇವರೇಟ್ ವಿದ್ಯಾರ್ಥಿ - ಕಣ್ಣೀರಾದ ಶಿಕ್ಷಕಿ



ಮಂಗಳೂರು: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನೆ ಹಾಗೂ ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ದಕ್ಷಿಣ ಕನ್ನಡ ಮೂಲದ 63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಮಂಗಳೂರಿನ ಎಂಆರ್ ಪಿಎಲ್ ನ ಡೆಲ್ಲಿ ಸ್ಕೂಲ್ ನಲ್ಲಿ ಎಲ್ ಕೆಜಿಯಿಂದ ಎಸ್ಎಸ್ಎಲ್ ಸಿವರೆಗೆ ವಿದ್ಯಾಭ್ಯಾಸ ಪಡೆದ ಬಳಿಕ ಅವರು ನಗರದ ಮಹೇಶ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್  ಟೆಲಿಕಮ್ಯುನಿಕೇಷನ್ ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು. 
ಎಂ.ವಿ.ಪ್ರಾಂಜಲ್ ಹುತಾತ್ಮರಾದ ವಿಚಾರವನ್ನು ನೆನೆದು ಹನಿಗಣ್ಣಾದ ಶಿಕ್ಷಕಿ ಕೃಪಾ ಸಂಜೀವ್, ಅವನು ಶಾಲೆಯಲ್ಲಿದ್ದಾಗಲೇ ಪರ್ಫೆಕ್ಟ್ ಸ್ಟೂಡೆಂಟ್ ಆಗಿದ್ದ. ಆದ್ದರಿಂದ ಎಲ್ಲಾ ಶಿಕ್ಷಕರ ಫೇವರೇಟ್ ವಿದ್ಯಾರ್ಥಿಯಾಗಿದ್ದ. ಮೊದಲು ಈ ವಿಚಾರ ಕಿವಿಗೆ ಬಿದ್ದಾಗ ಈ ಘಟನೆಯನ್ನು ಅರಗಿಸಲು ಸಾಧ್ಯವಾಗಿಲ್ಲ. ನಮಗೆ ಈ ದುಃಖದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ದೇಶಕ್ಕಾಗಿ ಅವನು ಮಾಡಿರುವ ತ್ಯಾಗಕ್ಕೆ ಸೆಲ್ಯೂಟ್ ಮಾಡುತ್ತೇವೆ ಎಂದರು.
ಪ್ರಾಂಜಲ್ ಎಲ್ಲರ ಸರ್ವಸ್ವ ಆಗಿದ್ದ. ಸಣ್ಣದಿನಿಂದಲೇ ಅವನು ಎಲ್ಲರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದ. ಸೇನೆಗೆ ಸೇರಿದ ಬಳಿಕವೂ ಪ್ರತಿಬಾರಿ ಊರಿಗೆ ಬಂದಾಗ ಶಾಲೆಗೆ ಬರುತ್ತಿದ್ದ. ಎಲ್ಲಾ ಶಿಕ್ಷಕ - ಶಿಕ್ಷಕಿಯರು ಸೇರಿದಂತೆ ಕಚೇರಿ ಸಿಬ್ಬಂದಿ, ಹೌಸ್ ಕೀಪಿಂಗ್  ಆಫೀಸ್ ಸ್ಟಾಫ್ ಗಳನ್ನೂ ಕಂಡು ಮಾತನಾಡುತ್ತಿದ್ದ. ರಾಷ್ಟ್ರಪತಿ ಸ್ಕೌಟ್ ಆಗಿ ನಾಯಕತ್ವ ಹೊಂದಿದ್ದ. ಆರನೇ ತರಗತಿಯಿಂದಲೇ ಸೇನೆಗೆ ಸೇರಬೇಕೆಂದು ತಯಾರಿ ಮಾಡಿದ್ದ ಒಂದು ತಿಂಗಳ ಹಿಂದೆಯಷ್ಟೇ ಶಾಲೆಗೆ ಬಂದು ನಮ್ಮನ್ನೆಲ್ಲಾ ಮಾತನಾಡಿಸಿದ್ದ‌. ಇಂದು ನಮ್ಮ  ಶಾಲೆಯಲ್ಲಿ ಕ್ರೀಡಾ ದಿನ ಇತ್ತು. ಆದರೆ ಪ್ರಾಂಜಲ್ ಬಲಿದಾನದ ಹಿನ್ನಲೆಯಲ್ಲಿ ಶಾಲೆಗೆ ರಜೆ ಕೊಟ್ಟಿದ್ದೇವೆ ಎಂದು ಪ್ರಾಂಜಲ್ ಬಗ್ಗೆ ನೆನೆದು ಶಿಕ್ಷಕಿ ಕೃಪಾ ಸಂಜೀವ್ ಕಣ್ಣೀರಿಟ್ಟರು.


Ads on article

Advertise in articles 1

advertising articles 2

Advertise under the article