ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ- 'ಶಕ್ತಿಯೋಜನೆಯಿಂದ ಧರ್ಮಸ್ಥಳಕ್ಕೆ ಶಕ್ತಿ' ಸರಕಾರಕ್ಕೆ ವೀರೇಂದ್ರ ಹೆಗ್ಗಡೆ ಶ್ಲಾಘನೆ
Saturday, May 25, 2024
ಬೆಳ್ತಂಗಡಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದೇವರ ದರ್ಶನ ಪಡೆದರು.
ಬೆಂಗಳೂರಿನಿಂದ ವಿಮಾನದ ಮೂಲಕ ಆಗಮಿಸಿದ ಸಿಎಂ ಡಿಸಿಎಂ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಆ ಬಳಿಕ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ದೇವಾಲಯದ ಹೊರಆವರಣದಲ್ಲಿಯೇ ವಾಹನದಿಂದ ಇಳಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರನ್ನು ದೇವಾಲಯದೊಳಗೆ ರೆಡ್ ಕಾರ್ಪೆಟ್ ಹಾಕಿ, ವಾದ್ಯಘೋಷ, ಆನೆ, ಪದಾತಿ ಸಮ್ಮೇಳನದೊಂದಿಗೆ ವೈಭವದೊಂದಿಗೆ ಸ್ವಾಗತಿಸಲಾಯಿತು. ಆ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತನಾಡಿದರು.
ಈ ವೇಳೆ ಮಾಧ್ಯಮದೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆ - ಬೆಳೆ ಆಗಲೆಂದು ಪ್ರಾರ್ಥನೆ ಮಾಡಿದ್ದಾರೆ. ನಮ್ಮ ಧರ್ಮದ ಸಂಪ್ರದಾಯದಂತೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಗೆ ನಮಸ್ಕಾರ ಹೇಳಲು ಬಂದಿದ್ದೇವೆ. ರಾಜ್ಯದ ಜನತೆ ಪರವಾಗಿ ಹಾಗೂ ವೈಯಕ್ತಿಕ ಪ್ರಾರ್ಥನೆ ಮಾಡಿದ್ದೇವೆ.
ರಾಜ್ಯದ ನಾನಾ ಕಡೆಗಳಿಂದ ಶಕ್ತಿ ಯೋಜನೆ ಪ್ರಯೋಜನ ಪಡೆದು ಧರ್ಮಸ್ಥಳಕ್ಕೆ ಭಕ್ತರು ಬರುತ್ತಿದ್ದಾರೆಂದು ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ. ಶಕ್ತಿ ಯೋಜನೆಯಿಂದ ದಿನವೂ ಸಾವಿರಾರು ಮಂದಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆಂದು ಸಿಎಂ ಹಾಗೂ ನನಲ್ಲಿ ಸಂತೋಷ ವ್ಯಕ್ತಪಡಿಸಿದರು. ದೇವಸ್ಥಾನದೊಳಗೆ ಇದ್ದ ಮಹಿಳಾ ಭಕ್ತರು ತಮಗೆ ಎರಡು ಸಾವಿರ ಸಿಗುತ್ತದೆಂದು ಹೇಳಿದರು. ಅವರೆಲ್ಲರ ಆಶೀರ್ವಾದ ನಮಗೆ ಶಕ್ತಿ ತುಂಬಿದೆ. ಮನೆಯಲ್ಲಿ ಜ್ಯೋತಿ ಬೆಳಗಿದೆ. ಗೃಹಲಕ್ಷ್ಮಿ ಸಿಗುತ್ತಿದೆ. ಅನ್ನ ಭಾಗ್ಯ ಸಿಗುತ್ತಿದೆ ಎಲ್ಲ ಸೌಕರ್ಯ ಸಿಗುತ್ತಿದೆ ಎಂದು ಡಿಕೆಶಿ ಶಿವಕುಮಾರ್ ಹೇಳಿದರು.