ಮಂಗಳೂರು: ತೋಡಿಗೆ ಆಟೊರಿಕ್ಷಾ ಉರುಳಿ ಚಾಲಕ ದುರ್ಮರಣ - ಮನಪಾ ನಿರ್ಲಕ್ಷ್ಯಕ್ಕೆ ಆರಂಭದ ಮಳೆಗೇ ಜೀವಬಲಿ
Saturday, May 25, 2024
ಮಂಗಳೂರು: ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಆರಂಭಿಕ ಮಳೆಗೆ ಜೀವವೊಂದು ಬಲಿಯಾದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಮಂಗಳೂರಿನ ಕೊಟ್ಟಾರ ಅಬ್ಬಕ್ಕ ನಗರದಲ್ಲಿನ ತೋಡಿನಲ್ಲಿ ಭರ್ತಿ ನೀರು ತುಂಬಿ ಹರಿದಿದೆ. ರಸ್ತೆಯನ್ನೂ ಮೀರಿ ನೀರು ಹರಿಯುತ್ತಿದ್ದ ಪರಿಣಾಮ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಉರುಳಿ ತೋಡಿಗೆ ಬಿದ್ದಿದೆ. ತೋಡು ಭರ್ತಿ ನೀರಿದ್ದ ಪರಿಣಾಮ ಸ್ಥಳೀಯ ನಿವಾಸಿ ಆಟೊಚಾಲಕ ದೀಪಕ್ (40) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಧಾರಾಕಾರ ಮಳೆಗೆ ರಸ್ತೆಗೆ ಸಮಾನವಾಗಿ ತೋಡು ಭರ್ತಿ ನೀರು ಹರಿಯುತ್ತಿದ್ದ ಪರಿಣಾಮ ರಿಕ್ಷಾ ಉರುಳಿ ಬಿದ್ದಿದೆ. ರಿಕ್ಷಾ ತೋಡಿನೊಳಗೆ ಕೌಚಿ ಬಿದ್ದ ಪರಿಣಾಮ ಆಟೋಚಾಲಕ ದೀಪಕ್ ನೀರಿನಿಂದ ಮೇಲೆ ಬರಲಾಗದೆ ಮೃತಪಟ್ಟಿರಬಹುದು. ಈ ತೋಡಿಗೆ ಸರಿಯಾಗಿ ತಡೆಗೋಡೆ ನಿರ್ಮಿಸದ ಕಾರಣ ಭಾರೀ ಅನಾಹುತ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತಲ್ಲಿ ಇನ್ನಷ್ಟು ಜೀವ ಬಲಿಯಾಗೋದು ತಪ್ಪಲಿದೆ.