ಸೂಪರ್ ಸ್ಟಾರ್ ಮಮ್ಮುಟ್ಟಿ ಮುಂದೆ ಖಡಕ್ ವಿಲನ್ ಆದ ರಾಜ್ ಬಿ ಶೆಟ್ಟಿಮಲಯಾಳಂ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯ ಕಮಾಲ್ ಟರ್ಬೋ ಚಿತ್ರ ವಿಮರ್ಶೆ
Friday, May 24, 2024
ಮೊದಲಾರ್ಧದಲ್ಲಿ ಸಣ್ಣಪುಟ್ಟ ಫೈಟ್, ಮನಸ್ಸಿಗೆ ಖುಷಿ ನೀಡುವ ಹಾಸ್ಯ ಕಚಗುಳಿ, ಮಾಫಿಯಾ ಸೂತ್ರಧಾರನ ಪತ್ತೆ ಹಚ್ಚುವಿಕೆ. ಇಂಟರ್ವೆಲ್ ನಂತರ ಮಾಫಿಯಾ ಡಾನ್ ಸಹಿತ ವ್ಯವಸ್ಥೆಯ ವಿರುದ್ಧ ನಿಂತಿರುವ ಅಕ್ರಮ ಕೂಟದ ಬೇಟೆಯಾಡೋ ಸಿನೆಮಾ 'ಮಾಸ್' ಆಗಿ ಬದಲಾಗುತ್ತೆ. ಇದುವೇ 'ಟರ್ಬೋ' ಸಿನೆಮಾದ ಇಂಟ್ರಡಕ್ಷನ್.
ಮಲಯಾಳಂ ಸಿನೆಮಾಗಳು ಕಂಟೆಂಟ್ ಸಿನೆಮಾಗಳು ಅನ್ನೋದನ್ನ 'ಟರ್ಬೋ' ತಕ್ಕ ಮಟ್ಟಿಗೆ ಬ್ರೇಕ್ ಮಾಡಿದೆ. ಮೊದಲಾರ್ಧದಲ್ಲಿ ಕಂಟೆಂಟ್ ಆಧರಿಸಿ ನಡೆದ್ರೆ, ದ್ವಿತೀಯಾರ್ಧದಲ್ಲಿ ಮಾಸ್ ಆಗಿ ಬದಲಾಗಿ ಫೈಟ್ ಅತಿ ಎನಿಸಿದ್ರೂ, ಅದ್ರ ನಡುವೆ ಸಿಗುವ ಹಾಸ್ಯ ಕಚಗುಳಿ,ಟ್ವಿಸ್ಟ್ ಸಿನೆಮಾ ನೋಡ್ಕೊಂಡು ಹೋಗುವ ರೀತಿ ಮಾಡುತ್ತೆ. ಮಮ್ಮುಟ್ಟಿ ನಾಯಕ ಪಾತ್ರದ ಇತ್ತೀಚೆಗಿನ ಮಾಸ್ ಸಿನೆಮಾಗಳ ಪಟ್ಟಿಗೆ ಟರ್ಬೋ ಸೇರುತ್ತೆ. ಹಾಗೆ ನೋಡಿದ್ರೆ ಟರ್ಬೋ ಕಾಲಿವುಡ್, ಮಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸ್ಟಾರ್ ಗಳನ್ನ ಒಟ್ಟುಗೂಡಿಸಿ ಮಾಡಿರೋ ಸಿನೆಮಾ ಎನ್ನಬಹುದು.
ಕರಾವಳಿಗರಿಗಂತೂ 'ಒಂದು ಮೊಟ್ಟೆಯ ಕಥೆ' ಮೂಲಕ ಪರಿಚಯವಾದ ರಾಜ್ ಬಿ. ಶೆಟ್ಟಿ ಅವರ ಮಾಲಿವುಡ್ ಎಂಟ್ರಿ ಖುಷಿ ನೀಡುವಂತಿದೆ. 'ಗರುಡ ಗಮನ..' & 'ಟೋಬಿ'ಯಲ್ಲಿ ಲೋಕಲ್ ರೌಡಿಯಾಗಿದ್ದ (ನಾಯಕನೂ ಹೌದು) ರಾಜ್ ಇಲ್ಲಿ ಪ್ರಮುಖ 'ಸೈಕೋ ಡಾನ್' ಆಗಿ ಬದಲಾಗಿದ್ದಾರೆ. ಕೇರಳಕ್ಕಿಂತಲೂ ಚೆನ್ನೈನಲ್ಲಿಯೇ ಕಥೆ ಹೆಚ್ಚಾಗಿ ನಡೆಯುವುದರಿಂದ ತಮಿಳು ಕೂಡಾ ಮಲಯಾಳಂಗೆ ಜೊತೆಯಾಗಿದೆ. ರಾಜ್ ಶೆಟ್ಟಿ ಎಂಟ್ರಿ ಸೀನ್ ರಾಜ್ ಅಭಿಮಾನಿಗಳನ್ನು ಸೀಟಿನ ತುದಿಯಲ್ಲಿ ನಿಲ್ಲುವಂತೆ ಮಾಡುತ್ತೆ.
ಹಾಲಿ ರಾಜಕೀಯದಲ್ಲಿರುವ ಶಾಸಕರ ಆಪರೇಷನ್ (ಖರೀದಿ), ದುಡ್ಡಿನ ಸೆಟ್ಲ್ಮೆಂಟ್ ಆಗೋವರೆಗೂ ರೆಸಾರ್ಟ್ ನಲ್ಲಿ ಕೂತು ಶಾಸಕರು ಮಾಡೋ ಮೋಜು ಮಸ್ತಿಯ ಕಂಟೆಂಟ್ ಇಲ್ಲಿದೆ ಆದ್ರೂ ಅದ್ಯಾವುದಕ್ಕೆ ಹೆಚ್ಚಿನ ಒತ್ತು ನೀಡಿಲ್ಲ. 72 ರ ಹರೆಯದಲ್ಲೂ ಮಮ್ಮುಟ್ಟಿಯ ಫೈಟ್ ಅವರ ಅಭಿಮಾನಿಗಳನ್ನು ಭರಪೂರ ಮನರಂಜಿಸಲಿದೆ. ನಾಯಕನ ತಾಯಿ ಪಾತ್ರಧಾರಿ ಬಿಂದು ಪಣಿಕ್ಕರ್ ಸ್ಕ್ರೀನ್ ಮೇಲೆ ಬಂದಾಗ್ಲೆಲ್ಲ ಮಜಾ ಎನಿಸುತ್ತೆ. ರಾಜ್ ಶೆಟ್ಟಿ, ಕಬೀರ್ ಸಿಂಗ್, ದಿಲೀಶ್, ಸುನಿಲ್ ನಟಿಸಿರೋದು ಮಲಯಾಳಮೇತರ ಪ್ರೇಕ್ಷಕರನ್ನು ಥಿಯೇಟರ್ ಗೆ ಕರೆತರುವಂತಿದೆ. ಸಿನಿಮಾಟೋಗ್ರಫಿ, ಡೈಲಾಗ್ ಗಳು ಕೂಡಾ ಚೆನ್ನಾಗಿವೆ.
ಒಟ್ಟಿನಲ್ಲಿ ರಾಜ್ ಶೆಟ್ಟಿ ಡಿಫರೆಂಟ್ ಮ್ಯಾನರಿಸಂ ಮಮ್ಮುಟ್ಟಿ ಮುಂದೆ ಚೆನ್ನಾಗಿಯೇ ವರ್ಕೌಟ್ ಆದಂತಿದೆ. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ರಾಜ್ ಬಹುಭಾಷಾ ನಟನಾಗಿ ಬದಲಾಗೋದಕ್ಕೆ ಕಾಲ ಕೂಡಿ ಬಂದಂತಿದೆ. ಸಿನೆಮಾದ ಅಂತ್ಯ ಟರ್ಬೋ-2 ರ ಸುಳಿವು ನೀಡಿದೆ.
- ಇರ್ಷಾದ್ ಕಿನ್ನಿಗೋಳಿ