ಮಂಗಳೂರು: "ಪತ್ತನಾಜೆ'' ತುಳುನಾಡಿನ ಉತ್ಸವ, ಜಾತ್ರೆ, ಕೋಲ-ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆ

ಮಂಗಳೂರು: "ಪತ್ತನಾಜೆ'' ತುಳುನಾಡಿನ ಉತ್ಸವ, ಜಾತ್ರೆ, ಕೋಲ-ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆ


ಮಂಗಳೂರು: ತುಳುವರು ಮೂಲತಃ ಕೃಷಿಕರು. ಆದ್ದರಿಂದ ತುಳುನಾಡಿನಲ್ಲಿ ಎಲ್ಲಾ ಆಚರಣೆ, ಆರಾಧನೆಗಳಲ್ಲಿ ಕೃಷಿ ಬದುಕು ಒಂದಿಲ್ಲೊಂದು ರೀತಿ ತಳುಕಿ ಹಾಕಿಕೊಂಡಿರುತ್ತದೆ. ಇದಕ್ಕೆ "ಪತ್ತನಾಜೆ"ಯೂ ಹೊರತಲ್ಲ. ಅರೇ ಇದೇನಿದು ಪತ್ತನಾಜೆ ಎಂದು ಕೇಳ್ತೀರಾ. ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ಹೌದು... ಪತ್ತನಾಜೆ ಎಂದರೆ ಪ್ರಸ್ತುತ ಸಾಲಿನ ಜಾತ್ರೆ, ಅಂಕ, ಆಯನ, ಕೋಲ-ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆಬೀಳುವ ದಿನವೆಂದೇ ನಂಬಿಕೆ ತುಳುವರಲ್ಲಿದೆ. ಇಂದಿಗೂ ಅದೇ ನಿಯಮ ಚಾಲ್ತಿಯಲ್ಲಿದೆ. ವೃಷಭ ಸಂಕ್ರಮಣ ಬಳಿಕದ ಹತ್ತನೇ ದಿನವನ್ನೇ ಪತ್ತನಾಜೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಪತ್ತನಾಜೆ ಪ್ರತೀವರ್ಷ ಮೇ 24 ಅಥವಾ 25ರಂದು ಬರುತ್ತದೆ‌. ಇಂದಿನ ದಿನವೇ "ಪತ್ತನಾಜೆ".

ಕೃಷಿಕರಾದ ತುಳುವರು ಭತ್ತದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪತ್ತನಾಜೆಯ ಗಡುವು ಇಟ್ಟುಕೊಂಡಿದ್ದಾರೆ. ಇದು ಋತುಪರಿವರ್ತನೆಯ ನಿರ್ದಿಷ್ಟ ಗಡುವಿನ ದಿನ. ಬೇಸಿಗೆ ಹಾಗೂ ಮಳೆಗಾಲದ ಸಂಧಿಕಾಲವೂ ಹೌದು‌. ಆದ್ದರಿಂದಲೇ ಈ ದಿನದ ಬಳಿಕ ತುಳುವರು ತಮ್ಮೆಲ್ಲಾ ಮನೋರಂಜನೆ, ಉತ್ಸವ, ಆಚರಣಾದಿಗಳಿಗೆ ಕೊಂಚ ವಿರಾಮ ನೀಡಿ ಕೃಷಿಯತ್ತ ಮುಖಮಾಡುತ್ತಾರೆ. ಆದ್ದರಿಂದ ಪತ್ತನಾಜೆ ಬಳಿಕ ದೈವಗಳು ಘಟ್ಟ ಹತ್ತುತ್ತವೆ. ಪತ್ತನಾಜೆ ಬಂತು ಇಳಿದ ಯಕ್ಷಗಾನ ನಿಂತಿತು ಎಂಬಂಥಹ ನಂಬಿಕೆಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಈ ಮೂಲಕ ದೈವಗಳಿಗೆ ನಡೆಯುವ ಕೋಲ, ನೇಮ, ಅಗೇಲು, ತಂಬಿಲ ಮುಕ್ತಾಯಗೊಂಡರೆ, ಯಕ್ಷಗಾನ ಮೇಳಗಳೂ ತಿರುಗಾಟ ಸ್ಥಗಿತಗೊಳಿಸುತ್ತದೆ. ಜೊತೆಗೆ ಮದುವೆ, ಗೃಹಪ್ರವೇಶ ಇನ್ನಿತರ ಶುಭಕಾರ್ಯಗಳು ಕಡಿಮೆಯಾಗುತ್ತದೆ.

ಪತ್ತನಾಜೆಯಂದು ಹತ್ತು ಹನಿಯಾದರೂ ಮಳೆ ಸುರಿಯುತ್ತದೆ‌ ಎಂಬ ನಂಬಿಕೆ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ‌. ಅಂದರೆ ಪತ್ತನಾಜೆ ಮಳೆಗಾಲ ಆರಂಭಕ್ಕೆ ಮುಹೂರ್ತದ ದಿನವೆಂದೇ ನಂಬಿಕೆ. ಈ ದಿನ ಗದ್ದೆ ಉಳುಮೆ ಮಾಡುವ ಕೆಲಸ ಆರಂಭಿಸುತ್ತಾರೆ. 
ಮುಂದಿನ ಮಳೆಗಾಲ ಪೂರ್ತಿ ಕೃಷಿಯಲ್ಲಿ ತೊಡುಗುವ ಕಾರಣ ಪತ್ತನಾಜೆ ಕೃಷಿ ಚಟುವಟಿಕೆಗಳಿಗೆ ನಾಂದಿ ಹಾಡುವ ದಿನವೆಂದರೆ ತಪ್ಪಿಲ್ಲ‌. ಇಂದು ಕೃಷಿ ಬದುಕಿನಿಂದ ತುಳುವರು ವಿಮುಖರಾಗುತ್ತಿದ್ದರೂ, ಯಕ್ಷಗಾನ ಮೇಳ ತಿರುಗಾಟ, ನೇಮ, ಉತ್ಸವಗಳು ಮಾತ್ರ ಇಂದಿಗೂ ಪತ್ತನಾಜೆ ಬಳಿಕ ಇಲ್ಲವೇ ಇಲ್ಲ ಎನ್ನಬಹುದು.

Ads on article

Advertise in articles 1

advertising articles 2

Advertise under the article