ತುಮಕೂರು:ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕೆರೆಗೆ ಬಿದ್ದ ಯುವತಿ, 12 ಗಂಟೆಗಳ ಬಳಿಕ ರಕ್ಷಣೆ!ಕೆರೆಯ ಕೋಡಿ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಕಲ್ಲಿನ ಪೊಟರೆಯೊಳಗೆ ಬಿದ್ದ ಯುವತಿಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ.
Monday, October 28, 2024
ತುಮಕೂರು: ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಕೆರೆಯ ಕಲ್ಲಿನ ಪೊಟರೆಯೊಳಗೆ ಬಿದ್ದ ಯುವತಿ ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಬದುಕಿ ಬಂದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಎಂಬವರ ಪುತ್ರಿ ಹಂಸ, ನಿನ್ನೆ ರಜೆ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದರು. ಬಳಿಕ ಸಮೀಪದಲ್ಲೇ ಕೋಡಿ ಬಿದ್ದ ಮೈದಾಳ ಕೆರೆ ವೀಕ್ಷಿಸಲು ತೆರಳಿದ್ದರು. ಈ ವೇಳೆ ಕೆರೆ ಕೋಡಿ ನೀರು ಹರಿಯುವ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ಕಲ್ಲಿನ ಪೊಟರೆಯೊಳಗೆ ಸಿಲುಕಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕ್ಯಾತಸಂದ್ರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕೆರೆ ಕೋಡಿ ನೀರನ್ನು ಬೇರೆಡೆಗೆ ಡೈವರ್ಟ್ ಮಾಡಿ, ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಿಸಿದ್ದಾರೆ.