ಕಾಞಂಗಾಡ್ :ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ, ಸಿಡಿಮದ್ದು ಉರಿಸುತ್ತಿದ್ದಾಗ ಹೊತ್ತಿಕೊಂಡ ಬೆಂಕಿ, 150ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯ, ಎಂಟು ಜನ ಗಂಭೀರ, ಮಂಗಳೂರು, ಕಾಸರಗೋಡಿನ ಆಸ್ಪತ್ರೆಗಳಿಗೆ ದಾಖಲು
Tuesday, October 29, 2024
ಕಾಸರಗೋಡು, ಅ.29: ಕಾಞಂಗಾಡ್ ಬಳಿಯ ನೀಲೇಶ್ವರದಲ್ಲಿ ತೈಯ್ಯಂ ಉತ್ಸವ ನಡೆಯುತ್ತಿದ್ದಾಗ ಭಾರೀ ಪ್ರಮಾಣದಲ್ಲಿ ಶೇಖರಿಸಿಟ್ಟಿದ್ದ ಪಟಾಕಿ ದಾಸ್ತಾನು ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿ ನೀಲೇಶ್ವರದ ಅಂಜುತ್ತಂಬಲಂ ವೀರೇರ್ಕಾವು ದೇವಸ್ಥಾನದಲ್ಲಿ ದುರಂತ ಸಂಭವಿಸಿದ್ದು, ಮಂಗಳೂರು, ಕಣ್ಣೂರು, ಕಾಸರಗೋಡಿನ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಲಾಗಿದೆ.
ಒಟ್ಟು 154 ಮಂದಿಯಲ್ಲಿ 97 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಈ ಪೈಕಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದ್ದು, 80 ಶೇಕಡಕ್ಕೂ ಹೆಚ್ಚು ಸುಟ್ಟ ಗಾಯಗೊಂಡಿದ್ದಾರೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಇಂಬಾಸೇಕರ್ ಮಾಹಿತಿ ನೀಡಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ 18, ಕಣ್ಣೂರು ಎಂಐಎಂ ಆಸ್ಪತ್ರೆಯಲ್ಲಿ 18, ಕಾಞಂಗಾಡಿನ ಐಶಾಲ್ ಆಸ್ಪತ್ರೆಯಲ್ಲಿ 17, ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ 16, ಸಂಜೀವಿನಿ ಆಸ್ಪತ್ರೆಯಲ್ಲಿ 10 ಮಂದಿ ಸೇರಿದಂತೆ ಹಲವಾರು ಕಡೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ ಮಲಬಾರ್ ಭಾಗದಲ್ಲಿ ತೈಯ್ಯಂ ಉತ್ಸವ ವಿಶೇಷವಾಗಿದ್ದು, ಚಾಮುಂಡಿ ದೈವಕ್ಕೆ ಉತ್ಸವ ನಡೆಯುತ್ತದೆ. ಈಗ ಉತ್ಸವದ ಸೀಸನ್ ಆರಂಭವಾಗುತ್ತಿದ್ದು, ಮೊದಲ ಬಾರಿಗೆ ನೀಲೇಶ್ವರದಲ್ಲಿ ನಿನ್ನೆ ರಾತ್ರಿ ತೈಯ್ಯಂ ಉತ್ಸವಕ್ಕೆ ಏರ್ಪಾಡು ನಡೆದಿತ್ತು. ಅದಕ್ಕೂ ಮುನ್ನ ಉತ್ಸವದ ನಿಮಿತ್ತ ಸಿಡಿಮದ್ದು ಉರಿಸಲಾಗಿತ್ತು. ಆದರೆ, ಪಟಾಕಿ ದಾಸ್ತಾನು ಮಾಡಿದ್ದ ಕಟ್ಟಡದ ಬಳಿಯಲ್ಲೇ ಪಟಾಕಿಯನ್ನು ಉರಿಸಲು ಆರಂಭಿಸಿದ್ದರಿಂದ ಅದರ ಕಿಡಿ ಹಾರಿ, ದಾಸ್ತಾನಿಟ್ಟಿದ್ದ ಪಟಾಕಿ ಕಟ್ಟಡಕ್ಕೆ ಬಿದ್ದಿದೆ. ಇದರಿಂದಾಗಿ ಅಲ್ಲಿದ್ದ ಪಟಾಕಿ ರಾಶಿ ಏಕಕಾಲದಲ್ಲಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ.
ಉತ್ಸವ ನೋಡುವುದಕ್ಕೆ ಸಾವಿರಾರು ಮಂದಿ ಸ್ಥಳದಲ್ಲಿ ಸೇರಿದ್ದರು. ಸಿಡಿಮದ್ದು ಉರಿಸುತ್ತಿದ್ದಾಗ ಸಾಕಷ್ಟು ಜನರು ಕುತೂಹಲದಿಂದ ನೋಡುತ್ತ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲೇ ಪಟಾಕಿ ದಾಸ್ತಾನಿರಿಸಿದ್ದ ಕಟ್ಟಡಕ್ಕೆ ಬೆಂಕಿ ಬಿದ್ದು ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದ್ದು, ಸ್ಥಳದಲ್ಲಿ ಸೇರಿದ್ದ ನೂರಾರು ಜನರು ಗಾಯಗೊಂಡಿದ್ದಾರೆ. ಉತ್ಸವ ನೋಡುವುದಕ್ಕೆ ಮಕ್ಕಳು, ಮಹಿಳೆಯರು ಎಲ್ಲರೂ ಸೇರಿದ್ದರಿಂದ ಗಾಯಾಳುಗಳಲ್ಲಿ ಎಲ್ಲ ವಯೋಮಾನದವರೂ ಇದ್ದಾರೆ.
ದುರಂತ ಘಟನೆ ಬಗ್ಗೆ ನೀಲೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ದೇವಸ್ಥಾನ ಕಮಿಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪಟಾಕಿಯನ್ನು ಪರವಾನಗಿ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಶೇಖರಣೆ ಮಾಡಲಾಗಿತ್ತು. ಅಲ್ಲದೆ, ಜನರು ಮತ್ತು ಪಟಾಕಿ ದಾಸ್ತಾನಿಟ್ಟ ಜಾಗದಿಂದ ನೂರಿನ್ನೂರು ಮೀಟರ್ ದೂರದಲ್ಲಿ ಸಿಡಿಮದ್ದು ಉರಿಸಬೇಕಿದ್ದರೆ, ಇಲ್ಲಿ ಪಟಾಕಿ ದಾಸ್ತಾನಿದ್ದ ಕಟ್ಟಡದ ಬಳಿಯಲ್ಲೇ ಸಿಡಿಮದ್ದು ಉರಿಸಲಾಗಿತ್ತು ಎನ್ನಲಾಗುತ್ತಿದೆ. ಘಟನೆಯಲ್ಲಿ ಕಟ್ಟಡದ ಒಂದು ಭಾಗ ಪೂರ್ತಿ ಕುಸಿದು ಹೋಗಿದ್ದು, ಸ್ಥಳದಲ್ಲಿ ಸೇರಿದ್ದ ಜನರು ತೀವ್ರ ಸುಟ್ಟ ಗಾಯಗೊಂಡಿದ್ದಾರೆ.
ಉತ್ಸವಕ್ಕಾಗಿ ತೆಂಗಿನ ಗರಿಗಳಿಂದ ಮಾಡಲ್ಪಟ್ಟ ರಚನೆಗಳಿಂದ ಕಟ್ಟಡಕ್ಕೆ ಮತ್ತು ಮೇಲ್ಭಾಗಕ್ಕೆ ಹಾಸಲಾಗಿತ್ತು. ಬೆಂಕಿ ಹತ್ತಿಕೊಳ್ಳುವ ಸಂದರ್ಭದಲ್ಲಿ ಒಣಗಿದ ತೆಂಗಿನ ಗರಿಗಳು ಸುಲಭದಲ್ಲಿ ಉರಿದಿವೆ. ಹೆಚ್ಚು ಸಾಮರ್ಥ್ಯದ ಸಿಡಿಮದ್ದುಗಳು ಇರಲಿಲ್ಲ. ಸಣ್ಣ ಸಣ್ಣ ಪ್ರಮಾಣದ ಪಟಾಕಿಯಷ್ಟೇ ದಾಸ್ತಾನಿತ್ತು ಎಂದು ದೇವಸ್ಥಾನ ಸಿಬಂದಿ ಹೇಳುತ್ತಾರೆ. ಆದರೆ, ದೇವಸ್ಥಾನ ಪರಿಸರವನ್ನು ಪೊಲೀಸರು ಲಾಕ್ ಮಾಡಿದ್ದು, ಉತ್ಸವ ನಿಲ್ಲಿಸಿ ತೀವ್ರ ತನಿಖೆ ಕೈಗೊಂಡಿದ್ದಾರೆ. ದುರಂತಕ್ಕೆ ನಿರ್ಲಕ್ಷ್ಯ ಕಾರಣ ಎನ್ನುವ ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಮತ್ತು ಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.