ದಕ್ಷಿಣ ಕನ್ನಡ: ಕಂಬಳದಲ್ಲಿ ಹೊಸ ಪ್ರಯೋಗ!ಈ ಬಾರಿ ಮೂರು ಹೊಸ ತಂತ್ರಜ್ಞಾನಗಳ ಅಳವಡಿಕೆ.
Thursday, October 31, 2024
ದಕ್ಷಿಣ ಕನ್ನಡ :ಕರಾವಳಿಯಲ್ಲಿ ಕಂಬಳ ಕಲರವ ಮತ್ತೆ ಆರಂಭವಾಗಿದೆ. ಪ್ರತಿ ವಾರಾಂತ್ಯ ತುಳುನಾಡಿನಲ್ಲಿ ಕಂಬಳದ ಕಹಳೆ ಮೊಳಗಲಿದೆ. ಶತಮಾನಗಳ ಹಿಂದೆ ಸಾಂಪ್ರದಾಯಿಕವಾಗಿ ಆರಂಭವಾದ ಕೋಣಗಳ ಓಟ ಇದೀಗ ಹಲವು ಮಾರ್ಪಾಡುಗಳನ್ನು ಕಂಡಿದೆ. ಕಂಬಳ ಕರೆಯಲ್ಲಿ ಕೋಣ ಜೋಡಿಗಳ ಸಂಖ್ಯೆ ಹೆಚ್ಚಿದಂತೆ ನಿರ್ದಿಷ್ಟ ಸಮಯದಲ್ಲಿ ಕೂಟ ಅಂತ್ಯಗೊಳಿಸುವ ಸವಾಲು ಆಯೋಜಕರಿಗಿದೆ. ಹೀಗಾಗಿ ಹೊಸ ತಂತ್ರಜ್ಞಾನದ ಮೊರೆ ಹೋಗುತ್ತಿದೆ ಜಿಲ್ಲಾ ಕಂಬಳ ಸಮಿತಿ.
ಈ ಹಿಂದೆ ಸಾಮಾನ್ಯ ಟೈಮರ್ ಬಳಸಿ ಕೋಣಗಳ ಓಟದ ಸಮಯ ಲೆಕ್ಕ ಹಾಕಲಾಗುತ್ತಿತ್ತು. ಬಳಿಕ ಸೆನ್ಸಾರ್ ಟೈಮಿಂಗ್ ಬಳಕೆ ಬಂತು. ಇದರಲ್ಲಿಯೂ ವರ್ಷಾನುವರ್ಷ ಹಲವಾರು ನವೀಕರಣ ಮಾಡಲಾಗಿದೆ. ಕಂಬಳ ಕ್ಷೇತ್ರಕ್ಕೆ ಸೆನ್ಸಾರ್ ಟೈಮಿಂಗ್ ಪರಿಚಯಿಸಿದ ಕಾರ್ಕಳದಲ್ಲಿ ಸ್ಕೈ ವೀವ್ ಸಂಸ್ಥೆ ನಡೆಸುತ್ತಿರುವ ತಂತ್ರಜ್ಞ ರತ್ನಾಕರ್ ನಾಯ್ಕ್ ಅವರು ಇದೀಗ ಮತ್ತೊಂದು ಪ್ರಯೋಗಕ್ಕೆ ಇಳಿದಿದ್ದಾರೆ. ಅದುವೆ ನಿಶಾನೆ ಮಾದರಿಯ ಟೈಮರ್.
ಪ್ರತಿಯೊಂದು ವಿಭಾಗದ ಕೋಣಗಳಿಗೆ ಕರೆ ಬಂದ ನಂತರ ಓಟ ಆರಂಭಿಸಲು ಸಮಯ ನಿಗದಿ ಮಾಡಲಾಗಿದೆ. ಆ ಸಮಯದೊಳಗೆ ಕೋಣಗಳನ್ನು ಅಣಿಗೊಳಿಸಿ ಓಟ ಪ್ರಾರಂಭಿಸಬೇಕು. ಆದರೆ ಹಲವು ಬಾರಿ ಇಲ್ಲಿ ಸಮಯಕ್ಕೆ ಸರಿಯಾಗಿ ಕೋಣಗಳನ್ನು ಅಣಿಗೊಳಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣದಿಂದ ಕೂಟ ತಡವಾಗುತ್ತಿದೆ. ಇದೀಗ ಜಿಲ್ಲಾ ಕಂಬಳ ಸಮಿತಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಹಗ್ಗ ಹಿರಿಯ ವಿಭಾಗಕ್ಕೆ 10 ನಿಮಿಷ, ಹಗ್ಗ ಕಿರಿಯ ವಿಭಾಗಕ್ಕೆ 7 ನಿಮಿಷ, ನೇಗಿಲು ಹಿರಿಯಕ್ಕೆ 8 ನಿಮಿಷ, ನೇಗಿಲು ಕಿರಿಯಕ್ಕೆ 6 ನಿಮಿಷ ಮತ್ತು ಅಡ್ಡ ಹಲಗೆ ವಿಭಾಗಕ್ಕೆ 10 ನಿಮಿಷಗಳ ಅವಕಾಶ ನೀಡಲಾಗಿದೆ
ಈ ಬಾರಿ ಕಟ್ಟುನಿಟ್ಟಿನ ನಿಯಮದ ಕಾರಣದಿಂದ ನಿಶಾನೆ ಮಾದರಿಯಲ್ಲಿ ಟೈಮರ್ ಅಳವಡಿಸಲಾಗುತ್ತಿದೆ. ಎಲ್ಲರಿಗೂ ಕಾಣುವಂತೆ ಗಂತಿನಲ್ಲಿ (ಓಟ ಆರಂಭವಾಗುವ ಜಾಗ) ಇದನ್ನು ಇರಿಸಲಾಗುತ್ತದೆ. ಪ್ರತಿ ಜೋಡಿ ಕರೆಗೆ ಬಂದ ನಂತರ ಇದರಲ್ಲಿ ಕೌಂಟ್ ಡೌನ್ ಆರಂಭವಾಗುತ್ತದೆ. ನಿಗದಿ ಮಾಡಿದ ಸಮಯ ಮುಗಿದಾಗಲೂ ಓಟ ಆರಂಭವಾಗದಿದ್ದರೆ ಸೈರನ್ ಮೂಲಕ ಎಚ್ಚರಿಕೆ ನೀಡುವ ಅವಕಾಶವಿದೆ. ಈ ಟೈಮರ್ ನ ನಿಯಂತ್ರಣ ಮಂಜೊಟ್ಟಿಯ (ಓಟ ಮುಗಿಯುವ ಜಾಗ) ಬಳಿ ಇರಲಿದೆ.
ವರ್ಚುವಲ್ ಬ್ಯಾರಿಕೇಡ್
ಈ ಬಾರಿಯ ಮತ್ತೊಂದು ಹೊಸ ವಿಚಾರವೆಂದರೆ ಅದು ವರ್ಚುವಲ್ ಬ್ಯಾರಿಕೇಡ್ ಅಥವಾ ಗೇಟ್. ಗಂತಿನಲ್ಲಿ ಕೋಣ ಬಿಡುವ ಜಾಗದಲ್ಲಿ ನಿಗದಿತ ಜಾಗಕ್ಕಿಂತ ಎದುರು ಹೋಗಿ ಓಟ ಆರಂಭವಾಗಬಾರದು ಎನ್ನುವುದಕ್ಕೆ ಇದನ್ನು ಆರಂಭಿಸಲಾಗಿದೆ. ಕೆಲವೊಮ್ಮೆ ಕೋಣವನ್ನು ಸ್ಥಳದಲ್ಲಿ ಅಣಿಗೊಳಿಸಲು ಕಷ್ಟವಾದಾಗ ಸ್ವಲ್ಪ ಸ್ವಲ್ಪವೇ ಎದುರು ಹೋಗುವುದು ವಾಡಿಕೆ. ಆದರೆ ಇದು ಮಿತಿ ಮೀರಬಾರದು ಎಂದು ಗಂತಿನಲ್ಲಿ ಎರಡು ಮೀಟರ್ ದೂರದಲ್ಲಿ ಸೆನ್ಸಾರ್ ಅಳವಡಿಸಲಾಗುತ್ತದೆ. ಈ ಸೆನ್ಸಾರ್ ದಾಟಿದಾಗ ಸಣ್ಣಗೆ ಒಂದು ಸೈರನ್ ಮೊಳಗುತ್ತದೆ. ಆ ಕೂಡಲೇ ಕೋಣಗಳನ್ನು ಹಿಡಿದವರು ಹಿಂದೆ ಬಂದು ಸರಿಯಾದ ಜಾಗದಲ್ಲಿ ಓಟಕ್ಕೆ ಅಣಿ ಮಾಡಬೇಕು.
ಫೋಟೋ ಫಿನಿಶ್ ತಂತ್ರಜ್ಞಾನ
ಸದ್ಯ ಕಂಬಳದಲ್ಲಿ ಸ್ಪರ್ಧೆಯ ಅಂತ್ಯಕ್ಕೆ ಬಳಸಲಾಗುತ್ತಿರುವ ಲೇಸರ್ ಫಿನಿಶಿಂಗ್ ಬದಲಿಗೆ ಕುದುರೆ ರೇಸ್ ನಲ್ಲಿ ಬಳಸುವಂತೆ ಫೋಟೋ ಫಿನಿಶ್ ತಂತ್ರಜ್ಞಾನ ಈ ಬಾರಿಯ ಕಂಬಳದಲ್ಲಿ ಜಾರಿಗೆ ಬರಲಿದೆ. ಸೀಸನ್ ನ ಮೊದಲ ಕಂಬಳ (ಪಣಪಿಲ) ದಲ್ಲಿ ಪ್ರಯೋಗ ನಡೆದು, ಮುಂದಿನ ಕಂಬಳಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.
ಲೇಸರ್ ಫಿನಿಶಿಂಗ್ ನಲ್ಲಿ 1/100 ನಿಖರತೆಯಲ್ಲಿ ಫಲಿತಾಂಶ ನೀಡಲಾಗುತ್ತಿತ್ತು. ಎರಡು ಕರೆಯ ಕೋಣಗಳ ನಡುವಿನ ಓಟದ ವೇಗದ ಅಂತರ 0.03 ಗಿಂತ ಕಡಿಮೆಯಿದ್ದರೆ 0.00 ಬರುತ್ತಿತ್ತು ಅಂದರೆ ಎರಡೂ ಕರೆಯ ಓಟಗಳ ಸಮಯ ಟೈ ಎಂದು ಬರುತ್ತಿತ್ತು. ಆದರೆ ಇದೀಗ ಫೋಟೋ ಫಿನಿಶಿಂಗ್ ತಂತ್ರಜ್ಞಾನದಲ್ಲಿ 1/100 ಬದಲಿಗೆ 1/1000 ನಿಖರತೆಯಲ್ಲಿ ಫಲಿತಾಂಶ ನೀಡಲಾಗುತ್ತದೆ. ಹೀಗಾಗಿ ಎರಡು ಓಟಗಳ ಅಂತರ 0.001 ರಷ್ಟು ಕಡಿಮೆಯಿದ್ದರೂ ಸ್ಪಷ್ಟ ಫಲಿತಾಂಶ ನೀಡಬಹುದು. ಹೀಗಾಗಿ ಈ ತಂತ್ರಜ್ಞಾನದಲ್ಲಿ ಓಟ ಸಮ-ಸಮ ಬರುವ ಅವಕಾಶ ತೀರಾ ಕಡಿಮೆ.
ಇದರೊಂದಿಗೆ ಫಿನಿಶಿಂಗ್ ಲೈನ್ ನಲ್ಲಿ ಕೋಣದ ಮೂಗಿನ ನೇರದಲ್ಲಿ ವರ್ಟಿಕಲ್ ಲೈನ್ ಕಾಣಿಸುವ ಚಿತ್ರವೂ ಸಿಗುತ್ತದೆ, ಅದರಲ್ಲಿ ಆ ಕೋಣಗಳ ಓಟದ ಟೈಮಿಂಗ್ ಕೂಡಾ ನಮೂದಿಸಲಾಗುತ್ತದೆ. ಇದು ಕೋಣಗಳನ್ನು ಮಾತ್ರ ಟ್ರ್ಯಾಕ್ ಮಾಡುತ್ತದೆ. ಕರೆಯ ಬಳಿಯ ಯಾವುದೇ ಇತರ ಅಂಶ ಇದಕ್ಕೆ ಅಡ್ಡಿ ಪಡಿಸುವುದಿಲ್ಲ. ಫಿನಿಶಿಂಗ್ ಫೋಟೋವನ್ನು ನೇರ ಪ್ರಸಾರಕ್ಕೂ ಒದಗಿಸಬಹುದು.