ಉಡುಪಿ: ಸ್ಕೂಟಿ ಸಮೇತ ಮಣ್ಣಿನಡಿ ಸಿಲುಕಿದ ಮಹಿಳೆ, ಜೀವ ರಕ್ಷಿಸಿದ ರಿಕ್ಷಾ ಚಾಲಕ.
Thursday, October 31, 2024
ಕುಂದಾಪುರ: ಮಣ್ಣು ತುಂಬಿದ ಲಾರಿ ಮಗುಚಿ ಬಿದ್ದಾಗ ಮಣ್ಣಿನಡಿಗೆ ಬಿದ್ದು ಮೇಲೇಳಲಾಗದೆ ಒದ್ದಾಡುತ್ತಿದ್ದ ಮಹಿಳೆಯನ್ನು ಸಮಾಜಸೇವಕ, ರಿಕ್ಷಾ ಚಾಲಕರೊಬ್ಬರು ಸಕಾಲದಲ್ಲಿ ರಕ್ಷಿಸಿದ್ದಾರೆ.
ಬುಧವಾರ ಮಧ್ಯಾಹ್ನ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿ ಒಳ ರಸ್ತೆಯ ತಿರುವಿನಲ್ಲಿ ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಒಂದು ಬದಿಗೆ ವಾಲಿ ಮಗುಚಿ ಬಿದ್ದಿತ್ತು. ಅದೇ ಸಂದರ್ಭದಲ್ಲಿ ಲಾರಿಯ ಪಕ್ಕದಲ್ಲೇ ಮಹಿಳೆ ಚಲಾಯಿಸುತ್ತಿದ್ದ ಸ್ಕೂಟಿಯೊಂದು ಸಾಗುತ್ತಿತ್ತು. ಈ ಸ್ಕೂಟಿಯ ಮೇಲೆ ಲಾರಿ ಮಗುಚಿ ಬಿದ್ದು, ಲಾರಿಯಲ್ಲಿದ್ದ ಮಣ್ಣಿನ ಅಡಿಯಲ್ಲಿ ಸ್ಕೂಟಿ ಸಮೇತ ಸವಾರೆ, ಸ್ಥಳೀಯ ನಿವಾಸಿ ಆರತಿ ಶೆಟ್ಟಿ ಸಿಲುಕಿಕೊಂಡರು. ಲಾರಿ ಚಾಲಕನಿಗೆ ಹೊರಬರಲು ಸಾಧ್ಯವಾಗದೆ ಕ್ಯಾಬಿನ್ ಒಳಗಡೆಯೇ ಸಿಲುಕಿಕೊಂಡಿದ್ದರು.
ಅದೇ ದಾರಿಯಾಗಿ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಾಜಸೇವಕ ಕೋಡಿ ಅಶೋಕ್ ಪೂಜಾರಿ ಅವರ ಕಣ್ಣೆದುರೇ ಘಟನೆ ನಡೆದಿದ್ದು, ಏನು ಮಾಡಬೇಕೆಂದು ತೋಚದೇ ಸಹಾಯಕ್ಕಾಗಿ ಕೂಗಿಕೊಂಡರು. ಯಾರ ಸುಳಿವೂ ಕಾಣದಾಗ ಮಣ್ಣಿನಲ್ಲಿ ಮುಖ ಸಂಪೂರ್ಣ ಮುಚ್ಚಿ ಹೋಗಿದ್ದ ಮಹಿಳೆಯನ್ನು ಕೈಗಳಿಂದಲೇ ಮಣ್ಣನ್ನು ಅಗೆದು ತೆಗೆದು ಯುವತಿಯ ತಲೆಯನ್ನು ಮಣ್ಣಿನಿಂದ ಮೊದಲು ಮೇಲಕ್ಕೆತ್ತಿದರು.
ಅನಂತರ ಬಂದ ಸ್ಥಳೀಯರ ಸಹಕಾರದಿಂದ ಲಾರಿಯ ಮಣ್ಣಿನಡಿಯಿಂದ ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕಳುಹಿಸಲಾಯಿತು. ಬಳಿಕ ಸ್ಕೂಟಿಯನ್ನು ತೆರವುಗೊಳಿಸಲಾಯಿತು.