ಜಾರ್ಖಂಡ್ ಅಸೆಂಬ್ಲಿ ಚುನಾವಣೆಗೆ ಬಿಜೆಪಿಯಿಂದ ಗ್ಯಾರಂಟಿ ಘೋಷಣೆ ; ಪ್ರತಿ ಮಹಿಳೆಗೆ ತಿಂಗಳಿಗೆ 2100 ರೂ. ಮಾಸಾಶನ, ವರ್ಷಕ್ಕೆರಡು ಸಿಲಿಂಡರ್ ಉಚಿತ !
Sunday, November 3, 2024
ನವದೆಹಲಿ, ನ.3: ಜಾರ್ಖಂಡ್ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಘೋಷಣೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಎಲ್ಲ ಮಹಿಳೆಯರಿಗೂ ಪ್ರತಿ ತಿಂಗಳು 2100 ರೂ. ಮಾಸಾಶನ ನೀಡಲಾಗುವುದು ಎಂದು ಕರ್ನಾಟಕದ ಕಾಂಗ್ರೆಸ್ ಸರಕಾರದ ಮಾದರಿಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
ಇದಲ್ಲದೆ, ಪ್ರತಿ ಮನೆಗೂ 500 ರೂ.ಗೆ ಗ್ಯಾಸ್ ಸಿಲಿಂಡರ್ ಜೊತೆಗೆ ವರ್ಷಕ್ಕೆ ಎರಡು ಸಿಲಿಂಡರ್ ಉಚಿತ ಎನ್ನುವ ಘೋಷಣೆಯನ್ನೂ ಮಾಡಿದ್ದಾರೆ. ಬುಡಕಟ್ಟು ಜನರ ಜಾಗವನ್ನು ನುಸುಳುಕೋರರು ಕಬಳಿಸಿದ್ದರೆ ಅದನ್ನು ಮತ್ತೆ ವಶಕ್ಕೆ ಪಡೆದು ಬುಡಕಟ್ಟು ಜನರಿಗೆ ನೀಡಲಾಗುವುದು. ನುಸುಳುಕೋರರು ಬುಡಕಟ್ಟು ಜನರನ್ನು ಮದುವೆಯಾಗಿದ್ದರೆ, ಅಂತಹ ಕುಟುಂಬಗಳಿಗೆ ಬುಡಕಟ್ಟು ಜನರ ಸೌಲಭ್ಯ ನೀಡಲಾಗುವುದಿಲ್ಲ.
ಏಕರೂಪದ ನಾಗರಿಕ ಸಂಹಿತೆ ವ್ಯಾಪ್ತಿಯಿಂದ ಬುಡಕಟ್ಟು ಜನರನ್ನು ಹೊರತು ಪಡಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಮಂದಿಗೆ ಸ್ವೋದ್ಯೋಗಕ್ಕೆ ಆದ್ಯತೆ ಕಲ್ಪಿಸಲಾಗುವುದು. ರಾಜ್ಯದಲ್ಲಿ 2.87 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸರಕಾರ ಆಡಳಿತಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿ ಈ ಬಗ್ಗೆ ಆದೇಶ ಜಾರಿಗೊಳಿಸಿ, 2025ರ ನವೆಂಬರ್ 25ರೊಳಗೆ ಒಂದೂವರೆ ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಬಿಜೆಪಿಯಿಂದ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.