ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಬೆಂಕಿ; ಕಿಟಕಿಯಿಂದ ಹಾರಿ ಬಚಾವ್ ಆದ ಪ್ರಯಾಣಿಕರು
Sunday, November 3, 2024
ಹತ್ರಾಸ್: ಖಾಸಗಿ ಸ್ಲೀಪರ್ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಸದಾಬಾದ್ ಕೊತ್ವಾಲಿ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯ ಮಿಧವಲಿ ಗ್ರಾಮದ ಬಳಿ ಭಾನುವಾರ ನಡೆದಿದೆ. ಬಸ್ ದೆಹಲಿಯಿಂದ ಪ್ರಯಾಣಿಕರನ್ನು ತುಂಬಿಕೊಂಡು ಬಿಹಾರಕ್ಕೆ ಸಂಚರಿಸುತ್ತಿತ್ತು. ಮಿಧವಲಿ ಗ್ರಾಮ ಸಮೀಪ ಬಸ್‌ನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಲಗೇಜ್‌ಗೆ ಬೆಂಕಿ ಹೊತ್ತಿಕೊಂಡಿದೆ.
ಏಕಾಏಕಿ ಬೆಂಕಿ ಕಾಣಿಸಿಕೊಂಡ ಕಾರಣ ಪ್ರಯಾಣಿಕರು ಕಿಟಕಿಯಿಂದ ಹಾರಿದ್ದಾರೆ. ಕಿರುಚಾಟ, ಕೂಗಾಟ ಕೇಳಿ ಸ್ಥಳೀಯರು ಬಂದು ಕೆಲವು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಬೆಂಕಿ ಆರಿಸಿದರು. ಆದರೆ, ಅಷ್ಟರೊಳಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ನಂತರ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ದೊರೆತಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಿಂದ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಾಹನಗಳು ಎಲ್ಲೆಂದರಲ್ಲಿ ನಿಂತಿದ್ದರಿಂದ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ವಾಹನ ಸಂಚಾರ ಸುಗಮಗೊಳಿಸಿದರು.