ಮುಂಬೈ ಪೊಲೀಸ್ ಅಧಿಕಾರಿಗಳೆಂದು ಫೋನ್ ಕರೆ, ಅರೆಸ್ಟ್ ವಾರೆಂಟ್ ಬೆದರಿಕೆ ; ಮೂರು ದಿನದಲ್ಲಿ 30 ಲಕ್ಷ ಹಣ ಕಳಿಸಿಕೊಟ್ಟು ಮೋಸಕ್ಕೀಡಾದ ವ್ಯಕ್ತಿ !

ಮುಂಬೈ ಪೊಲೀಸ್ ಅಧಿಕಾರಿಗಳೆಂದು ಫೋನ್ ಕರೆ, ಅರೆಸ್ಟ್ ವಾರೆಂಟ್ ಬೆದರಿಕೆ ; ಮೂರು ದಿನದಲ್ಲಿ 30 ಲಕ್ಷ ಹಣ ಕಳಿಸಿಕೊಟ್ಟು ಮೋಸಕ್ಕೀಡಾದ ವ್ಯಕ್ತಿ !

ಮಂಗಳೂರು, ನ.8: ಮುಂಬೈನಲ್ಲಿ ನಿಮ್ಮ ವಿರುದ್ಧ ಕೇಸು ದಾಖಲಾಗಿದೆ ಎಂದು ಮುಂಬೈ ಪೊಲೀಸರ ಸೋಗಿನಲ್ಲಿ ಅಪರಿಚಿತರು ಕರೆ ಮಾಡಿ ಮಂಗಳೂರಿನ ವ್ಯಕ್ತಿಯಿಂದ ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಹಣವನ್ನು ಪೀಕಿಸಿಕೊಂಡಿದ್ದು, ಹಣ ಕಳಕೊಂಡ ಅಮಾಯಕ ವ್ಯಕ್ತಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅ.19ರಂದು ಈ ವ್ಯಕ್ತಿಗೆ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ನಿಮ್ಮ ಮೇಲೆ ಮುಂಬೈನ ಶಿವಾಜಿ ಇಂಟರ್ನ್ಯಾಶನಲ್ ಏರ್ಪೋರ್ಟ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ನಿಮಗೆ ಮುಂಬೈ ಶಹರ ಠಾಣೆಯಿಂದ ಪೊಲೀಸರು ಕರೆ ಮಾಡುತ್ತಾರೆ ಎಂದು ತಿಳಿಸಿದ್ದ. ಅದರಂತೆ, ಬೆಳಗ್ಗೆ 11 ಗಂಟೆಗೆ ಪೊಲೀಸ್ ಯೂನಿಫಾರ್ಮ್ ಧರಿಸಿದ್ದ ವ್ಯಕ್ತಿಯೊಬ್ಬ ವಾಟ್ಸಾಪ್ ಗೆ ವಿಡಿಯೋ ಕರೆ ಮಾಡಿದ್ದು, ನಿಮ್ಮ ಮೊಬೈಲ್ ನಂಬರನ್ನು ಬಳಸಿ ವಿವೇಕ್ ದಾಸ್ ಎಂಬಾತ ಎಸ್ ಬಿಐ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು 3.9 ಕೋಟಿ ವಂಚನೆ ಮಾಡಿದ್ದಾನೆ. ಆ ಪೈಕಿ 38 ಲಕ್ಷ ರೂ.ವನ್ನು ನಿಮಗೆ ಕಮಿಷನ್ ರೂಪದಲ್ಲಿ ನೀಡಿದ್ದಾಗಿ ತಿಳಿಸಿದ್ದಾನೆ. ಆತನನ್ನು ವಶಕ್ಕೆ ಪಡೆದಿದ್ದು, ನಿಮ್ಮ ವಿರುದ್ಧ ವಾರೆಂಟ್ ಜಾರಿಯಾಗಿದೆ ಎಂದು ನಂಬಿಸುತ್ತಾನೆ.

ತನಗೇನೂ ಅಂಥ ವಹಿವಾಟು ಬಗ್ಗೆ ತಿಳಿದಿಲ್ಲ ಎಂದರೂ, ನಿಮ್ಮನ್ನು ನಾವು ಅರೆಸ್ಟ್ ಮಾಡುತ್ತೇವೆ. ವಿವೇಕ್ ದಾಸ್ ಕಡೆಯ ವ್ಯಕ್ತಿಗಳು ನಿಮಗೆ ತೊಂದರೆ ಕೊಡುತ್ತಾರೆ, ನೀವು ಸಹಕರಿಸಿದರೆ ನಾವು ಸಹಾಯ ಮಾಡುತ್ತೇವೆ ಎಂದು ನಂಬಿಸಿದ್ದಾರೆ. ಇಲ್ಲದಿದ್ದಲ್ಲಿ ನಿಮ್ಮಲ್ಲಿರುವ ಎಲ್ಲ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವುದಾಗಿ ಹೆದರಿಸಿದ್ದಾರೆ. ಅದರಂತೆ, ತನಿಖೆಗೆ ಸಹಕರಿಸುತ್ತೇನೆಂದು ಹೇಳಿದ ಈ ವ್ಯಕ್ತಿ ಅಪರಿಚಿತರು ನೀಡಿದ ಬ್ಯಾಂಕ್ ಖಾತೆಗೆ ಅ.21ರಂದು ತನ್ನ ಏಕ್ಸಿಸ್ ಬ್ಯಾಂಕ್ ಖಾತೆಯಿಂದ 2.65 ಲಕ್ಷ ರೂ. ಕಳಿಸುತ್ತಾರೆ. ಆನಂತರ, ಅ.22ರಂದು ತನ್ನ ಎಸ್ ಬಿಐ ಖಾತೆಯಿಂದ 14 ಲಕ್ಷ ಹಾಗೂ 23ರಂದು ಕರ್ನಾಟಕ ಬ್ಯಾಂಕ್ ಖಾತೆಯಿಂದ 14 ಲಕ್ಷ ವರ್ಗಾವಣೆ ಮಾಡಿದ್ದಾರೆ. ಸುದೀಪ್, ರಾಜ್ ದೀಪ್ ಸಿಂಗ್, ಗುರ್ಪಿಂದರ್ ಸಿಂಗ್ ಎಂಬವರ ಹೆಸರಿನಲ್ಲಿದ್ದ ಮೂರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ರವಾನೆಯಾಗಿದೆ.

ಹಣ ಕಳಿಸಿದ ಬಳಿಕ ಆರೋಪಿಗಳು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಹಣ ಕಳಕೊಂಡ ಅಮಾಯಕ ವ್ಯಕ್ತಿ ಮೋಸದ ಅರಿವಾಗುತ್ತಲೇ ಮಂಗಳೂರಿನ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article