ಮಂಗಳೂರು:ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಜಾರ್ಖಂಡ್ ಮೂಲದ ಬಾಲಕಿಯ ಅತ್ಯಾಚಾರಗೈದು ಕೊಲೆ ; ಮೂವರು ಕಾರ್ಮಿಕರಿಗೆ ಗಲ್ಲು ಶಿಕ್ಷೆ, ಒಬ್ಬ ಆರೋಪಿ ನಾಪತ್ತೆ, ಪೋಕ್ಸೋ ಕೇಸಿನಲ್ಲಿ ಮೊದಲ ಬಾರಿಗೆ ಗರಿಷ್ಠ ಶಿಕ್ಷೆ ತೀರ್ಪು

ಮಂಗಳೂರು:ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಜಾರ್ಖಂಡ್ ಮೂಲದ ಬಾಲಕಿಯ ಅತ್ಯಾಚಾರಗೈದು ಕೊಲೆ ; ಮೂವರು ಕಾರ್ಮಿಕರಿಗೆ ಗಲ್ಲು ಶಿಕ್ಷೆ, ಒಬ್ಬ ಆರೋಪಿ ನಾಪತ್ತೆ, ಪೋಕ್ಸೋ ಕೇಸಿನಲ್ಲಿ ಮೊದಲ ಬಾರಿಗೆ ಗರಿಷ್ಠ ಶಿಕ್ಷೆ ತೀರ್ಪು


ಮಂಗಳೂರು: ಉಳಾಯಿಬೆಟ್ಟು ಬಳಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಜಾರ್ಖಂಡ್ ಮೂಲದ ಕುಟುಂಬಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆಗೈದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಮಂಗಳೂರಿನ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದ ಮಧ್ಯಪ್ರದೇಶ ರಾಜ್ಯದ ಪನ್ನಾ ಜಿಲ್ಲೆ ಪನಾಯಿ ತೆಹ್ಸಿಲ್ ನಿವಾಸಿ ಜಯಸಿಂಗ್ ಆದಿವಾಸಿ (21), ಅದೇ ಜಿಲ್ಲೆಯ ನಿವಾಸಿ ಮುಕೇಶ್ ಸಿಂಗ್ (20) ಮತ್ತು ಜಾರ್ಖಂಡ್ ರಾಜ್ಯದ ರಾಂಚಿ ನಿವಾಸಿ ಮನೀಶ್ ತಿರ್ಕಿ (33) ಗಲ್ಲು ಶಿಕ್ಷೆಗೊಳಗಾದವರು.

2021ರ ನವೆಂಬರ್ 20ರಂದು ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಘಟನೆ ನಡೆದಿತ್ತು. ಸಂಜೆಯ ವೇಳೆಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಕುಟುಂಬದ ಎಂಟು ವರ್ಷದ ಬಾಲಕಿ ಕಾಣೆಯಾಗಿದ್ದರಿಂದ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಬಳಿಕ ಹುಡುಕಾಟ ನಡೆಸಿದಾಗ, ರಾತ್ರಿ ವೇಳೆ ಫ್ಯಾಕ್ಟರಿ ಹಿಂಭಾಗದ ಚರಂಡಿಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಬಾಲಕಿಯನ್ನು ಫ್ಯಾಕ್ಟರಿಯಲ್ಲಿದ್ದವರೇ ಅತ್ಯಾಚಾರಗೈದು ಕೊಲೆಗೈದಿದ್ದ ಬಗ್ಗೆ ಅನುಮಾನ ಬಂದು ತನಿಖೆ ನಡೆಸಲಾಗಿತ್ತು. ತನಿಖೆ ಸಂದರ್ಭದಲ್ಲಿ ಶಂಕಿತ ಆರೋಪಿಗಳು ನಾಪತ್ತೆಯಾಗಿದ್ದು, ಬಳಿಕ ನಾಲ್ವರನ್ನು ಬಂಧಿಸಲಾಗಿತ್ತು. ಜಯ್ ಸಿಂಗ್, ಮುಕೇಶ್ ಸಿಂಗ್ ಮತ್ತು ಮನೀಶ್ ತಿರ್ಕೆ ಕೃತ್ಯ ಎಸಗಿದ್ದರೆ, ಇವರಿಗೆ ಮಧ್ಯಪ್ರದೇಶ ಪನ್ನಾ ಜಿಲ್ಲೆಯ ನಿವಾಸಿ ಮುನೀಮ್ ಸಿಂಗ್ ಸಹಕಾರ ನೀಡಿದ್ದ.

ಭಾನುವಾರ ಶಾಲೆಗೆ ರಜೆ ದಿನವಾಗಿದ್ದರಿಂದ ಟೈಲ್ಸ್ ಫ್ಯಾಕ್ಟರಿಯ ಹೊರಗಡೆ ಆಟವಾಡುತ್ತಿದ್ದ ಬಾಲಕಿಯನ್ನು ಚಾಕ್ಲೇಟ್ ಕೊಡಿಸುವ ಆಮಿಷವೊಡ್ಡಿ ಕಟ್ಟಿಗೆಯನ್ನು ರಾಶಿ ಹಾಕಿದ್ದ ಕೊಠಡಿಗೆ ಆರೋಪಿಗಳು ಕರೆದೊಯ್ದಿದ್ದರು. ಅಲ್ಲಿ ಸಿಸಿಟಿವಿ ಇಲ್ಲದ ಕಾರಣ ಅದೇ ಜಾಗವನ್ನು ಆರೋಪಿಗಳು ಆಯ್ದುಕೊಂಡಿದ್ದರು. ಅಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಒಬ್ಬರ ನಂತರ ಮತ್ತೊಬ್ಬರಂತೆ ಸಂಭೋಗ ನಡೆಸಿದ್ದು, ಆಕೆ ನೋವಿನಿಂದ ಚೀರಾಡಿದರೂ ಬಿಟ್ಟಿರಲಿಲ್ಲ. ಬಾಲಕಿಯ ಬೊಬ್ಬೆ ಹೊರಗಿನವರಿಗೆ ಕೇಳುತ್ತದೆ ಎಂದು ಆಕೆಯ ಬಾಯಿಗೆ ಕೈಯಲ್ಲಿ ಮುಚ್ಚಿದ್ದರು. ಈ ವೇಳೆ, ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಹೊರಗಡೆಯಿಂದ ಯಾರಾದ್ರೂ ಬರುತ್ತಾರೆಯೇ ಎಂದು ಬಾಗಿಲಿನಲ್ಲಿ ಕಾದು ನಿಂತಿದ್ದ. ಆನಂತರ, ಬಾಲಕಿ ಚೀರಾಡುತ್ತಾಳೆ ಮತ್ತು ಹೊರಗೆ ಬಂದು ಕೃತ್ಯದ ಬಗ್ಗೆ ಬಾಯಿ ಬಿಟ್ಟಲ್ಲಿ ತಮಗೆ ಅಪಾಯ ಎಂದು ಆಕೆಯ ಕುತ್ತಿಗೆ ಹಿಚುಕಿ ಕೊಲೆ ಮಾಡಿದ್ದರು.
ಟೈಲ್ಸ್ ಫ್ಯಾಕ್ಟರಿಯಲ್ಲಿ ಉತ್ತರ ಭಾರತೀಯರೇ ಹೆಚ್ಚು ಕಾರ್ಮಿಕರಾಗಿದ್ದು, ಫ್ಯಾಕ್ಟರಿ ಬಳಿಯಲ್ಲೇ ಅವರಿಗೆ ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅಕ್ಕಪಕ್ಕದಲ್ಲಿ ಕೊಠಡಿ ಇದ್ದುದರಿಂದ ಬಾಲಕಿ ಎಲ್ಲರಿಗೂ ಪರಿಚಿತಳಾಗಿದ್ದಳು. ಬಾಲಕಿಯ ಹೆತ್ತವರು ಕೆಲಸಕ್ಕೆ ಹೋಗಿದ್ದರಿಂದ ಇದೇ ಸಂದರ್ಭದಲ್ಲಿ ಕೆಲಸಕ್ಕೆ ರಜೆಯನ್ನು ಪಡೆದಿದ್ದ ಕಾರ್ಮಿಕರು ಅತ್ಯಾಚಾರ ಎಸಗುವ ಉದ್ದೇಶದಿಂದ ಬಾಲಕಿಯನ್ನು ಪುಸಲಾಯಿಸಿ ಕೊಠಡಿಗೆ ಕರೆದೊಯ್ದು ಕೃತ್ಯ ಎಸಗಿದ್ದರು. ಘಟನೆ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಇನ್ಸ್ ಪೆಕ್ಟರ್ ಜಾನ್ಸನ್ ಡಿಸೋಜ ನೇತೃತ್ವದ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ 30 ಸಾಕ್ಷಿಗಳು, 75 ದಾಖಲೆಗಳನ್ನು ಪರಿಗಣಿಸಿ ಮೂವರು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ಜೊತೆಗೆ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ 1.20 ಲಕ್ಷ ರೂಪಾಯಿ ದಂಡ ತೆರುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದಾನೆ. ಹಾಗಾಗಿ, ಆತನಿಗೆ ಶಿಕ್ಷೆ ವಿಧಿಸಲಾಗಿಲ್ಲ. ಇದಲ್ಲದೆ, ದಂಡ ಪ್ರಕ್ರಿಯೆ ಸಂಹಿತೆ ಕಲಂ 357 (ಎ) ಪ್ರಕಾರ ಮತ್ತು ಸಂಸ್ತಸ್ತರ ಪರಿಹಾರ ಯೋಜನೆಯಡಿ ಮೃತ ಬಾಲಕಿಯ ತಾಯಿಗೆ ಹೆಚ್ಚುವರಿಯಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 3.80 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶ ಮಾಡಿದೆ.

ಆರಂಭದಲ್ಲಿ ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟರಮಣ ಸ್ವಾಮಿ ಸಂತ್ರಸ್ತರ ಪರವಾಗಿ ವಾದ ಮಂಡಿಸಿದ್ದರು. ಆನಂತರ, ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ಅವರು ಸಂತ್ರಸ್ತರ ಪರವಾಗಿ ವಾದಿಸಿದ್ದು, ಗರಿಷ್ಠ ಶಿಕ್ಷೆಯಾಗುವಂತೆ ಮಾಡಿದ್ದಾರೆ. ಮಂಗಳೂರಿನ ಪೋಕ್ಸೋ ನ್ಯಾಯಾಲಯದಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟ ಮೊದಲ ಪ್ರಕರಣ ಇದಾಗಿದೆ. ಪೋಕ್ಸೋ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶೆ ಮಾನು ಕೆ.ಎಸ್. ಅವರು ಶಿಕ್ಷೆ ವಿಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article