ಛತೀಸಗಢ : ಹಳ್ಳಿಗರಂತೆ ವೇಷ ಧರಿಸಿ ಬಂದು ದಾಳಿ ಮಾಡಿದ ನಕ್ಸಲರು: ಇಬ್ಬರು ಯೋಧರಿಗೆ ಗಂಭೀರ ಗಾಯ
Sunday, November 3, 2024
ಛತೀಸಗಢ : ಹಳ್ಳಿಗರಂತೆ ವೇಷ ಧರಿಸಿ ಬಂದು ದಾಳಿ ಮಾಡಿದಮಾವೋವಾದಿಗಳು ಹರಿತ ಆಯುಧಗಳಿಂದ ಇಬ್ಬರು ಯೋಧರ ಮೇಲೆ ದಾಳಿ ಮಾಡಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ಇಲ್ಲಿನ ಜಾಗರಗುಂದದ ವಾರದ ಮಾರುಕಟ್ಟೆಯಲ್ಲಿ ಕರ್ತವ್ಯ ನಿರತ ಇಬ್ಬರು ಯೋಧರ ಮೇಲೆ ಹಳ್ಳಿಗರಂತೆ ವೇಷ ಧರಿಸಿ ಬಂದ ಮಾವೋವಾದಿಗಳು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಡಿಆರ್‌ಜಿ ಯೋಧರಾದ ಕರಟಮ್ ದೇವ ಮತ್ತು ಸೋಧಿ ಕನ್ನ ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಧರನ್ನು ಏರ್ಲಿಫ್ಟ್ ಮಾಡಿ ರಾಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗರಗುಂದ ಮಾರುಕಟ್ಟೆಯಲ್ಲಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಇಬ್ಬರು ಯೋಧರ ಮೇಲೆ ಮಾವೋವಾದಿಗಳು ಹರಿತ ಆಯುಧಗಳಿಂದ ದಾಳಿ ಮಾಡಿ ಅವರಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು, ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ನಕ್ಸಲರ ದಾಳಿಯನ್ನು ಖಚಿತಪಡಿಸಿದ್ದಾರೆ.ಕೃತ್ಯ ಎಸಗಿದ ಬಳಿಕ ಮಾವೋವಾದಿಗಳು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಯೋಧರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ