ಭಾರತದ ಕಮಲಕ್ಕ ಬೌಲ್ಡ್ ; ಅಮೆರಿಕಕ್ಕೆ ಮತ್ತೆ ಡೋನಾಲ್ಡ್, ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದು ಬೀಗಿದ ಟ್ರಂಪ್, ಸ್ವರ್ಣ ಯುಗದ ಭರವಸೆಯಿತ್ತ ಉದ್ಯಮ ದೊರೆ
Wednesday, November 6, 2024
ವಾಶಿಂಗ್ಟನ್: ಅಮೆರಿಕ ಗಣರಾಜ್ಯದ 47ನೇ ಅಧ್ಯಕ್ಷರಾಗಿ 76ರ ಹರೆಯದ ಡೋನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ್ದಾರೆ. ಭಾರೀ ಪೈಪೋಟಿಯಿಂದ ಕೂಡಿದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗಿಂತ ಸ್ಪಷ್ಟ ಮುನ್ನಡೆ ಪಡೆದು ಗೆಲವು ಸಾಧಿಸಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 538 ಇಲೆಕ್ಟೋರಲ್ ಮತಗಳ ಪೈಕಿ 270 ಮತಗಳನ್ನು ಪಡೆದವರು ವಿಜಯ ಆಗುತ್ತಾರೆ. ಅದರಂತೆ, ಭಾರತೀಯ ಕಾಲಮಾನ 2.50ರ ಮಾಹಿತಿ ಪ್ರಕಾರ ಡೊನಾಲ್ಡ್ ಟ್ರಂಪ್ 267 ಮತಗಳನ್ನು ಪಡೆದಿದ್ದರೆ, ಕಮಲಾ ಹ್ಯಾರಿಸ್ 224 ಮತಗಳನ್ನು ಗಳಿಸಿದ್ದಾರೆ. ಜಯ ಖಚಿತವಾಗುತ್ತಿದ್ದಂತೆ ಕ್ಯಾಲಿಫೋರ್ನಿಯಾ, ವಾಷಿಂಗ್ಟನ್ ಡಿಸಿ ಸೇರಿದಂತೆ ಅಮೆರಿಕದ ನಗರಗಳಲ್ಲಿ ಡೊನಾಲ್ಡ್ ಪರವಾಗಿ ವಿಜಯೋತ್ಸವ ಆಚರಣೆ ಕಂಡುಬಂತು.
ಪೆನ್ಸಿಲ್ವೇನಿಯಾ, ಜೋರ್ಜಿಯಾ, ನಾರ್ತ್ ಕೆರೋಲಿನಾ, ಟೆಕ್ಸಾಸ್, ಫ್ಲೋರಿಡಾ, ಇಂಡಿಯಾನ, ಕೆಂಟುಕಿ ಸೇರಿದಂತೆ ಸುಮಾರು 30 ರಾಜ್ಯಗಳಲ್ಲಿ ಡೋನಾಲ್ಡ್ ಟ್ರಂಪ್ ಪರವಾಗಿ ಜನರು ಮತ ಚಲಾಯಿಸಿದ್ದಾರೆ. ಇದೇ ವೇಳೆ, ಭಾರತ ಮೂಲದ ಕಮಲಾ ಹ್ಯಾರಿಸ್ ಪರವಾಗಿ 20 ರಾಜ್ಯಗಳಲ್ಲಿ ಜನರು ಮತ ಚಲಾಯಿಸಿದ್ದಾರೆ. ಇಲೆಕ್ಟೋರಲ್ ಪ್ರತಿನಿಧಿಗಳು ಅಮೆರಿಕದಲ್ಲಿ ಆ ಪ್ರದೇಶ ಜನರನ್ನು ಪ್ರತಿನಿಧಿಸಲಿದ್ದಾರೆ. 2020ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಪರವಾಗಿ 306 ಮತಗಳು ಬಿದ್ದಿದ್ದರೆ, ಡೊನಾಲ್ಡ್ ಟ್ರಂಪ್ ಪರವಾಗಿ 224 ಮತಗಳು ಚಲಾವಣೆಯಾಗಿದ್ದವು.
ಮಂಗಳವಾರ ಸಂಜೆ ಭಾರತೀಯ ಕಾಲಮಾನ 6 ಗಂಟೆಯಿಂದ ಶುರುವಾದ ಮತದಾನ ಇಂದು ಬುಧವಾರ ಬೆಳಗ್ಗೆ 7 ಗಂಟೆ ವರೆಗೆ ನಡೆದಿತ್ತು. ಆನಂತರ, ಮತ ಎಣಿಕೆ ಶುರುವಾಗಿದ್ದು, ಮಧ್ಯಾಹ್ನ ಹೊತ್ತಿಗೆ ಬಹುತೇಕ ಡೊನಾಲ್ಡ್ ಟ್ರಂಪ್ ಪರವಾಗಿ ಫಲಿತಾಂಶ ತಿರುಗಿದೆ. ಸಮೀಕ್ಷೆಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಬಗ್ಗೆ ಸುಳಿವುಗಳಿದ್ದವು. ಕಮಲಾ ಹ್ಯಾರಿಸ್ ಗೆಲುವು ಸಾಧಿಸುತ್ತಿದ್ದರೆ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆ ಪಡೆಯುತ್ತಿದ್ದರು.
ಗೆಲುವಿನ ದಡ ಸೇರುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಫ್ಲೋರಿಡಾ ನಗರದ ವೆಸ್ಟ್ ಪಾಮ್ ಬೀಚ್ ನಲ್ಲಿ ನೆರೆದವರನ್ನುದ್ದೇಶಿಸಿ ಭಾಷಣ ಮಾಡಿದ್ದು, ಅಮೆರಿಕದ ಜನರಿಗೆ ಸ್ವರ್ಣ ಯುಗ ತೋರಿಸುತ್ತೇನೆ ಎಂದಿದ್ದಾರೆ. ಅಮೆರಿಕದ ಜನರು ನನಗೆ ಅಭೂತಪೂರ್ವ ಜನಾದೇಶ ನೀಡಿದ್ದಾರೆ. ಅಮೆರಿಕವನ್ನು ಮತ್ತೆ ಗ್ರೇಟ್ ಮಾಡುವ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು. ತನ್ನ ಮೇಲಾದ ಗುಂಡಿನ ದಾಳಿಯನ್ನು ನೆನಪಿಸಿದ ಟ್ರಂಪ್, ಅಮೆರಿಕವನ್ನು ರಕ್ಷಣೆ ಮಾಡುವುದಕ್ಕಾಗಿ ದೇವರು ನನ್ನನ್ನು ಗುಂಡಿನ ದಾಳಿಯಿಂದ ಪಾರು ಮಾಡಿದ್ದಾನೆ. ದೇಶವನ್ನು ಮತ್ತೆ ದೊಡ್ಡಣ್ಣ ಮಾಡುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ.
2016ರಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್ ಅವರ ಬದಲಾಗಿ ಡೆಮಾಕ್ರಟಿಕ್ ಪಕ್ಷದಿಂದ ಹಿಲರಿ ಕ್ಲಿಂಟನ್ ಸ್ಪರ್ಧಿಸಿ ಸೋತು ಟ್ರಂಪ್ ಅಧ್ಯಕ್ಷರಾಗಿದ್ದರು. 2020ರಲ್ಲಿ ಜೋ ಬಿಡೆನ್ ಎದುರು ಸೋತಿದ್ದ ಟ್ರಂಪ್ ಈ ಬಾರಿ ಮತ್ತೊಬ್ಬ ಮಹಿಳೆಯ ಎದುರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಡೋನಾಲ್ಡ್ ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆ ಪ್ರಧಾನಿ ಮೋದಿ ಸೇರಿದಂತೆ ಜಾಗತಿಕ ನಾಯಕರು ಶುಭಾಷಯ ಹೇಳಿದ್ದಾರೆ. ಇತ್ತ ಭಾರತದ ಷೇರು ಮಾರುಕಟ್ಟೆಯೂ ಟ್ರಂಪ್ ಗೆಲುವಿನೊಂದಿಗೆ ಜಿಗಿತ ಕಂಡಿದೆ. ಜಗತ್ತಿನ ಅತಿ ಶ್ರೀಮಂತ ಎಲಾನ್ ಮಸ್ಕ್, ಹೊಸ ನಕ್ಷತ್ರ ಹುಟ್ಟಿದೆ ಎಂದು ಉದ್ಗಾರ ತೆಗೆದಿದ್ದಾರೆ. ಈ ಚುನಾವಣೆಯಲ್ಲಿ ಎಲಾನ್ ಮಸ್ಕ್, ಡೊನಾಲ್ಡ್ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು.