ಮಂಗಳೂರು:ಸಂತ ಅಲೋಸಿಯಸ್ ಕಾಲೇಜಿನ ಯುವ ಉಪನ್ಯಾಸಕಿ ನಿಧನ; ಐದು ಜನರಿಗೆ ಅಂಗಾಂಗ ದಾನ
Wednesday, November 13, 2024
ಮಂಗಳೂರು: ನಗರದ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಯುವ ಉಪನ್ಯಾಸಕಿಯಾಗಿದ್ದ ಗ್ಲೋರಿಯಾ ಆಶಾ ರೋಡ್ರಿಗಸ್ (23) ಅವರು ಕಾಲೇಜಿನ ಮೆಟ್ಟಿಲಿನಲ್ಲಿ ಅಕಸ್ಮಾತ್ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದವರು ಮೃತಪಟ್ಟಿದ್ದಾರೆ.
ಗ್ರೇಶನ್ ಅಲೆಕ್ಸ್, ಬಟ್ಟೆ ಪಡು ಪೇರಾರ ನಿವಾಸಿ
ರೋಡ್ರಿಗಸ್ ಮತ್ತು ಗ್ರೆಟ್ಟಾ ಪ್ಲೇವಿಯಾ ದಂಪತಿಯ ಪುತ್ರಿಯಾಗಿರುವ ಗ್ಲೋರಿಯಾ ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪೂರೈಸಿ ಕೆಲಸಕ್ಕೆ ಸೇರಿದ್ದರು.
ನ.9ರಂದು ಕಾಲೇಜಿನಲ್ಲಿ ಮೆಟ್ಟಿಲು ಇಳಿಯುತ್ತಿದ್ದಾಗ ತಲೆಸುತ್ತು ಬಂದು ಅಕಸ್ಮಾತ್ ಬಿದ್ದು ತಲೆಗೆ ಪೆಟ್ಟು ಆಗಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಮೃತಪಟ್ಟ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರ ಅಂಗಾಂಗಳನ್ನು ಐವರಿಗೆ ದಾನ ಮಾಡಲಾಗಿದೆ ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಗ್ಲೋರಿಯಾ ಅವರಿಗೆ anaphylactic reaction ಸಮಸ್ಯೆ ಉಂಟಾಗಿದ್ದು ಇದರ ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರ ತಂಡ ಮೆದುಳು ನಿಷ್ಕ್ರಿಯವಾಗಿರುವ ಬಗ್ಗೆ ನ.11ರಂದು ಸಂಜೆ ನಾಲ್ಕು ಗಂಟೆಗೆ ಘೋಷಣೆ ಮಾಡಿತ್ತು. ಆನಂತರ ಆಕೆಯ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದರು. ಅದರಂತೆ, ಎಜೆ ಆಸ್ಪತ್ರೆಗೆ ಲಿವರ್, ಬೆಂಗಳೂರು ಬಿಜಿಎಸ್ ಆಸ್ಪತ್ರೆಗೆ ಶ್ವಾಸಕೋಶ, ನಾರಾಯಣ ಹೃದಯಾಲಯಕ್ಕೆ ಹಾರ್ಟ್, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಿಡ್ನಿ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚರ್ಮ ಮತ್ತು ಕಣ್ಣಿನ ಕಾರ್ನಿಯಾವನ್ನು ಉಳಿಸಿಕೊಳ್ಳಲಾಗಿದೆ.
anaphylactic reaction ಎನ್ನುವುದು ಮಾರಣಾಂತಿಕ ಅಲರ್ಜಿ ಕಾಯಿಲೆಯಾಗಿದ್ದು ಇದರಿಂದ ಬಹು ಅಂಗಾಂಗ ವೈಫಲ್ಯ ಉಂಟಾಗುತ್ತದೆ. ಗ್ಲೋರಿಯಾ ಅವರಿಗೆ ಯಾವುದೋ ಆಹಾರ ಸೇವನೆ ಬಳಿಕ ಈ ರೀತಿಯ ಅಲರ್ಜಿ ಉಂಟಾಗಿತ್ತು ಎಂದು ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರ ಪ್ರಕಟಣೆ ತಿಳಿಸಿದೆ.