ಮಂಗಳೂರು: ಕರಾವಳಿಯಲ್ಲಿ ಮುಂದುವರಿದ ಮಳೆ; ಸಿಡಿಲಾಘಾತಕ್ಕೆ ಬಂಟ್ವಾಳದ ಬಾಲಕ ಸಾವು.
Sunday, November 17, 2024
ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ಮಳೆಯೊಂದಿಗೆ ಕಾಣಿಸಿಕೊಂಡ ಸಿಡಿಲಿಗೆ ದ.ಕ. ಜಿಲ್ಲೆಯಲ್ಲಿ ಓರ್ವ ಬಾಲಕ ಬಲಿಯಾಗಿರುವ ಘಟನೆ ವರದಿಯಾಗಿದೆ.
ಕೆದಿಲ ಗ್ರಾಮದ ಗಡಿಯಾರದ ಚಂದ್ರಹಾಸ ಎಂಬವರ ಪುತ್ರ ಸುಭೋದ್ (14) ಸಿಡಿಲು ಬಡಿದು ಮೃತಪಟ್ಟ ಬಾಲಕ ಎಂದು ಮೂಲಗಳು ತಿಳಿಸಿವೆ.
ಸಂಜೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಕಾಣಿಸಿಕೊಂಡಿತು. ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಸಂಜೆ 5 ಗಂಟೆಯ ಹೊತ್ತಿಗೆ ಮನೆಯ ಅಂಗಳದಲ್ಲಿ ನಿಂತಿದ್ದ ಬಾಲಕ ಸುಭೋದ್ ಸಿಡಿಲು ಬಡಿದು ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.