ಉಡುಪಿ : ಹಿಟ್ ಆ್ಯಂಡ್ ರನ್ ಕೇಸ್; ಬೈಕಿಗೆ ಡಿಕ್ಕಿ ಹೊಡೆದ ಜೀಪ್; ಬೈಕ್ ಸವಾರ ಮೃತ್ಯು
Sunday, November 17, 2024
ಉಡುಪಿ : ಬೈಕ್ಗೆ ಡಿಕ್ಕಿ ಹೊಡೆದ ನಂತರ ಜೀಪ್ ನಿಲ್ಲಿಸದೇ ಚಾಲಕ ಪರಾರಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಳಪುವಿನ ಮಿಲಿಟರಿ ಕಾಲೋನಿಯಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೃತರನ್ನು ಬೆಳಪುವಿನ ಮೊಹಮ್ಮದ್ ಹುಸೇನ್ (39) ಎಂದು ಗುರುತಿಸಲಾಗಿದೆ. ಇವರು ನ. 13 ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪುಂಚಲಕಾಡು ಬೆಳಪು ರಸ್ತೆಯಲ್ಲಿ ಹೋಗುತ್ತಿದ್ದಾಗ ಬೆಳಪು ಕಡೆಗೆ ಬರುತ್ತಿದ್ದ ಜೀಪ್ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತಕ್ಕೆ ಕಾರಣವಾದ ಚಾಲಕನು ವಾಹನ ನಿಲ್ಲಿಸದೇ, ತಮ್ಮ ಮಗನನ್ನೂ ಆಸ್ಪತ್ರೆಗೆ ಸಾಗಿಸದೇ ಪರಾರಿಯಾಗಿದ್ದಾನೆ ಎಂದು ಮೃತ ಯುವಕನ ತಂದೆ ಉಮ್ಮರಬ್ಬ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ಆರೋಪಿ ಪ್ರಜ್ವಲ್ ಶೆಟ್ಟಿ ಹಾಗೂ ಜೀಪನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಹುಸೇನ್ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಹುಸೇನ್ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.