ಚಿಕ್ಕಮಂಗಳೂರು:ಬಿಇಒ ಮಾತುಗಳಿಂದ ಮನನೊಂದ 10ನೇ ತರಗತಿ ವಿದ್ಯಾರ್ಥಿನಿ ಆತ್ಮ*ಹತ್ಯೆ...!!

ಚಿಕ್ಕಮಗಳೂರು :ಶಿಕ್ಷಣಾಧಿಕಾರಿ (ಬಿಇಒ) ಅವರ ಮಾತುಗಳಿಂದ ಮನನೊಂದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ 10ನೇ ತರಗತಿಯ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕೇವಲ 500ಕ್ಕೆ 93 ಅಂಕಗಳನ್ನು ಪಡೆದಿದ್ದಾಳೆ ಎನ್ನಲಾಗಿದೆ. ಇದನ್ನು ನೆಪ ಮಾಡಿಕೊಂಡು, ಬಿಇಒ ಅವರು ವಿದ್ಯಾರ್ಥಿನಿಯ ಮನೆಗೆ ತೆರಳಿ ಆಕೆಯನ್ನು ಗದರಿಸಿ, “ಇಷ್ಟು ಕಡಿಮೆ ಮಾರ್ಕ್ಸ್ ತೆಗೆದುಕೊಂಡು ನೀನು ಪಾಸ್ ಆಗ್ತೀಯಾ?” ಎಂದು ಅವಮಾನಿಸಿದರೆಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.
ಬಿಇಒ ಮನೆಗೆ ಬಂದು ‘ಬುದ್ಧಿ ಹೇಳಿ’ ಹೋದ ನಂತರದಿಂದ ವಿದ್ಯಾರ್ಥಿನಿ ತೀವ್ರವಾಗಿ ಮಂಕಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಪರೀಕ್ಷೆಯಲ್ಲಿ ಫೇಲ್ ಆಗಿರುವ ಒತ್ತಡದ ಜೊತೆಗೆ, ಮೂರನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ ಫೇಲ್ ಆಗಿಬಿಡುವೆನೋ ಎಂಬ ಭಯ ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದೆ ಎನ್ನಲಾಗಿದೆ.
ಜನವರಿ 28ರಂದು ರಾತ್ರಿ, ಮನೆಯಲ್ಲಿದ್ದ ಕೀಲು ನೋವು ಹಾಗೂ ಉಳುಕಿಗೆ ಬಳಸುವ ಮಾತ್ರೆಗಳನ್ನು ಸೇವಿಸಿ ವಿದ್ಯಾರ್ಥಿನಿ ಆತ್ಮ*ಹತ್ಯೆಗೆ ಯತ್ನಿಸಿದ್ದಾಳೆ. ಸ್ಥಿತಿ ಗಂಭೀರಗೊಂಡ ಬಳಿಕ ಪೋಷಕರು ಆಕೆಯನ್ನು ತಕ್ಷಣ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಈ ಘಟನೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಮನಾರ್ಹ ಸಂಗತಿಯೆಂದರೆ ಮಗಳ ಸಾವಿನ ಕುರಿತು ಪೋಷಕರು ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ. ಇದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮತ್ತು ಪ್ರಶ್ನೆಗಳು ಎದ್ದಿವೆ.