ಬೆಂಗಳೂರು :ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿ ; ತಾಯಿ, ಎಂಟು ವರ್ಷದ ಮಗ ಬಲಿ, ಡ್ರೈವರ್ ಪರಾರಿ...!!!

ಬೆಂಗಳೂರು : ವಿವೇಕನಗರ ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಶಾಲೆಗೆ ಮಗನೊಂದಿಗೆ ತೆರಳುತ್ತಿದ್ದ ತಾಯಿ ಸಂಗೀತಾ (37) ಮತ್ತು ಆಕೆಯ ಎಂಟು ವರ್ಷದ ಮಗ ಪಾರ್ಥ, ಖಾಸಗಿ ಕಾಲೇಜು ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶ ಮೂಲದ ಸಂಗೀತಾ, ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಇಬ್ಬರು ಮಕ್ಕಳೂ ಅದೇ ಶಾಲೆಯಲ್ಲಿ ಓದುತ್ತಿದ್ದರು. ಪತಿ ಪ್ರಸಾದ್ ಊರಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆ ಎಂದಿನಂತೆ ಮಗ ಪಾರ್ಥನೊಂದಿಗೆ ಶಾಲೆಗೆ ಹೊರಟಿದ್ದಾಗ, ರಸ್ತೆ ದಾಟುವ ವೇಳೆ ಕಾಲೇಜು ಬಸ್ ಅವರ ಮೇಲೆ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ತಾಯಿ-ಮಗ ಇಬ್ಬರೂ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಅಶೋಕ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೋರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ದುರದೃಷ್ಟವಶಾತ್, ಅಪಘಾತ ಎಸಗಿದ ಬಸ್ ಚಾಲಕ ಸುನೀಲ್, ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ತಲೆ ಮರೆಸಿಕೊಂಡಿರುವ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.