ಚಿಕ್ಕಮಗಳೂರು :ತನ್ನೂರಿನ ಜನರ ಸೇವೆ ಮಾಡಲು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದ ವೈದ್ಯ; ಕಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೇಮಕ ಗೊಂಡ ಸ್ಥಳೀಯರಾದ ಡಾ. ಕಾರ್ತಿಕ್ ಕೆ. ಶೆಟ್ಟಿ...!!!
ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗ ಹೊಸ ಕಳೆ ಬಂದಿದೆ. ಕಳೆದ ಕೆಲವು ದಿನಗಳಿಂದ ವೈದ್ಯರಿಲ್ಲದೆ ಸೊರಗಿದ್ದ ಆಸ್ಪತ್ರೆಗೆ ಈಗ ಸ್ಥಳೀಯರೇ ಆಗಿರುವ ಡಾ. ಕಾರ್ತಿಕ್ ಕೆ. ಶೆಟ್ಟಿ ಅವರು ವೈದ್ಯರಾಗಿ ಬಂದಿದ್ದಾರೆ.
ಕಳಸದ ಖ್ಯಾತ ಉದ್ಯಮಿ ಕೃಷ್ಣ ಶೆಟ್ಟಿ ಅವರ ಪುತ್ರರಾದ ಕಾರ್ತಿಕ್, ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪೂರೈಸಿದ ಬಳಿಕ ದೊಡ್ಡ ನಗರಗಳಲ್ಲಿ ಕೈ ತುಂಬಾ ಸಂಬಳ ಬರುವ ಉದ್ಯೋಗ ಅವಕಾಶಗಳಿದ್ದರೂ ಅವೆಲ್ಲವನ್ನೂ ಬದಿಗೊತ್ತಿ ತಮ್ಮ ಹುಟ್ಟೂರಿನ ಜನರ ಸೇವೆ ಮಾಡಬೇಕೆಂಬ ಉದಾತ್ತ ಉದ್ದೇಶದಿಂದ ಅಧಿಕೃತವಾಗಿ ಸೇವೆಯನ್ನು ಆರಂಭಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ನೇಮಕಗೊಂಡ ಮೊದಲ ದಿನವೇ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸಿದ್ದು, ಡಾ. ಕಾರ್ತಿಕ್ ಅವರು ಪ್ರತಿಯೊಬ್ಬರಿಗೂ ಅತ್ಯಂತ ತಾಳ್ಮೆ ಮತ್ತು ಪ್ರೀತಿಯಿಂದ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ.
ತಮ್ಮೂರಿನ ಮಣ್ಣಿನ ಮಗನೇ ವೈದ್ಯನಾಗಿ ಬಂದಿರುವುದು ಕಳಸದ ಜನರಲ್ಲಿ ಸಂತಸ ಮೂಡಿಸಿದ್ದು, ವೈದ್ಯರ ಸೇವಾ ಮನೋಭಾವಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮೂರಿನ ವೈದ್ಯರಿಂದ ನಮಗೆ ಅತ್ಯುತ್ತಮ ಚಿಕಿತ್ಸೆ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಸಾರ್ವಜನಿಕರು, ಡಾ. ಕಾರ್ತಿಕ್ ಶೆಟ್ಟಿ ಅವರು ಕಳಸದಲ್ಲಿ ಸುದೀರ್ಘ ಕಾಲ ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದ್ದಾರೆ.
ಸ್ಥಳೀಯರೇ ವೈದ್ಯರಾಗಿ ಬಂದಿರುವುದು ಸಂತಸ ತಂದಿದೆ: ಕಳಸ ನಗರದ ಸ್ಥಳೀಯ ಮುಖಂಡ ಶಮಂತ್ ಜೈನ್ ಅವರು, ಕಳಸ ನಗರಕ್ಕೆ ಸ್ಥಳೀಯರೇ ವೈದ್ಯರಾಗಿ ಬಂದಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ವೈದ್ಯ ಕಾರ್ತಿಕ್ ಶೆಟ್ಟಿ ಈ ಆಸ್ಪತ್ರೆಗೆ ಬಂದಿರುವುದರಿಂದ ತುರ್ತು ಚಿಕಿತ್ಸೆ ಸ್ಥಳೀಯರಿಗೆ ಸಿಗುತ್ತದೆ. ಈಗ ವೈದ್ಯರನ್ನು ಹುಡುಕಿಕೊಂಡು ದೂರದ ಊರುಗಳಿಗೆ ಹೋಗುವುದು ತಪ್ಪುತ್ತದೆ. ಅಪಘಾತ ಪ್ರಕರಣಗಳಲ್ಲಿ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ತಕ್ಷಣ ದೊರೆಯಲು ಸಹಕಾರಿವಾಗಲಿದೆ ಎಂದರು.
ಆಸ್ಪತ್ರೆಗೆ ಯಾವುದೇ ರೋಗಿ ಹೋದರು, ತಕ್ಷಣ ಚಿಕಿತ್ಸೆ ಸಿಗಲಿದೆ. ವೈದ್ಯರು ಸ್ಥಳೀಯರೇ ಆಗಿರುವುದರಿಂದ ಹಗಲು - ರಾತ್ರಿ ಚಿಕಿತ್ಸೆ ದೊರೆಯಲಿದೆ. ಪ್ರಮುಖವಾಗಿ ಕಳಸ ತಾಲೂಕಿನಲ್ಲಿ ಹೆಚ್ಚಾಗಿ ಕಾರ್ಮಿಕರೇ ವಾಸ ಮಾಡುತ್ತಿದ್ದು, ಅವರಿಗೆ ಅನುಕೂಲವಾಗಲಿದೆ. ಕಳಸ ಆಸ್ಪತ್ರೆಗೆ ಯಾವುದೇ ಶವಗಳು ಬಂದಾಗ ಪೋಸ್ಟ್ ಮಾರ್ಟಂ ಮಾಡಲು ಈ ಹಿಂದೆ ಮೂಡಿಗೆರೆ ತಾಲೂಕಿನಿಂದ ಇಲ್ಲಿಗೆ ವೈದ್ಯರು ಬರಬೇಕಿತ್ತು. ಇನ್ಮುಂದೆ ಪ್ರಕ್ರಿಯೆ ಬೇಗ ಮುಗಿದು ಆಯಾ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಬಹುದಾಗಿದೆ. ಈಗ ಸ್ಥಳೀಯರೇ ವೈದ್ಯರಾಗಿ ಬಂದಿರುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.