ಬೆಳಗಾವಿ :350ಕ್ಕೂ ಹೆಚ್ಚು ಯೋಧರು, ಈಗ ಮತ್ತೆ 9 ಯುವಕ-ಯುವತಿಯರು ಸೇನೆಗೆ ಆಯ್ಕೆ: ಇಲ್ಲಿ ಎ ಫಾರ್ ಅಂದ್ರೆ ಆರ್ಮಿ, ಅಪ್ಪಟ ಸೈನಿಕರ ಗ್ರಾಮ!
ಬೆಳಗಾವಿ: ಅದು ಕರ್ನಾಟಕದ ಕಟ್ಟ ಕಡೆಯ ಹಳ್ಳಿ. ಅತೀ ಹೆಚ್ಚು ಸೈನಿಕರನ್ನು ಭಾರತೀಯ ಸೇನೆಗೆ ಕೊಟ್ಟ ಹೆಗ್ಗಳಿಕೆ ಈ ಊರಿಗೆ ಸಲ್ಲುತ್ತದೆ. ಅಲ್ಲಿನ ಮಕ್ಕಳು ಎ ಫಾರ್ ಏನು ಅಂತಾ ಕೇಳಿದ್ರೆ ಆಪಲ್ ಅನ್ನೋದಿಲ್ಲ, ಬದಲಾಗಿ ಎ ಫಾರ್ ಆರ್ಮಿ ಅಂತಾರೆ. ದೇಶಭಕ್ತಿ ಇಲ್ಲಿನ ಮನೆ ಮನಗಳಲ್ಲೂ ಮೇಳೈಸಿದ್ದು, ಏಕಕಾಲಕ್ಕೆ ಈ ಗ್ರಾಮದ 9 ಯುವಕ-ಯುವತಿಯರು ಸೇನೆಗೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಧಾರವಾಡದಲ್ಲಿ ಯಾರ ಮನೆ ಮೇಲೆ ಕಲ್ಲು ಎಸೆದರೂ ಕವಿಗಳು-ಸಾಹಿತಿಗಳು ಸಿಗುತ್ತಾರೆ ಎಂಬ ಮಾತು ಹೇಗೆ ಜನಜನಿತವಾಗಿದೆಯೋ, ಅದೇ ರೀತಿ ಈ ಊರಿನ ಪ್ರತಿ ಮನೆಯಲ್ಲೂ ಯೋಧ ಸಿಗುತ್ತಾರೆ. ಅಂತ ಅಪರೂಪದ ಊರು ಬೆಳಗಾವಿ ತಾಲೂಕಿನ ಕುದ್ರೇಮನಿ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಇದು ಮರಾಠಿ ಭಾಷಿಕರು ಹೆಚ್ಚಿರುವ ಊರಾದರೂ ಕರುನಾಡಿಗೆ ಸೇರಿದ ಕೊನೆಯ ಹಳ್ಳಿಯಾಗಿದೆ
ಬೆಳಗಾವಿಯಿಂದ 20 ಕಿಲೋ ಮೀಟರ್ ಅಂತರದಲ್ಲಿರುವ ಕುದ್ರೇಮನಿಯಲ್ಲಿ 1,200 ಮನೆಗಳಿದ್ದು, 7 ಸಾವಿರ ಜನಸಂಖ್ಯೆ ಇದೆ. ಪೂರ್ಣ ಪ್ರಮಾಣದಲ್ಲಿ ಮರಾಠಿ ಭಾಷಿಕರೇ ಇಲ್ಲಿದ್ದು, ಕೃಷಿಯೇ ಗ್ರಾಮಸ್ಥರ ಮೂಲಾಧಾರವಾಗಿದೆ. ಗ್ರಾಮಸ್ಥರು ಹೇಳುವ ಪ್ರಕಾರ ಇಲ್ಲಿನ ಪ್ರತಿ ಓಣಿಯಲ್ಲೂ 7ಕ್ಕೂ ಅಧಿಕ ಸೈನಿಕರಿದ್ದು, ಸದ್ಯ 350ಕ್ಕೂ ಅಧಿಕ ಯೋಧರು ಗಡಿ ಕಾಯುತ್ತಿದ್ದಾರೆ. ಇನ್ನು, 50 ಸೈನಿಕರು ನಿವೃತ್ತಿ ಹೊಂದಿದ್ದು, ಈಗ ಮತ್ತೆ 9 ಮಂದಿ ಬಿಎಸ್ಎಫ್, ಸಿಆರ್ಪಿಎಫ್ಗೆ ಆಯ್ಕೆ ಆಗಿದ್ದಾರೆ. ಅದರಲ್ಲಿ 7 ಯುವಕರು, ಇಬ್ಬರು ಯುವತಿಯರು ಇರುವುದು ವಿಶೇಷ.
2025ರ ಫೆಬ್ರವರಿ ತಿಂಗಳಲ್ಲಿ ಇವರೆಲ್ಲಾ ಪರೀಕ್ಷೆ ಬರೆದಿದ್ದರು. ಆಗಸ್ಟ್ನಲ್ಲಿ ದೈಹಿಕ ಪರೀಕ್ಷೆ ನಡೆದು, ನವೆಂಬರ್ನಲ್ಲಿ ವೈದ್ಯಕೀಯ ಪರೀಕ್ಷೆ ಮುಗಿದು, ಜನವರಿ 15ರಂದು ಪ್ರಕಟವಾದ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ. 9 ಮಂದಿ ಸೇನೆಗೆ ಸೇರುವ ಮೂಲಕ ತಮ್ಮ ತಂದೆ-ತಾಯಿ ಮತ್ತು ಊರಿಗೆ ಸಂಕ್ರಾಂತಿ ಹಬ್ಬದ ದಿನವೇ ಶುಭ ಸುದ್ದಿ ಕೊಟ್ಟಿದ್ದಾರೆ. ತಮಗೆ ಸೂಚಿಸಿದ ಕೇಂದ್ರದಲ್ಲಿ ಮುಂದಿನ ತಿಂಗಳು ತರಬೇತಿಗೆ ಇವರೆಲ್ಲಾ ತೆರಳಲು ಅಣಿಯಾಗಿದ್ದಾರೆ.
ಪ್ರತಿ ಭರ್ತಿಯಲ್ಲೂ 7-8 ಮಂದಿ ಆಯ್ಕೆ: 1965ರಲ್ಲಿ ಜೀವನ ಗೋವೇಕರ್ ಎಂಬುವರು ಸೇನೆ ಸೇರಿದ ಗ್ರಾಮದ ಮೊದಲ ಸೇನಾನಿ. ಇವರ ನಂತರ ದತ್ತಾತ್ರೇಯ ಪಾಟೀಲ, ಗೋಪಾಲ ಪಾಟೀಲ ಸೇನೆಗೆ ಆಯ್ಕೆಯಾದರು. ಆ ಬಳಿಕ ಹಂತ ಹಂತವಾಗಿ ಆ ಯೋಧರ ಪ್ರೇರಣೆಯಿಂದ ಹೆಚ್ಚೆಚ್ಚು ಯುವಕರು ಸೇನೆ ಸೇರಲು ಮುಂದಾದರು. ಪ್ರತಿ ಭರ್ತಿಯಲ್ಲಿ ಏನಿಲ್ಲ ಅಂದರೂ ಏಳೆಂಟು ಮಂದಿ ಆಯ್ಕೆ ಆಗುತ್ತಿದ್ದು, ಇದೇ ಮೊದಲ ಬಾರಿಗೆ ಏಕಕಾಲಕ್ಕೆ 9 ಮಂದಿ ಸೇನೆ ಸೇರಿದ್ದಾರೆ. ಈಗ ಆಯ್ಕೆಯಾಗಿರುವ ಇಬ್ಬರು ಯುವತಿಯರನ್ನು ಹೊರತುಪಡಿಸಿ, ಈಗಾಗಲೇ ಗ್ರಾಮದ 8 ಮಹಿಳಾ ಸೈನಿಕರು ಗಡಿ ಕಾಯುತ್ತಿರುವುದು ವಿಶೇಷ.
9 ಸೇನಾನಿಗಳು ಇವರೇ ನೋಡಿ: ದೀಕ್ಷಾ ಬಾಳಾರಾಮ ಧಾಮನೇಕರ್(22), ಸಾಹಿಲ್ ಭೀಮಣ್ಣ ಪಾಟೀಲ(21), ಭರಮು ರವಿಕಾಂತ ಗುರವ(24), ಜಯ ನಾನಾ ಪಾಟೀಲ(23) ಭಾರತೀಯ ಸೇನೆಯ ಗಡಿ ಭದ್ರತಾ ಪಡೆ(ಬಿಎಸ್ಎಫ್)ಗೆ ಆಯ್ಕೆಯಾದರೆ, ಸಂಜೀವಿನಿ ಸಂಜಯ ಪಾಟೀಲ(21), ವಿಜಯ ವೆಂಕು ಪಾಟೀಲ(23) ರಾಜು ಮಾರುತಿ ಪಾಟೀಲ(24), ಓಂಕಾರ ಕಲ್ಲಪ್ಪ ಗುರವ(21) ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಸೇರ್ಪಡೆಯಾಗಿದ್ದಾರೆ. ಅದೇ ರೀತಿ ರಾಕೇಶ ರವಳು ಪನ್ನಾಳ್ಕರ್(22) ಇಂಡೋ-ಟಿಬೆಟಿಯನ್ ಗಡಿ ಪೊಲೀಸ್(ಐಟಿಬಿಪಿ) ಆಗಿ ನೇಮಕಗೊಂಡಿದ್ದಾರೆ. ಬಹುತೇಕ ಇವರೆಲ್ಲಾ ಬಡವರ ಮನೆ ಮಕ್ಕಳು.
ಕೆಲಸ ಮಾಡುತ್ತಲೇ ಆರ್ಮಿ ತಯಾರಿ: ಕ್ಯಾಪ್ಟನ್, ಸುಬೇದಾರ, ಹವಾಲ್ದಾರ ಸೇರಿ ಮತ್ತಿತರ ಹುದ್ದೆಗಳಲ್ಲಿ ಕುದ್ರೇಮನಿಯ 350ಕ್ಕೂ ಅಧಿಕ ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ವೇಳೆ ರಜೆ ಮೇಲೆ ಬಂದಿರುವ ಯೋಧರ ಕೈಯಿಂದಲೇ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಇದು ಈಗಿನ ಯುವಕರಿಗೆ ಪ್ರೇರಣೆ ನೀಡುತ್ತಿದೆ. ಇನ್ನು ಮಾಜಿ ಸೈನಿಕರು ಗ್ರಾಮದ ಯುವಕರಿಗೆ ಸೇನೆ ಸೇರಲು ಹೇಗೆಲ್ಲಾ ತಯಾರಿ ಮಾಡಬೇಕು ಎಂಬ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಆ ಪ್ರಕಾರ ಬೆಳಗ್ಗೆ ಮತ್ತು ಮುಂಜಾನೆ ರನ್ನಿಂಗ್ ಸೇರಿ ದೈಹಿಕ ಕಸರತ್ತು ಮಾಡುತ್ತಾ, ಲಿಖಿತ ಪರೀಕ್ಷೆಗೂ ಸಿದ್ಧತೆ ನಡೆಸುತ್ತಾರೆ. ಕೆಲವರು ಪದವಿ ಓದುತ್ತಿದ್ದರೆ, ಮತ್ತೆ ಕೆಲವರು ತಂದೆ-ತಾಯಿಗೆ ಕೃಷಿ ಕೆಲಸಕ್ಕೆ ನೆರವಾಗಿ, ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಲೇ ಸೇನೆಗೆ ಸೇರಲು ತಯಾರಿ ಮಾಡುತ್ತಿದ್ದರು. ಅವರ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದ್ದಕ್ಕೆ ಪೋಷಕರು ಮತ್ತು ಗ್ರಾಮಸ್ಥರಿಗೆ ಸಂತಸ ತಂದಿದೆ.
ಮರಾಠಿ ಭಾಷಿಕರೇ ಹೆಚ್ಚಿರುವುದರಿಂದ ನಮಗೆ ರಾಜ್ಯ ಸರ್ಕಾರಿ ನೌಕರಿ ಸಿಗುತ್ತಿಲ್ಲ. ನಮಗೆ ಇರುವ ಏಕೈಕ ಅವಕಾಶ ಎಂದರೆ ಅದು ಆರ್ಮಿ. ಜೊತೆಗೆ ದೇಶ ಸೇವೆ ಮಾಡಬೇಕು ಎನ್ನುವ ಅದಮ್ಯ ಉತ್ಸಾಹ ನಮ್ಮಲ್ಲಿದೆ. ಈ ಕಾರಣದಿಂದ ನಾವು ಮಿಲಿಟರಿ ಸೇವೆ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದು ಬಹುತೇಕ ಎಲ್ಲಾ ಯೋಧರ ಅಭಿಪ್ರಾಯವಾಗಿದೆ.
ಜಯ ಪಾಟೀಲ, ನಮ್ಮ ತಂದೆ-ತಾಯಿ ರೈತರು. ಅವರು ಪಡುತ್ತಿದ್ದ ಕಷ್ಟ ನೋಡಲು ನನಗೆ ಆಗುತ್ತಿರಲಿಲ್ಲ. ಹಾಗಾಗಿ, ನಾನು ಸೇನೆಗೆ ಸೇರಬೇಕೆಂದು ನಿಶ್ಚಯಿಸಿ ಕಳೆದ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ, ಅಂತಿಮವಾಗಿ ಬಿಎಸ್ಎಫ್ಗೆ ಆಯ್ಕೆಯಾಗಿದ್ದೇನೆ. ನಮ್ಮ ಮನೆಯವರು ಸೇರಿ ಇಡೀ ಊರಲ್ಲಿ ಸಂಭ್ರಮ ಮನೆ ಮಾಡಿದೆ. 350ಕ್ಕಿಂತ ಹೆಚ್ಚು ಯೋಧರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ನಮ್ಮ ಕುದ್ರೇಮನಿ ಸೈನಿಕರ ಊರು ಅಂತಾ ಪ್ರಸಿದ್ಧಿ ಪಡೆದಿದೆ. ನಮ್ಮೂರಲ್ಲಿ ಎ ಫಾರ್ ಆಪಲ್ ಕಲಿಸುವುದಿಲ್ಲ. ಎ ಫಾರ್ ಆರ್ಮಿ, ಬಿ ಫಾರ್ ಬಿಎಸ್ಎಫ್, ಸಿ ಫಾರ್ ಸಿಆರ್ಪಿಎಫ್ ಅಂತಾ ಕಲಿಸುತ್ತಾರೆ. ಸದ್ಯ ನಮ್ಮೂರು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಣ್ಣನ ಕನಸು ಈಡೇರಿಸಿದ ತಂಗಿ: ಸಿಆರ್ಪಿಎಫ್ಗೆ ಆಯ್ಕೆ ಆಗಿರುವ ಯುವತಿ ಸಂಜೀವಿನಿ ಪಾಟೀಲ ಮಾತನಾಡಿ, ನನ್ನ ಸಹೋದರ ಮನೆಯ ಆರ್ಥಿಕ ಸಮಸ್ಯೆಯಿಂದ ಆರ್ಮಿಗೆ ಸೇರಲು ಸಾಧ್ಯವಾಗಲಿಲ್ಲ. ಆದರೆ, ನಾನು ಈಗ ಸಿಆರ್ಪಿಎಫ್ಗೆ ನೇಮಕ ಆಗುವ ಮೂಲಕ ನನ್ನ ಅಣ್ಣನ ಕನಸನ್ನು ಈಡೇರಿಸಿದ್ದೇನೆ. ಕರ್ನಾಟಕದಲ್ಲಿ ನನಗೆ 3ನೇ ರ‍್ಯಾಂಕ್ ಸಿಕ್ಕಿದೆ. ಸದ್ಯ ನಾನು ಬಿಎಸ್ಸಿ ಅಂತಿಮ ವರ್ಷ ಓದುತ್ತಲೇ ಆರ್ಮಿಗೆ ತಯಾರಿ ನಡೆಸಿದ್ದೆ. ನಮ್ಮ ತಂದೆ-ತಾಯಿ, ಅಣ್ಣ, ಸ್ನೇಹಿತರು ಮತ್ತು ಗ್ರಾಮದ ಗುರು- ಹಿರಿಯರು ನನಗೆ ಸಾಕಷ್ಟು ಪ್ರೋತ್ಸಾಹಿಸಿದರು. ಹೆಣ್ಣು ಮಕ್ಕಳು ಯಾವುದರಲ್ಲೂ ಕಮ್ಮಿ ಇಲ್ಲ. ನೀನು ಕಠಿಣ ಅಭ್ಯಾಸ ಮಾಡು, ಪ್ರಯತ್ನಿಸು, ನಿನ್ನ ಗುರಿ ತಲುಪುವೆ ಅಂತಾ ಹುರಿದುಂಬಿಸಿದರು. ಅವರಿಗೆಲ್ಲಾ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ದೇಶಸೇವೆ ನನ್ನ ಗುರಿ: ಬಿಎಸ್ಎಫ್ ಆಯ್ಕೆಯಾಗಿರುವ ದೀಕ್ಷಾ ಧಾಮಣೇಕರ್ ಪ್ರತಿಕ್ರಿಯಿಸಿ, ನಮ್ಮ ತಂದೆ ಆರ್ಮಿಗೆ ಹೋಗುವ ಕನಸು ಕಂಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ, ಚಿಕ್ಕಂದಿನಲ್ಲೇ ನನ್ನಲ್ಲಿ ಆರ್ಮಿ ಕನಸು ಬಿತ್ತಿದರು. ಯಾವುದೋ ನೌಕರಿ ಗಿಟ್ಟಿಸಿಕೊಳ್ಳುವುದು ನನ್ನ ಗುರಿ ಆಗಿರಲಿಲ್ಲ. ದೇಶಸೇವೆ ಮಾಡುವುದು ನನ್ನ ಜೀವನದ ಪ್ರಮುಖ ಗುರಿಯಾಗಿತ್ತು. ಹಾಗಾಗಿ, ರನ್ನಿಂಗ್, ವ್ಯಾಯಾಮ ಮತ್ತು ಪರೀಕ್ಷೆಗೆ ತಯಾರಿ ನಡೆಸಿ ಈಗ ಯಶಸ್ವಿಯಾಗಿದ್ದೇನೆ. ನನ್ನ ಸ್ನೇಹಿತ ಸೂರಜ್ ಕಾಂಬಳೆ ಸೇರಿದಂತೆ ಗ್ರಾಮದ ಅನೇಕರು ನನಗೆ ಪ್ರೋತ್ಸಾಹಿಸಿದ್ದಾರೆ. ಸೇನೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಮ್ಮೂರಿನ ಕೀರ್ತಿ ಹೆಚ್ಚಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಬ್ಬಳೇ ಮಗಳನ್ನು ಆರ್ಮಿಗೆ ಕಳಿಸುತ್ತಿದ್ದೇನೆ: ನನ್ನ ಮಗಳು ಬಿಎಸ್ಎಫ್ ಆಯ್ಕೆ ಆಗಿರುವುದಕ್ಕೆ ನನಗೆ ಬಹಳ ಸಂತೋಷ ಆಗುತ್ತಿದೆ. ನನ್ನ ಮಗಳು ಸೇರಿ 9 ಮಂದಿ ಸೇನೆಗೆ ಆಯ್ಕೆ ಆಗಿರುವುದು ನಮ್ಮ ಊರಲ್ಲಿ ದೀಪಾವಳಿ ಹಬ್ಬದಷ್ಟೇ ಖುಷಿ ಮನೆ ಮಾಡಿದೆ. ಮಗಳು ಇಂಡಿಯನ್ ಆರ್ಮಿಗೆ ಹೋಗಬೇಕು ಅನ್ನೋದು ನಮ್ಮ ಮತ್ತು ಆಕೆಯ ಇಚ್ಛೆಯೂ ಆಗಿತ್ತು. ಈಗ ಅದು ಸಾಕಾರವಾಗಿದೆ. ಒಬ್ಬಳೆ ಮಗಳನ್ನು ಈ ರೀತಿ ಆರ್ಮಿಗೆ ಕಳಿಸೋದಕ್ಕೆ ನನಗೆ ಯಾವುದೇ ದುಃಖ ಇಲ್ಲ. ದೇಶಸೇವೆಗಾಗಿ ಮಗಳನ್ನು ಕಳಿಸುತ್ತಿದ್ದೇನೆ ಎನ್ನುತ್ತಾರೆ ದೀಕ್ಷಾ ತಂದೆ ಬಾಳಾರಾಮ ಧಾಮಣೇಕರ್.
ದೇಶ ಸೇವೆ ಜೊತೆಗೆ ತಂದೆ-ತಾಯಿ ಚೆನ್ನಾಗಿ ನೋಡಿಕೊಳ್ಳುವೆ: ರಾಕೇಶ ಪನ್ನಾಳ್ಕರ್ ಮಾತನಾಡಿ, ನಾನು ಆರ್ಮಿ ಸೇರಬೇಕು ಅನ್ನೋದು ನನ್ನ ತಂದೆ-ತಾಯಿ ಆಸೆಯಾಗಿತ್ತು. ಸಾಕಷ್ಟು ಕಷ್ಟಪಟ್ಟು ನನ್ನನ್ನು ಅವರು ಬೆಳೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬೆಳಗ್ಗೆ ಮತ್ತು ಸಾಯಂಕಾಲ ರನ್ನಿಂಗ್, ವ್ಯಾಯಾಮ ತಪ್ಪದೇ ಮಾಡುತ್ತಿದ್ದೆ. ಅದರ ಪರಿಣಾಮ ಇಂದು ಐಟಿಬಿಪಿಗೆ ಆಯ್ಕೆ ಆಗಿದ್ದೇನೆ. ಅಪ್ಪ-ಅವ್ವ ನನ್ನ ಮೇಲಿಟ್ಟಿದ್ದ ಭರವಸೆ ಈಡೇರಿಸಿದ್ದೇನೆ ಎನ್ನುವ ಸಂತೋಷ ನನಗಿದೆ. ದೇಶಸೇವೆ ಜೊತೆಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇನ್ನು ನಮ್ಮೂರು ಕುದ್ರೇಮನಿ ಕರ್ನಾಟಕ ರಾಜ್ಯದಲ್ಲೇ ಅತೀ ಹೆಚ್ಚು ಸೈನಿಕರನ್ನು ಹೊಂದಿದೆ. ಇದು ನಮಗೆ ಅತ್ಯಂತ ಅಭಿಮಾನದ ಸಂಗತಿ ಎಂದು ತಿಳಿಸಿದರು.
ಸೇನೆಗೆ ನಮ್ಮೂರ ಕೊಡುಗೆ ದೊಡ್ಡದು: ಶಿಕ್ಷಕ ಪಿ.ಎಲ್. ಗುರವ ಮಾತನಾಡಿ, ಗ್ರಾಮದಲ್ಲಿ ಯಾರನ್ನೇ ಕೇಳಿದರೂ ನಮ್ಮ ಮನೆಯಲ್ಲೂಬ್ಬ ಸೈನಿಕರಿದ್ದಾರೆ ಅಂತಾರೆ. ಈಗಾಗಲೇ 350 ಸೈನಿಕರು ಸೇನೆಯಲ್ಲಿದ್ದು, ಈಗ ಮತ್ತೆ 9 ಯುವಕ-ಯುವತಿಯರು ಆಯ್ಕೆ ಆಗಿರುವುದು ನಮಗೆಲ್ಲಾ ಬಹಳಷ್ಟು ಸಂತೋಷ ತಂದಿದೆ. ಭಾರತೀಯ ಸೇನೆಗೆ ನಮ್ಮೂರು ದೊಡ್ಡ ಕೊಡುಗೆ ಕೊಟ್ಟಿದೆ ಎಂದು ಅಭಿಮಾನದಿಂದ ಹೇಳುತ್ತೇನೆ ಎಂದರು.