ಬೆಂಗಳೂರು :ಇವಿಎಂಗೆ ಗುಡ್ ಬೈ, ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ; ರಾಜ್ಯದಲ್ಲಿ ಪಾಲಿಕೆ, ಜಿಪಂ, ತಾಪಂಗಳಿಗೆ ಮತಪತ್ರ, ಮೇ ಕೊನೆಯಲ್ಲಿ ಲೋಕಲ್ ದಂಗಲ್, ಹಳೆ ಪದ್ಧತಿಗೆ ಒತ್ತು ಕೊಟ್ಟ ಚುನಾವಣಾ ಆಯೋಗ...!!!

ಬೆಂಗಳೂರು : ಮಹತ್ವದ ಬೆಳವಣಿಗೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ವಿವಿಧ ಮಹಾನಗರ ಪಾಲಿಕೆಗಳು ಸೇರಿದಂತೆ ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬದಲಿಗೆ ಮತಪತ್ರಗಳನ್ನು (ಬ್ಯಾಲೆಟ್) ಬಳಸುವ ಮಹತ್ವದ ನಿರ್ಧಾರವನ್ನು ರಾಜ್ಯ ಚುನಾವಣಾ ಆಯೋಗ ಕೈಗೊಂಡಿದೆ. ಇದೇ ವೇಳೆ, ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಚುನಾವಣೆ ನಡೆಸಲು ಸಿದ್ಧತೆ ನಡೆಸಿರುವುದಾಗಿ ಆಯೋಗ ಹೇಳಿದೆ.
ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು ಸೋಮವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮುಂಬರುವ ಜಿಬಿಎ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರಗಳನ್ನೇ ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದ ನಂತರ ಚುನಾವಣೆ ದಿನಾಂಕ ನಿಗದಿಯಾಗಲಿದೆ ಎಂದರು.
ಕಳೆದ 20 ವರ್ಷಗಳಿಂದ ಚುನಾವಣೆಯಲ್ಲಿ ಇವಿಎಂ ಬಳಲಾಗುತ್ತಿದೆ. ಆದರೆ, ಅದಕ್ಕೂ ಮುನ್ನ ಮತಪತ್ರಗಳನ್ನೇ ಬಳಸಲಾಗುತ್ತಿತ್ತು. ಕಾನೂನು ಅಥವಾ ಸುಪ್ರೀಂಕೋರ್ಟ್ ಪ್ರಕಾರ ಮತಪತ್ರ ಬಳಸಲು ಯಾವುದೇ ಆಕ್ಷೇಪವಿಲ್ಲ ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು. ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಮತಪತ್ರಗಳನ್ನು ಬಳಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಚುನಾವಣಾ ಆಯೋಗ ಸಾಂವಿಧಾನಿಕ ಸ್ವತಂತ್ರ ಸಂಸ್ಥೆಯಾಗಿದ್ದು ಕಾನೂನಿನ ಪ್ರಕಾರ ಮತಪತ್ರ ಅಥವಾ ಇವಿಎಂ ಬಳಕೆಗೆ ಅವಕಾಶವಿದೆ, ಹಾಗಾಗಿ, ಆಯೋಗ ತನ್ನ ವಿವೇಚನೆ ಬಳಸಿ ಈ ತೀರ್ಮಾನ ಕೈಗೊಂಡಿದೆ ಎಂದರು. ಮತ ಪತ್ರಗಳ ಬಳಕೆಯಿಂದ ನಾವು ಆಧುನಿಕತೆಯಿಂದ ಮತ್ತೆ ಹಿಂದಿನ ವ್ಯವಸ್ಥೆಗೆ ಹೋದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, 'ಗ್ರಾಮ ಪಂಚಾಯಿತಿ, ಸಹಕಾರ ಹಾಗೂ ವಿಧಾನ ಪರಿಷತ್ ಸೇರಿದಂತೆ ನಮ್ಮ ಹಲವಾರು ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸಲಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮತ ಪತ್ರ ಬಳಸುವ ಅಗತ್ಯವಿದೆ. ಈ ಪದ್ಧತಿ ಬಗ್ಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು. 2015ರ ಬಿಬಿಎಂಪಿ ಚುನಾವಣೆಯಲ್ಲಿ ಇವಿಎಂಗಳನ್ನು ಬಳಸಲಾಗಿತ್ತು. ಈ ಹಿಂದೆ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಗಳನ್ನು ಬಳಸಲು ರಾಜ್ಯ ಸರಕಾರ ನಿರ್ಧರಿಸಿತ್ತು.
ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ; ಡಿಕೆಶಿ
ಬೆಂಗಳೂರು ನಗರದ ನಾಲ್ಕು ಪಾಲಿಕೆಗಳ ಜತೆಯಲ್ಲಿಯೇ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸಲು ಚಿಂತನೆ ನಡೆದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದಲ್ಲದೆ, ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಚಿಹ್ನೆ ಆಧಾರಿತ ನಡೆಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದರು. ಗ್ರಾಪಂ ಚುನಾವಣೆಗಳನ್ನು ರಾಜಕೀಯ ಪಕ್ಷಗಳ ಚಿಹ್ನೆ ಮೇಲೆ ನಡೆಸಬೇಕು ಎಂಬ ಸಲಹೆ ಬಂದಿದೆ. ಈ ಸಂಬಂಧ ವರಿಶೀಲನೆ ನಡೆದಿದ್ದು, ಸಾಧಕ ಬಾಧಕಗಳನ್ನು ಪರಾಮರ್ಶಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.