ಉಳ್ಳಾಲ:ದರ್ಗಾ ಕಮಿಟಿ ಅವ್ಯವಹಾರ- ದುರಾಡಳಿತ ಆರೋಪ ; ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇಮಕ, ಕಡೆಗೂ ಎಚ್ಚೆತ್ತ ವಕ್ಫ್ ಬೋರ್ಡ್...!!

ಮಂಗಳೂರು : ಉಳ್ಳಾಲದ ಸೈಯದ್ ಮದನಿ ದರ್ಗಾ ಆಡಳಿತದ ಅವ್ಯವಹಾರ ಮತ್ತು ದುರಾಡಳಿತದ ಕುರಿತ ಆರೋಪದ ಬಗ್ಗೆ ಹೈಕೋರ್ಟ್ ಆದೇಶದಂತೆ, ಕರ್ನಾಟಕ ವಕ್ಫ್ ಬೋರ್ಡ್ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿದೆ. ಜ.19ರಂದು ಈ ಬಗ್ಗೆ ಆದೇಶ ಮಾಡಿದ್ದು ಎರಡು ವಾರದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ.
ಅವ್ಯವಹಾರದ ಬಗ್ಗೆ ದರ್ಗಾ ಕಮಿಟಿ ಸದಸ್ಯ ಯು.ಎಚ್ ಫಾರೂಕ್ ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ವಕ್ಫ್ ಬೋರ್ಡ್ ಗೆ ತನಿಖೆ ನಡೆಸಲು ನಿರ್ದೇಶನ ನೀಡಿತ್ತು. ಅರ್ಜಿದಾರರು ಹಾಲಿ ಆಡಳಿತದ ವಿರುದ್ಧ ಅವಿಶ್ವಾಸ ಮಂಡನೆಗೆ ಅವಕಾಶ ನೀಡಲು ಕೋರಿದ್ದರು. ಇದಕ್ಕೆ ಮಹಾಸಭೆ ಕರೆದು ಅವಕಾಶ ನೀಡುವಂತೆಯೂ ಡಿ.3ರಂದು ನೀಡಿದ ಆದೇಶದಲ್ಲಿ ತಿಳಿಸಿತ್ತು. ಕೋರ್ಟ್ ತನಿಖೆಗೆ ಆದೇಶ ಮಾಡಿದ್ದರೂ ವಕ್ಫ್ ಬೋರ್ಡ್ ಮಾತ್ರ ಪ್ರಭಾವಿಗಳ ಒತ್ತಡಕ್ಕೆ ಮಣಿದು ಮೌನವಾಗಿತ್ತು. ಇದರ ನಡುವೆ, ದರ್ಗಾ ಕಮಿಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತರಾತುರಿಯಲ್ಲಿ ಮಹಾಸಭೆ ಕರೆಯಲು ಮುಂದಾಗಿದ್ದರು. ಆದರೆ ಈ ರೀತಿ ಮಹಾಸಭೆ ಕರೆಯಲು ದರ್ಗಾ ಆಡಳಿತ ಸಮಿತಿಗೆ ಅಧಿಕಾರ ಇಲ್ಲ, ಈ ಬಗ್ಗೆ ವಕ್ಫ್ ಬೋರ್ಡ್ ತುರ್ತು ಕ್ರಮ ಕೈಗೊಳ್ಳಬೇಕೆಂದು ಕಮಿಟಿ ಸದಸ್ಯರು ಆಗ್ರಹ ಮಾಡಿದ್ದರು.
ಜ.18ರಂದು ಮಹಾಸಭೆ ಕರೆಯಲಾಗಿದ್ದರೂ ಕೋರಂ ಇಲ್ಲದ ಕಾರಣ ಸಭೆ ಕೊನೆ ಕ್ಷಣದಲ್ಲಿ ರದ್ದುಗೊಂಡಿತ್ತು. ಇದರ ಬೆನ್ನಲ್ಲೇ ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಅವ್ಯವಹಾರ ವಿಚಾರದಲ್ಲಿ ತುರ್ತು ತನಿಖೆ ನಡೆಸಲು, ವಕ್ಫ್ ಬೋರ್ಡ್ ಕಾನೂನು ಅಧಿಕಾರಿಯೂ ಆಗಿರುವ ನಿವೃತ್ತ ನ್ಯಾಯಾಧೀಶರಾದ ಡಾ.ಶಶಿಕಲಾ ಉರಾನ್ಕರ್ ಅವರನ್ನು ನೇಮಕ ಮಾಡಿದ್ದಾರೆ. ಅಲ್ಲದೆ, ಎರಡು ವಾರದಲ್ಲಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ.
ದರ್ಗಾ ಕಮಿಟಿಯ ಭ್ರಷ್ಟಾಚಾರದ ಬಗ್ಗೆ ಹಾಲಿ ಸದಸ್ಯರೇ ಆರೋಪ ಮಾಡಿದ್ದರು. ಸರ್ಕಾರದಿಂದ ಬಂದಿದ್ದ 7 ಕೋಟಿ ಅನುದಾನ ಮತ್ತು ಉರೂಸ್ ಸಂದರ್ಭದಲ್ಲಿ ಬಂದಿದ್ದ ಆದಾಯ ಹಾಗೂ ದೇಣಿಗೆ ಸಂಗ್ರಹದ ಬಗ್ಗೆ ಆಡಳಿತ ಕಮಿಟಿ ಲೆಕ್ಕಪತ್ರ ನೀಡಿಲ್ಲ. ಸರ್ಕಾರದ ಅನುದಾನವನ್ನು ಬೇಕಾಬಿಟ್ಟಿ ಖರ್ಚು ಮಾಡಿದ್ದಾಗಿ ಕಮಿಟಿ ಸದಸ್ಯರು ಆರೋಪ ಮಾಡಿದ್ದರು.