ತೆಲಂಗಾಣ:ಇಕ್ಕಟ್ಟಿಗೆ ಸಿಲುಕಿ ಸಾವಿಗೆ ಶರಣಾದ ಲೇಡಿ ಪೊಲೀಸ್...!

ತೆಲಂಗಾಣ:ಇಕ್ಕಟ್ಟಿಗೆ ಸಿಲುಕಿ ಸಾವಿಗೆ ಶರಣಾದ ಲೇಡಿ ಪೊಲೀಸ್...!

ತೆಲಂಗಾಣ :ಯುವಕರಿಬ್ಬರ ಕಿರುಕುಳದಿಂದ ಬೇಸತ್ತ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಸಾವಿಗೆ ಶರಣಾಗಿರುವ ಘಟನೆ ತೆಲಂಗಾಣದ ಹನುಮಕೊಂಡಯಲ್ಲಿ ನಡೆದಿದೆ.

ಮೃತ ಮಹಿಳಾ ಪೇದೆಯನ್ನು ಅನಿತಾ ಎಂದು ಗುರುತಿಸಲಾಗಿದೆ. ಇಬ್ಬರಲ್ಲಿ ಓರ್ವ ಯುವಕ ನನಗೆ ಮೋಸ ಮಾಡಿದ, ಮತ್ತೊಬ್ಬ ಯುವಕ ನನ್ನನ್ನು ಮದುವೆಯಾಗುವುದಾಗಿ ಕಿರುಕುಳ ನೀಡಿದ ಎಂದು ಆರೋಪಿಸಿ, ಪೇದೆ ಅನಿತಾ ಸಾವಿಗೆ ಶರಣಾಗಿದ್ದಾರೆ.

ಈ ಪ್ರಕರಣದ ಪೂರ್ತಿ ವಿವರಕ್ಕೆ ಬರುವುದಾದರೆ, ವಾರಂಗಲ್ ಜಿಲ್ಲೆಯ ಪರ್ವತಗಿರಿ ಮಂಡಲದ ನಿವಾಸಿ ಅನಿತಾ, ವಾರಂಗಲ್ ಪೊಲೀಸ್ ಕಮಿಷನರೇಟ್‌ನ ಎಆರ್ ವಿಭಾಗದಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದರು. ಮೆಹಬುಬಾಬಾದ್ ಜಿಲ್ಲೆಯ ತೋರೂರು ಮಂಡಲದ ನಿವಾಸಿ ರಾಜೇಂದರ್ ಎಂಬಾತ ಅನಿತಾ ಅವರ ಸಂಬಂಧಿ.

ರಾಜೇಂದರ್, ಕಳೆದ ನಾಲ್ಕು ವರ್ಷಗಳಿಂದ ಮದುವೆಯಾಗುವಂತೆ ಅನಿತಾಳನ್ನು ಬೆಂಬಿಡದೆ ಕಾಡುತ್ತಿದ್ದ. ಅಲ್ಲದೆ, ಕೆಲವು ಸಮಯದಿಂದ ಕರ್ತವ್ಯದಲ್ಲಿರುವಾಗಲೇ ವಿಡಿಯೋ ಕರೆ ಮಾಡುವಂತೆ ಮತ್ತು ಬೇರೆಯವರೊಂದಿಗೆ ಮಾತನಾಡದಂತೆ ಕಿರುಕುಳ ನೀಡುತ್ತಿದ್ದ. ರಾಜೇಂದರ್ ವರ್ತನೆ ಇಷ್ಟವಾಗದಿದ್ದಾಗ ಅನಿತಾ ತನ್ನ ಪಾಲಕರಿಗೆ ಈ ವಿಚಾರವನ್ನು ತಿಳಿಸಿದಳು. ನಿನ್ನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ರಾಜೇಂದರ್‌ಗೂ ಹೇಳಿದಳು. ಆದಾಗ್ಯೂ, ತನ್ನನ್ನು ಮದುವೆಯಾಗಬೇಕೆಂದು ರಾಜೇಂದರ್, ಅನಿತಾಳನ್ನು ಒತ್ತಾಯಿಸುತ್ತಲೇ ಇದ್ದನು.
ಹೀಗಿರುವಾಗ ಅನಿತಾ, ತನ್ನ ಸಹಪಾಠಿ ಜಬ್ಬರ್ ಲಾಲ್ ಜೊತೆ ಹತ್ತಿರವಾದಳು ಮತ್ತು ಆತನನ್ನು ಮದುವೆಯಾಗಲು ನಿರ್ಧರಿಸಿದಳು. ಈ ವಿಚಾರ ರಾಜೇಂದರ್‌ಗೆ ಗೊತ್ತಾದ ಕೂಡಲೇ ಜಬ್ಬರ್‌ಗೆ ಕರೆ ಮಾಡಿ ಅನಿತಾಳ ಬಗ್ಗೆ ತಪ್ಪು ಮಾಹಿತಿ ನೀಡಿದನು. ಅಂದಿನಿಂದ, ಜಬ್ಬರ್ ಸಹ ಅನಿತಾಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ನೀನು ನನ್ನನ್ನು ಮದುವೆಯಾಗಲು ಬಯಸಿದರೆ ಹಣ ನೀಡುವಂತೆ ಒತ್ತಾಯಿಸಿದನು. ಇಬ್ಬರ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದ ಅನಿತಾ, ಈ ತಿಂಗಳ 27 ರಂದು ರಾಜೇಂದರ್ಗೆ ಕರೆ ಮಾಡಿ ಕಣ್ಣೀರು ಹಾಕಿದಳು.

ನೀನು ಮತ್ತು ಜಬ್ಬಾರ್ ನನ್ನ ಜೀವನವನ್ನು ಒಟ್ಟಿಗೆ ಹಾಳು ಮಾಡಿದ್ದೀರಿ. ನಿನ್ನಿಂದಾಗಿ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಅನಿತಾ ಹೇಳಿದಳು. ಆದರೆ, ಅನಿತಾಳ ಮಾತನನ್ನು ರಾಜೇಂದರ್, ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸತ್ತು ಹೋಗು ಎಂದು ನಿರಾತಂಕವಾಗಿ ಹೇಳಿದ್ದಾನೆ. ಇದರಿಂದ ಮನನೊಂದ ಅನಿತಾ, ಕ್ರಿಮಿನಾಶಕವನ್ನು ಸೇವಿಸಿದಳು. ಇದನ್ನು ನೋಡಿದ ಕುಟುಂಬ ಸದಸ್ಯರು ಅನಿತಾಳನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅನಿತಾ ಮೃತಪಟ್ಟಿದ್ದಾಳೆ.
ಅನಿತಾ ಅವರ ಕುಟುಂಬ ಸದಸ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article