ದಾವಣಗೆರೆ :ಪ್ರಿಯಕರನೊಂದಿಗೆ ಪತ್ನಿ ಪರಾರಿ, ಮನನೊಂದು ಪತಿ ಆತ್ಮಹತ್ಯೆ.; ಮದುವೆ ಮಾಡಿಸಿದ್ದ ಮಾವ ಕೂಡ ವಿಷ ಸೇವಿಸಿ ಸಾವು..!!

ದಾವಣಗೆರೆ :ಪ್ರಿಯಕರನೊಂದಿಗೆ ಪತ್ನಿ ಪರಾರಿ, ಮನನೊಂದು ಪತಿ ಆತ್ಮಹತ್ಯೆ.; ಮದುವೆ ಮಾಡಿಸಿದ್ದ ಮಾವ ಕೂಡ ವಿಷ ಸೇವಿಸಿ ಸಾವು..!!

TRAGEDY STORY
ದಾವಣಗೆರೆ: ಪರಪುರುಷನೊಂದಿಗೆ ಪತ್ನಿ ಪರಾರಿಯಾಗಿದ್ದರಿಂದ ಮನನೊಂದು ಆಕೆಯ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ತಾನು ಮಾಡಿಸಿದ ಮದುವೆ ಹೀಗಾಯಿತಲ್ಲ ಎಂದು ಪತ್ನಿಯ ಸೋದರ ಮಾವ ಕೂಡ ವಿಷ ಸೇವಿಸಿ ಕೊನೆಯುಸಿರೆಳೆದ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದ ಪತಿ ಹರೀಶ್ (30) ಹಾಗೂ ಪತ್ನಿಯ ಸೋದರ ಮಾವ ರುದ್ರೇಶ್ (36) ಆತ್ಮಹತ್ಯೆಗೆ ಶರಣಾದವರು. ಸರಸ್ವತಿ ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ. ಘಟನೆ ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ನಡೆದಿದೆ. ಎರಡೂವರೆ ತಿಂಗಳ ಹಿಂದೆಯಷ್ಟೇ ಆನೆಕೊಂಡ ಗ್ರಾಮದ ಸರಸ್ಪತಿಯನ್ನು ಹರೀಶ್ ವಿವಾಹವಾಗಿದ್ದರು. ಮದುವೆ ಆಗಿ ಎರಡೂವರೆ ತಿಂಗಳ ಬಳಿಕ ಸರಸ್ವತಿ ದೇವಾಲಯಕ್ಕೆ ಹೋಗಿಬರುತ್ತೇನೆಂದು ಹೋದವಳು ಕುಮಾರ್ ಎಂಬ ಪರಪುರುಷನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಮನನೊಂದ ಆಕೆಯ ಪತಿ ಹರೀಶ್ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಷಯ ತಿಳಿದು ರುದ್ರೇಶ್ (36) ಕೂಡ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರೀಶ್ ಹಾಗೂ ಸರಸ್ಪತಿ ನೂರ್ಕಾಲ ಸುಖವಾಗಿ ಬಾಳಿ ಬದುಕಲೆಂದು ಸರಸ್ಪತಿಯ ಸೋದರಮಾವ ರುದ್ರೇಶ್ ತಾನೇ ಮುಂದೆ ನಿಂತು ಈ ಮದುವೆ ಮಾಡಿಸಿದ್ದ. ಆರಂಭದಿಂದ ಮದುವೆಯವರೆಗೂ ಎಲ್ಲವನ್ನೂ ಇವರೇ ನೋಡಿಕೊಂಡಿದ್ದರು.

ಹರೀಶ್ ಮತ್ತು ರುದ್ರೇಶನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪರಪುರುಷನೊಂದಿಗೆ ಓಡಿ ಹೋಗಿ ಇಬ್ಬರ ಸಾವಿಗೆ ಕಾರಣವಾದ ಸರಸ್ಪತಿ ಸೇರಿದಂತೆ ಆಕೆಯ ಕುಟುಂಬಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹರೀಶ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೇ, ದಾವಣಗೆರೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಹರೀಶ್ ಬರೆದ ಡೆತ್ ನೋಟ್​ನಲ್ಲಿ ಏನಿದೆ?: ನಾನು ಸರಸ್ವತಿಯನ್ನು ಮದುವೆಯಾಗಿದ್ದೆ. ಆದರೆ, ಅವಳು ಕುಮಾರ್ ಎಂಬಾತನೊಂದಿಗೆ ಓಡಿ ಹೋಗಿದ್ದಾಳೆ. ನಾನೇ ತೊಂದರೆ ಕೊಡುತ್ತಿದ್ದೆ ಅಂತ ಸುಳ್ಳು ಹೇಳಿ ನನ್ನ ಮಾನ ಕಳೆದಿದ್ದಾಳೆ. ಕರೆ ಮಾಡಿ ಏನೂ ನಡೆದಿಲ್ಲ ಎಂಬಂತೆ ವರ್ತಿಸುತ್ತಿದ್ದಳು. ಇದರ ಬಗ್ಗೆ ಇಡೀ ಗ್ರಾಮಸ್ಥರಿಗೂ ಗೊತ್ತು. ಅವರ ಮಾವನಾದ ಗಣೇಶ್ ಮತ್ತು ಇವರ ಚಿಕ್ಕಮ್ಮ ಆಂಜೀನಮ್ಮ ನನಗೆ ಮತ್ತು ನಮ್ಮ ತಂದೆ - ತಾಯಿಗೆ ಜೀವ ಬೆದರಿಕೆ ಹಾಕಿ ಅವಳನ್ನು ಪು‌ನಃ ನಮ್ಮ ಮನೆಗೆ ಬಿಡಲು ಪ್ರಯತ್ನಿಸಿದ್ದರು. ಇದರ ಜೀವ ಬೆದರಿಕೆ ಸಹಿಸಲಾಗುತ್ತಿಲ್ಲ. ನನಗೆ ಹಣ ಆಸ್ತಿಗಿಂತ ಮಾನ ಮರ್ಯಾದೆ ಮುಖ್ಯ. ಹಾಗಾಗಿ ಇಂತವರ ವಿರುದ್ಧ ನಮ್ಮ ಸಂವಿಧಾನ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ಇದೆ. ಸರಸ್ವತಿ, ಗಣೇಶ್, ಆಂಜೀನಮ್ಮ ಈ ಮೂವರು ನನ್ನ ಸಾವಿಗೆ ಕಾರಣ ಎಂದು ಹರೀಶ್​​ ಆತ್ಮಹತ್ಯೆಗೂ ಮುನ್ನ ಬರೆದಿದ್ದಾನೆ ಎನ್ನಲಾದ ಡೆತ್ ನೋಟ್​ ಪತ್ತೆಯಾಗಿದೆ.

ಹರೀಶ್​ ತಂದೆ ಮಹಾರುದ್ರಪ್ಪ ಹೇಳಿದ್ದಿಷ್ಟು: ಮೃತ ಹರೀಶ್ ತಂದೆ ಮಹಾರುದ್ರಪ್ಪ ಮಾತನಾಡಿ "ದೇವಾಲಯಕ್ಕೆ ಹೋಗ್ತೀನಿ‌ ಎಂದವಳು ಅಲ್ಲಿಂದಲೇ ಕಾರಿನಲ್ಲಿ ಹೋಗಿದ್ದಾಳೆ‌. ಅವಳನ್ನು ಹಿಡಿದು ಕರೆಸಿ ಪಂಚಾಯಿತಿ ಮಾಡಿದ್ದೆವು. ಮದುವೆ ಆಗಿ ಎರಡೂವರೆ ತಿಂಗಳು ಕಳೆದಿತ್ತು. ಏಕಾಏಕಿ ಹೋಗಿದ್ದಾಳೆ. ಬಳಿಕ ಬಂದು ಪೊಲೀಸರ ಮುಂದೆ ಇವರೇ ನನಗೆ ಕಾಟ ಕೊಡುತ್ತಿದ್ದರೆಂದು ಸುಳ್ಳು ಹೇಳಿಕೆ ಕೊಟ್ಟಿದ್ದಳು. ಸರಸ್ವತಿ ಹಾಗೂ ಕುಮಾರ ಇಬ್ಬರು ಹೊಲದ ಬಳಿ ತೆರಳಿ ನನ್ನ ಮಗನಿಗೆ ಬೆದರಿಕೆ ಹಾಕಿದ್ದಾರೆ. ಅದರಿಂದ‌ ನನ್ನ ಮಗ ಮನನೊಂದು ನೇಣಿಗೆ ಶರಣಾಗಿದ್ದಾನೆ. ಅವರಿಗೆ ಶಿಕ್ಷೆ ಆಗಿ ನಮಗೆ ನ್ಯಾಯ ಸಿಗಬೇಕು. ಕುಮಾರ, ಗಣೇಶ, ಆಂಜೀನಮ್ಮ, ಸರಸ್ವತಿ ಅವರ ಹೆಸರು ಬರೆದಿಟ್ಟು ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಮಾರನೇ ನನ್ನ ಸೊಸೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ನಾವು ದೂರು ನೀಡಿದ್ದೇವೆ‌" ಎಂದು ಅಳಲು ತೋಡಿಕೊಂಡರು.

ಮೃತ ಹರೀಶ್ ಸಂಬಂಧಿ ಮೂರ್ತಿ ಮಾತನಾಡಿ "ಮೃತ ಹರೀಶ್​ ನಮ್ಮ ಅಣ್ಣನ ಮಗ. ಎರಡೂವರೆ ತಿಂಗಳ ಹಿಂದೆಯಷ್ಟೇ ಸರಸ್ವತಿಯೊಂದಿಗೆ ಮದುವೆಯಾಗಿದ್ದ. ಆದರೆ, ಸರಸ್ವತಿಯು ಕುಮಾರ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳಂತೆ. ಮದುವೆ ವೇಳೆ ಯಾರಿಗೂ ಗೊತ್ತಿರಲಿಲ್ಲ. ಆದರೆ, ಆ ಹುಡುಗ ಊರಿಗೆ ಕಾರು ತಂದಿದ್ದಲ್ಲದೇ ಸರಸ್ವತಿಯನ್ನು ಕರೆದುಕೊಂಡು ಹೋಗಿದ್ದ. ಪಂಚಾಯಿತಿ ಬಳಿಕ ಕರೆಸಿಕೊಂಡಾಗ ಹರೀಶನಿಗೆ ಬೆದರಿಕೆ ಹಾಕಿದ್ದರು. ಇವರ ಬೆದರಿಕೆ ತಾಳಲಾರದೇ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗೆ ಅಂತ ಮೊದಲೇ ನಮಗೆ ಗೊತ್ತಾಗಿದ್ದರೆ ಏನಾದರೂ ಬೇರೆ ಮಾರ್ಗ ಹುಡುಕುತ್ತಿದ್ದೆವು. ಪತ್ನಿ ತನ್ನ ಮೊಬೈಲ್ ಮುಟ್ಟಬೇಡ ಎಂದಾಗ ಹರೀಶನಿಗೆ ಅನುಮಾನ ಬಂದಿದೆ. ಆದರೆ, ಅಷ್ಟೊತ್ತಿಗಾಗಲೇ ಸರಸ್ವತಿಯ ಲೆಕ್ಕಾಚಾರ ಬದಲಾಗಿತ್ತು. ಪತ್ನಿ ತನ್ನನ್ನು ಬಿಟ್ಟು ಹೋಗಿರುವುದು, ಅವರಿಂದ ಮನನೊಂದು ಹರೀಶ್​ ಈ ರೀತಿ ಮಾಡಿಕೊಂಡಿದ್ದಾನೆ. ಮದುವೆ ಮಾಡಿಸಿದ್ದ ಸರಸ್ವತಿ ಅವರ ಮಾವ ರುದ್ರೇಶ್ ಕೂಡ ಈ ವಿಚಾರ ತಿಳಿದು ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ಬೇಸರ ಹೊರಹಾಕಿದರು.

ಪ್ರಕರಣದ ಕುರಿತು ದಾವಣಗೆರೆ ಗ್ರಾಮಾಂತರ ಠಾಣೆಯ ಪಿಐ ಅಣ್ಣಯ್ಯ ಮಾತನಾಡಿ "ಹರೀಶ್ ನಾಲ್ವರ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕುಟುಂಬಸ್ಥರು ಎಫ್ಐಆರ್ ದಾಖಲು ಮಾಡಿದ್ದಾರೆ.‌ ಅವರ ಪತ್ನಿಯ ಮಾವ ರುದ್ರೇಶ್ ಕೂಡ ವಿಷ ಸೇವಿಸಿ ಕೊನೆಯುಸಿರೆಳೆದಿದ್ದಾರೆ. ಡೆತ್ ನೋಟ್​ನಲ್ಲಿ ಉಲ್ಲೇಖಿಸಿರುವ ಆರೋಪಿಗಳ ಹುಡುಕಾಟ ನಡೆದಿದೆ. ತನಿಖೆ ಬಳಿಕ ಮಾಹಿತಿ ಲಭ್ಯವಾಗಲಿದೆ" ಎಂದರು.

Ads on article

Advertise in articles 1

advertising articles 2

Advertise under the article