ಮಂಗಳೂರು :ಲವ್ ಜಿಹಾದ್ ಆರೋಪ ; ಸುರತ್ಕಲ್ ಲೇಡಿಸ್ ಪಿಜಿಯಲ್ಲಿ ಹುಡುಗರು ಉಳಿಯುತ್ತಿದ್ದರೇ? ಕೇರಳ ಪೊಲೀಸರ ಬಗ್ಗೆ ನಂಬಿಕೆ ಇಲ್ಲ, ಮಗಳೊಂದಿಗೆ 2 ನಿಮಿಷ ಮಾತಾಡಲು ಅವಕಾಶ ಕೊಡಲಿಲ್ಲ.. ನಮ್ಮನ್ನು ಅಪರಾಧಿಗಳಂತೆ ಕಂಡರು..!!!
ಮಂಗಳೂರು, ಫೆ.12 : ಕೇರಳದ ವಯನಾಡು ಮೂಲದ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿರುವ ಕಾಸರಗೋಡಿನ ಹಿಂದು ಯುವತಿ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಇದಲ್ಲದೆ, ಯುವತಿ ಇದ್ದ ಸುರತ್ಕಲ್ ನ ಪಿಜಿ ಕೇಂದ್ರದಲ್ಲಿ ಹುಡುಗ- ಹುಡುಗಿ ಜೊತೆಗಿರುವುದಕ್ಕೆ ಅವಕಾಶ ನೀಡಿರುವ ಬಗ್ಗೆಯೂ ಆರೋಪಗಳನ್ನು ಹೊರಿಸಲಾಗಿದೆ.
ಯುವತಿ ತಂದೆ, ತಾಯಿ ಸೇರಿದಂತೆ ಹಿಂದು ಜಾಗರಣ ವೇದಿಕೆ ಮುಖಂಡರು ಸುದ್ದಿಗೋಷ್ಟಿ ನಡೆಸಿದ್ದು ಹಲವು ವಿಚಾರಗಳನ್ನು ಹೇಳಿ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಹೆತ್ತವರು ತಮ್ಮನ್ನು ವಯನಾಡಿನ ಠಾಣೆಗೆ ಕರೆದೊಯ್ದರೂ ಅಲ್ಲಿ ತಮಗೆ ಮಗಳೊಂದಿಗೆ ಎರಡು ನಿಮಿಷ ಮಾತನಾಡುವುದಕ್ಕೂ ಅವಕಾಶ ಕೊಡಲಿಲ್ಲ. ನಮ್ಮನ್ನು ನೋಡುತ್ತಲೇ ಅಳುತ್ತ ಬಂದ ಮಗಳು, ನಾನು ನಿಮ್ಮಿಂದ ದೂರವಾಗಲ್ಲ. ನಿಮ್ಮ ಜೊತೆಗೆ ಬರುತ್ತೇನೆ ಎಂದಿದ್ದಾಳೆ. ಅದೇ ರೀತಿ ಬರೆದು ಕೊಟ್ಟಿದ್ದಾಳೆ.

ಆದರೆ ಇದರ ಬೆನ್ನಲ್ಲೇ ಆಕೆಯ ಜೊತೆಗಿದ್ದ ಯುವಕ ಠಾಣೆಯ ಒಳಗಡೆ ಕರೆದೊಯ್ದು ಒಂದು ಗಂಟೆಗೂ ಹೆಚ್ಚು ಕಾಲ ಆಕೆಯೊಂದಿಗೆ ಮಾತನಾಡಿದ್ದು ಬ್ರೇನ್ ವಾಷ್ ಮಾಡಿದ್ದಾನೆ. ಆತನೊಂದಿಗೆ ಇತರ 15ರಷ್ಟು ಮಂದಿ ಇದ್ದರು. ನಮ್ಮನ್ನು ಮಾತ್ರ ಅಲ್ಲಿನ ಪೊಲೀಸರು ಠಾಣೆಯ ಒಳಗಡೆ ಸೇರಿಸಲಿಲ್ಲ. ಆನಂತರ, ನಮ್ಮಲ್ಲಿಗೆ ಬಂದು ಹುಡುಗನ ಜೊತೆಗೇ ತೆರಳುವುದಾಗಿ ಹೇಳಿದ್ದಾಳೆ. ಅಲ್ಲಿನ ಪೊಲೀಸರಲ್ಲಿ ನಮಗೆ ನಂಬಿಕೆಯಿಲ್ಲ. ನಮ್ಮನ್ನು ಅಪರಾಧಿಗಳಂತೆ ನೋಡಿದ್ದಾರೆ. ಮಗಳನ್ನು ಮುಟ್ಟುವುದಕ್ಕು ಬಿಡಲಿಲ್ಲ. ನಮ್ಮ ಮಗಳು ನಮಗೆ ಬೇಕು, ನಮಗೆ ನ್ಯಾಯ ಕೊಡಿಸಬೇಕಾಗಿದೆ ಎಂದು ಹೆತ್ತವರು ಹೇಳಿದ್ದಾರೆ.
ಮಗಳು ಪರಾರಿಯಾದ ವಿಚಾರ ಹೇಗೆ ಗೊತ್ತಾಯ್ತು ಎಂಬ ಪ್ರಶ್ನೆಗೆ, ಫೆ.8ರಂದು ಆಕೆಯನ್ನು ರಿಜಿಸ್ಟರ್ ಮದುವೆಯಾಗುವ ಬಗ್ಗೆ ವಯನಾಡಿನ ರಿಜಿಸ್ಟರ್ ಕಚೇರಿಯಲ್ಲಿ ಅಂಟಿಸಿದ್ದ ಪೋಸ್ಟರ್ ವಾಟ್ಸಪ್ ಸಂದೇಶ ಬಂದಿತ್ತು. ಅದರಂತೆ, ಆಕೆಯನ್ನು ಪ್ರಶ್ನಿಸಿದಾಗ ಸ್ವಲ್ಪ ಹೊತ್ತಿನಲ್ಲಿ ಫೋನ್ ಸ್ವಿಚ್ ಆಫ್ ಮಾಡಿದ್ದಳು. ಶ್ರೀನಿವಾಸ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಕಳೆದ ಮೇ ತಿಂಗಳಲ್ಲಿ ಮುಗಿಸಿದ್ದು, ಆನಂತರ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಳು. ಆನಂತರವೂ ಸುರತ್ಕಲ್ ಪಿಜಿ ಕೇಂದ್ರಕ್ಕೆ ಸ್ನೇಹಿತೆಯರಿದ್ದಾರೆಂದು ಅಲ್ಲಿಗೆ ಬಂದು ಹೋಗುತ್ತಿದ್ದಳು. ಅಕ್ಕ ಮತ್ತು ತಂಗಿಯೊಂದಿಗೆ ಈ ಬಗ್ಗೆ ಹೇಳುತ್ತಿದ್ದಳು. ಫೆ.7ರಂದು ರಾತ್ರಿ ಫೋನ್ ಮಾಡಿದ್ದಾಗ ಪಿಜಿಯಲ್ಲಿ ಇರುವುದಾಗಿ ಹೇಳಿದ್ದರಿಂದ ಮರುದಿನ ಭಾನುವಾರ ನಾವು ಅಲ್ಲಿಗೆ ತೆರಳಿದ್ದೆವು. ಆದರೆ ಅಲ್ಲಿ ಆಕೆ ಇರಲಿಲ್ಲ, ಮೊಹಮ್ಮದ್ ಜೊತೆಗೆ ಅಲ್ಲಿಂದ ತೆರಳಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು.
ಇದೇ ವೇಳೆ, ಅಲ್ಲಿನ ಪಿಜಿಯಲ್ಲಿ ವೈಶಾಲಿ ಸ್ನೇಹಿತೆಯರಾಗಿದ್ದ ಇಬ್ಬರು ಹೆಣ್ಮಕ್ಕಳು ಒಬ್ಬ ಯುವಕನ ಜೊತೆಗೆ ಕೊಠಡಿಯಿಂದ ಹೊರ ಬರುವುದನ್ನು ಕಂಡೆವು. ನೀವೇನು ಇಲ್ಲಿ ಹುಡುಗನ ಜೊತೆಗಿದ್ದೀರಿ ಎಂದು ಕೇಳಿದ್ದಕ್ಕೆ, ಅದು ನಮ್ಮಿಷ್ಟ. ನಾವೂ ದೊಡ್ಡವರಾಗಿಲ್ಲವೇ ಎಂದು ಉತ್ತರಿಸಿದರು ಎಂದು ನಾಪತ್ತೆಯಾಗಿರುವ ವೈಶಾಲಿಯ ತಾಯಿ ಆತಂಕ ಹೇಳಿಕೊಂಡರು. ಹಾಗಾದರೆ, ಅಲ್ಲಿನ ಪಿಜಿಯಲ್ಲಿ ಹುಡುಗರೊಂದಿಗೆ ಲಿವ್ ಇನ್ ರಿಲೇಷನ್ ಇರಲು ಅವಕಾಶ ನೀಡಲಾಗಿತ್ತೇ ಎನ್ನುವ ಪ್ರಶ್ನೆ ಬಂದಿದೆ.
ಇದೇ ವಿಚಾರದಲ್ಲಿ ಮಾತನಾಡಿದ ಹಿಂಜಾವೇ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಪಿಜಿಯಲ್ಲಿ ಹುಡುಗ- ಹುಡುಗಿ ಜೊತೆಗಿರುವುದಕ್ಕೆ ಹೇಗೆ ಅವಕಾಶ ಕೊಟ್ಟಿದ್ದಾರೆ, ಪೊಲೀಸರು ಯಾಕೆ ಇದರ ಬಗ್ಗೆ ತನಿಖೆ ನಡೆಸುತ್ತಿಲ್ಲ. ಅಲ್ಲಿನ ಪಿಜಿ ಸೆಂಟರ್ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲಿ ಯುವತಿಯರಿಗೆ ಡ್ರಗ್ಸ್ ಕೊಟ್ಟು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೇ ಎಂದು ಪ್ರಶ್ನೆ ಮಾಡಿದ್ದಾರೆ. ಡ್ರಗ್ಸ್ ಬಗ್ಗೆ ಮಂಗಳೂರು ಕಮಿಷನರ್ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಇಂಥ ಅಕ್ರಮ ಪಿಜಿಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಕೇರಳದಲ್ಲಿ ಅನೇಕ ಯುವತಿಯರನ್ನು ಲವ್ ಜಿಹಾದ್ ಮೂಲಕ ಬಲೆಗೆ ಬೀಳಿಸಿರುವ ಘಟನೆಗಳು ನಡೆದಿದ್ದು, ಇದು ಕೂಡ ಅಂತಹದ್ದೇ ಕೃತ್ಯ. ನಾವು ಇದನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದರು.
ಮದುವೆಯಾಗಿ ಒಳ್ಳೆದಾಗಿ ಇರುವುದಕ್ಕೆ ನಮ್ಮದೇನು ಅಡ್ಡಿಯಿಲ್ಲ. ಆದರೆ ಇಂತಹ ಪ್ರಕರಣಗಳಲ್ಲಿ ಹೆಚ್ಚಿನ ಯುವತಿಯರನ್ನು ತಮ್ಮ ಕೆಲಸ ಮುಗಿಸಿ ವಿದೇಶಗಳಿಗೆ ಮಾರಾಟ ನಡೆಸುತ್ತಾರೆ. ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಇದೊಂದು ಭಯಾನಕ ಜಾಲವಾಗಿದ್ದು ಇದರಲ್ಲಿ ಎಸ್ಡಿಪಿಐ ಕೈವಾಡ ಇದೆ. ಕೇರಳದಲ್ಲಿ ಅನೇಕ ಹಿಂದು ಮತ್ತು ಕ್ರಿಸ್ತಿಯನ್ ಯುವತಿಯರನ್ನು ಲವ್ ಜಿಹಾದ್ ಮೂಲಕ ಮತಾಂತರ ಮಾಡಿದ್ದಾರೆ ಎಂದು ನರಸಿಂಹ ಮಾಣಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಅಮಿತ್ ಗುಂಡಳಿಕೆ ಮತ್ತಿತರರು ಇದ್ದರು.