ಅಮೇರಿಕಾ :ಸ್ಮಶಾನಕ್ಕೆ ತಂದ ಶವ ಸುಡದೇ 200 ದೇಹಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪಿಗೆ 40 ವರ್ಷ ಜೈಲು ಶಿಕ್ಷೆ...!!
ಅಮೇರಿಕಾ: ಶವ ಸಂಸ್ಕಾರಕ್ಕೆ ತಂದ ಶವಗಳನ್ನು ಅಂತ್ಯಕ್ರಿಯೆ ಮಾಡದೇ ಅವುಗಳನ್ನು ಶೇಖರಿಸಿಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬರಿಗೆ ಅಮೆರಿಕದ ಕೋರ್ಟ್ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕೊಲೊರಾಡೋದಿಂದ 48 ಕಿಮೀ ದೂರದಲ್ಲಿ ಸ್ಮಶಾನ ಇದ್ದು, ಅದರ ಮಾಲೀಕತ್ವ ಹೊಂದಿರುವ ಜಾನ್ ಹಾಲ್ಫೋರ್ಡ್ ಎಂಬಾತ ಕಳೆದ 4 ನಾಲ್ಕು ವರ್ಷಗಳಿಂದ 200 ಶವಗಳನ್ನು ಅಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾನೆ. ಶವಗಳ ವಾಸನೆ ಬರುತ್ತಿರುವ ಆರೋಪದ ಮೇಲೆ ದೂರು ದಾಖಲಿಸಿದಾಗ, ಈ ಅಕ್ರಮ ಬೆಳಕಿಗೆ ಬಂದಿದೆ.
ಶವ ಸುಡದೇ ಅಕ್ರಮ ಸಂಗ್ರಹ: ಆರೋಪಿ ಜಾನ್ ಹಾಲ್ಫೋರ್ಡ್ ಸ್ಮಶಾನಕ್ಕೆ ತಂದ ಶವಗಳನ್ನು ಅಂತ್ಯಕ್ರಿಯೆ ಮಾಡದೆ, ದೇಹವನ್ನು ತನ್ನ ಮಾಲೀಕತ್ವದ ಕಟ್ಟಡದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾನೆ. ಶವಗಳನ್ನು ಯಾಕೆ ಸಂಗ್ರಹಿಸುತ್ತಿದ್ದ ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲವಾದರೂ, ದೇಹದ ಭಾಗಗಳನ್ನು ಮಾರಾಟ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಮಶಾನಕ್ಕೆ ಶವ ಹೊತ್ತ ತಂದು ಬಳಿಕ ಕುಟುಂಬಸ್ಥರಿಗೆ ಬೇರೊಂದು ಶವದ ಅಥವಾ ನಕಲಿ ಚಿತಾಭಸ್ಮವನ್ನು ನೀಡುತ್ತಿದ್ದ. ಈ ಕುರಿತು ಹಲವು ಕುಟುಂಬಗಳು ಕೋರ್ಟ್ನಲ್ಲಿ ಸಾಕ್ಷಿ ಹೇಳಿವೆ. ಈ ಬಗ್ಗೆ ಆರೋಪಿಯೂ ತಪ್ಪೊಪ್ಪಿಕೊಂಡಿದ್ದಾನೆ.
ಗರಿಷ್ಠ ಶಿಕ್ಷೆ ವಿಧಿಸಲು ಆಗ್ರಹ: ಅಕ್ರಮವಾಗಿ ಶವಗಳನ್ನು ಸಂಗ್ರಹಿಸಿ ಅವರ ಕುಟುಂಬಗಳ ಭಾವನೆಗೆ ಧಕ್ಕೆ ಆರೋಪದ ಮೇಲೆ ಆರೋಪಿ ಜಾನ್ಗೆ 50 ವರ್ಷ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ವಕೀಲರು ಪೀಠದ ಮುಂದೆ ವಾದಿಸಿದರು.
ವಾದ - ಪ್ರತಿವಾದದ ಬಳಿಕ ಶವಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಾನ್ ಹಾಳ್ಫೋರ್ಡ್ಗೆ 40 ವರ್ಷಗಳ ಜೈಲು ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿದೆ. ಇದಕ್ಕೆ ಸಾಥ್ ನೀಡಿದ ಆತನ ಮಾಜಿ ಪತ್ನಿಗೂ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಕಟಕಟೆಯಲ್ಲಿ ಪಶ್ಚಾತ್ತಾಪ ಅನುಭವಿಸಿದ ಆರೋಪಿ: ಕೋರ್ಟ್ನಲ್ಲಿ ವಿಚಾರಣೆಯ ವೇಳೆ ಆರೋಪಿ ಜಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ, ಇದು ಕ್ಷಮಿಸಲಾಗದ, ರಾಕ್ಷಸೀ ಕೃತ್ಯ ಎಂದು ಹೇಳಿಕೊಂಡಿದ್ದಾನೆ. ಶವಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಾಗ ರಾತ್ರಿ ವೇಳೆ ಕೆಟ್ಟ ಕನಸುಗಳನ್ನು ಕಂಡಿದ್ದೇನೆ. ಮಾನಸಿಕ ಹಿಂಸೆಯೂ ಆಗಿದೆ. ಆದರೆ, ಈ ತಪ್ಪಿನಿಂದ ನಾನು ಹೊರಬರಲಿಲ್ಲ. ನನ್ನಿಂದಾದ ಪ್ರಮಾದದ ಬಗ್ಗೆ ವಿಷಾದವಿದೆ ಮತ್ತು ಈ ಬಗ್ಗೆ ಕ್ಷಮೆ ಕೋರುತ್ತೇನೆ ಎಂದಿದ್ದಾನೆ.
ಹಣದ ದುರಾಸೆಯಿಂದಾಗಿ ಆರೋಪಿಯು ಶವಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾನೆ. ಮೃತರ ಕುಟುಂಬಗಳಿಗೆ ಕಾಂಕ್ರೀಟ್ನ ಧೂಳನ್ನು ಚಿತಾಭಸ್ಮ ಎಂದು ಕೊಟ್ಟು ನಂಬಿಸಿದ್ದಾನೆ. ಈತನ ವಿರುದ್ಧ ಕಠಿಣ ಶಿಕ್ಷೆ ಜರುಗಿಸಬೇಕು ಎಂದು ತನಿಖಾಧಿಕಾರಿಗಳು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಕೊಲೊರಾಡೋದಲ್ಲಿ ಅಂತ್ಯಕ್ರಿಯೆ ನಡೆಸುವ ಸ್ಮಶಾನಗಳಿಗೆ ಪರವಾನಗಿ ಪಡೆಯುವ ಅಗತ್ಯವಿಲ್ಲ. ಇಲ್ಲಿ, ವ್ಯಕ್ತಿ ಮೃತಪಟ್ಟ 24 ಗಂಟೆಗಳೊಳಗೆ ಹೂಳಬೇಕು ಅಥವಾ ಸೂಕ್ತ ರೀತಿಯಲ್ಲಿ ಶೈತ್ಯಾಗಾರದಲ್ಲಿ ಸಂರಕ್ಷಿಸಿಡಬೇಕು ಎಂಬ ನಿಯಮವಿದೆ.