ಸುಬ್ರಮಣ್ಯ: ಪವಿತ್ರ ಕುಕ್ಕೆ ಕುಮಾರಧಾರ ನದಿಗೆ ಕಲುಷಿತದ ಕಳೆ: ಸ್ನಾನಘಟ್ಟದಲ್ಲಿ ಸ್ವಚ್ಛತೆ ಮರೆತ ಯಾತ್ರಿಕರು..!!

ಸುಬ್ರಮಣ್ಯ: ಪವಿತ್ರ ಕುಕ್ಕೆ ಕುಮಾರಧಾರ ನದಿಗೆ ಕಲುಷಿತದ ಕಳೆ: ಸ್ನಾನಘಟ್ಟದಲ್ಲಿ ಸ್ವಚ್ಛತೆ ಮರೆತ ಯಾತ್ರಿಕರು..!!

ಸುಬ್ರಹ್ಮಣ್ಯ /ದ.ಕ: ರಾಜ್ಯದ ಶ್ರೀಮಂತ ಹಾಗೂ ಪವಿತ್ರ ಯಾತ್ರಾಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರ ನದಿಯ ಸ್ನಾನಘಟ್ಟವು ಇತ್ತೀಚಿನ ದಿನಗಳಲ್ಲಿ ಗಂಭೀರ ಮಲಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇಲಾಖೆಯ ಸ್ಪಷ್ಟ ನಿರ್ದೇಶನಗಳಿದ್ದರೂ, ಕೆಲ ಯಾತ್ರಾರ್ಥಿಗಳ ನಿರ್ಲಕ್ಷ್ಯದಿಂದ ನದಿಯ ಸ್ವಚ್ಛತೆ ಹಾಗೂ ಪರಿಸರ ಸಮತೋಲನಕ್ಕೆ ಭಾರಿ ಧಕ್ಕೆ ಉಂಟಾಗುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಭಕ್ತರ ಹೆಚ್ಚಿದ ಆಗಮನದ ಜೊತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ, ಕೆಲವರ ಅಜಾಗರೂಕ ನಡೆ ಪವಿತ್ರ ಕುಮಾರಧಾರ ನದಿಯ ಶುದ್ಧತೆಯನ್ನು ಹಾಳು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸ್ನಾನಘಟ್ಟದಲ್ಲೇ ಸ್ವಚ್ಛತೆಗೆ ಭಂಗ: ಯಾತ್ರಾರ್ಥಿಗಳು ದರ್ಶನಕ್ಕೆ ಮುನ್ನ ಕುಮಾರಧಾರ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಸಂಪ್ರದಾಯ. ಆದರೆ, ಈ ಸಂದರ್ಭದಲ್ಲೇ ಕೆಲವರು ಧರಿಸಿದ ಬಟ್ಟೆಗಳು, ಒಳಉಡುಪುಗಳು, ಪ್ಲಾಸ್ಟಿಕ್ ಚೀಲಗಳು, ಮಕ್ಕಳ ಪ್ಯಾಡ್​ಗಳು ಹಾಗೂ ಇತರ ತ್ಯಾಜ್ಯಗಳನ್ನು ನದಿಯಲ್ಲೇ ಅಥವಾ ಸ್ನಾನಘಟ್ಟದ ಮೆಟ್ಟಿಲುಗಳ ಬಳಿ ಬಿಟ್ಟು ತೆರಳುತ್ತಿರುವುದು ಕಂಡು ಬರುತ್ತಿದೆ. ಪ್ರತಿ ವಾರವೂ ರಾಶಿ ರಾಶಿಯಾಗಿ ಬಟ್ಟೆ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಕಸ ಸಂಗ್ರಹವಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ನಾನಘಟ್ಟ ಹಾಗೂ ಕ್ಷೇತ್ರದ ಪರಿಸರವನ್ನು ಸ್ವಚ್ಛವಾಗಿ ಇಡಲು ಕಸದ ಬುಟ್ಟಿಗಳನ್ನು ಒದಗಿಸಲಾಗಿದ್ದರೂ, ಹೆಚ್ಚಿನ ಯಾತ್ರಿಕರು ಇದನ್ನು ಬಳಸದೇ ಇರುವುದರಿಂದ ಸ್ವಚ್ಛತಾ ಯೋಜನೆಗಳು ಸಂಪೂರ್ಣ ಫಲ ನೀಡುತ್ತಿಲ್ಲ ಎನ್ನಲಾಗಿದೆ. ಶಬರಿಮಲೆ ಯಾತ್ರಾ ಅವಧಿಯಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತಿರುವುದೂ ಗಮನಕ್ಕೆ ಬಂದಿದೆ.


ನಿಷೇಧವಿದ್ದರೂ ಸೋಪ್ – ಶಾಂಪ್ ಬಳಕೆ: ರಾಜ್ಯಾದ್ಯಂತ ನದಿ ಸ್ನಾನಘಟ್ಟಗಳಲ್ಲಿ ಸೋಪು, ಶ್ಯಾಂಪೂ ಬಳಸಿ ಸ್ನಾನ ಮಾಡುವುದಕ್ಕೆ ನಿಷೇಧವಿದ್ದರೂ, ಕುಮಾರಧಾರ ಸ್ನಾನಘಟ್ಟದಲ್ಲಿ ಕೆಲವರು ಇದನ್ನು ಉಲ್ಲಂಘಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವರು ಸೋಪು ಬಳಸಿ ಬಟ್ಟೆಗಳನ್ನು ತೊಳೆಯುತ್ತಿರುವುದೂ ಕಂಡುಬಂದಿದ್ದು, ಇದು ನದಿ ನೀರಿನ ಗುಣಮಟ್ಟಕ್ಕೆ ಭಾರಿ ಹಾನಿ ಉಂಟುಮಾಡುತ್ತಿದೆ.

ಸ್ನಾನಘಟ್ಟದ ಬಳಿಯ ಅಂಗಡಿಗಳಲ್ಲಿ ಸೋಪು – ಶ್ಯಾಂಪೂ ಮಾರಾಟ ಮಾಡಬಾರದು ಎಂದು ಗ್ರಾಮ ಪಂಚಾಯತ್ ಸೂಚನೆ ನೀಡಿದ್ದರೂ, ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈ ಹಿಂದೆ ದಾಳಿ ನಡೆಸಿದ ಘಟನೆ ಕೂಡ ನಡೆದಿದೆ. ಆದರೂ ಕೆಲವರು ಭಕ್ತರೇ ತಮ್ಮೊಂದಿಗೆ ಸೋಪ್–ಶಾಂಪ್ ತರುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ.

ಪೂರಕ ಕ್ರಮಗಳಿಗೆ ಸಾರ್ವಜನಿಕರ ಒತ್ತಾಯ: ಇತ್ತೀಚೆಗೆ ಕುಮಾರಧಾರ ಸೇತುವೆಯಿಂದ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯಲು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಸೇತುವೆಯ ಎರಡೂ ಕಡೆ ತಡೆಬೇಲಿ ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ಸ್ನಾನಘಟ್ಟದ ಪರಿಸರ ರಕ್ಷಣೆಗೆ ಹೆಚ್ಚುವರಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು, ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾತ್ಮಕ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

"ಕುಮಾರಧಾರ ಸ್ನಾನಘಟ್ಟದಲ್ಲಿ ಸೋಪು ಬಳಕೆ ಹಾಗೂ ಪರಿಸರ ಮಲಿನವಾಗುತ್ತಿರುವ ಕುರಿತು ಮಾಹಿತಿ ಇದೆ. ಈಗಾಗಲೇ ಸ್ನಾನಘಟ್ಟದ ಬಳಿಯ ಅಂಗಡಿಗಳಿಗೆ ಸೋಪು – ಶ್ಯಾಂಪೂ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ. ಹಾಗೂ ದಾಳಿಯನ್ನೂ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸೋಪು–ಶ್ಯಾಂಪೂ ಬಳಸದಂತೆ ಜಾಗೃತಿ ಮೂಡಿಸಲಾಗುವುದು. ದೇವಸ್ಥಾನದ ಸಿಬ್ಬಂದಿ ಸಹಕಾರದಲ್ಲಿ ಏಕಾದಶಿ ದಿನದಂದು ಸ್ನಾನಘಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುವುದು."

- ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ


Ads on article

Advertise in articles 1

advertising articles 2

Advertise under the article