ಬೆಳಗಾವಿ:ಚೋರ್ಲಾ ಘಾಟ್ 400 ಕೋಟಿ ದರೋಡೆ ಪ್ರಕರಣಕ್ಕೆ ಮಹತ್ತರ ತಿರುವು ; ಪ್ರಮುಖ ಆರೋಪಿ ನಾಸಿಕ್ ಉದ್ಯಮಿ ಕಿಶೋರ್ ಸಾಳ್ವೆ ಪೊಲೀಸರಿಗೆ ಶರಣು....!!
ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಯಲ್ಲಿ ಕಿಶೋರ್ ಸಾಳ್ವೆ ಶರಣಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ಸರ್ಕಾರ ತನಿಖೆಗೆ ಎಸ್ಐಟಿ ರಚಿಸಿದ್ದು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ದೂರುದಾರ ಸಂದೀಪ್ ಪಾಟೀಲ್ ಅವರ ಕಿಡ್ನ್ಯಾಪ್ ಮತ್ತು 400 ಕೋಟಿ ದರೋಡೆಗೆ ಸಂಬಂಧಿಸಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ ಸಂಭಾಷಣೆಗಳನ್ನೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದರ ನಡುವೆ, ಎಸ್‌ಐಟಿ ತನಿಖೆಯ ವಿರುದ್ಧವೇ ದೂರುದಾರ ಸಂದೀಪ್ ಪಾಟೀಲ್ ಆರೋಪಗಳನ್ನು ಮಾಡಿದ್ದರು. ತನಿಖೆಯಲ್ಲಿ ಪಾರದರ್ಶಕತೆ ಇಲ್ಲ, ಒತ್ತಡದ ಹಾಗೂ ಏಕಪಕ್ಷೀಯ ತನಿಖೆ ನಡೆಯುತ್ತಿದೆ ಎಂದು ಅವರು ಫೇಸ್‌ಬುಕ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ದರೋಡೆ ನಡೆದಿರುವುದರಿಂದ ಅಲ್ಲಿಯೇ ದೂರು ದಾಖಲಿಸುವುದಾಗಿಯೂ ಹೇಳಿದ್ದು ಚರ್ಚೆಗೆ ಗ್ರಾಸವಾಗಿತ್ತು.
2025ರ ಅಕ್ಟೋಬರ್ 25ರಂದು ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್ ಪ್ರದೇಶದಲ್ಲಿ ಎರಡು ಕಂಟೇನರ್‌ಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರೂ. ಹಣವನ್ನು ದರೋಡೆ ಮಾಡಲಾಗಿದೆ ಎಂದು ನಾಸಿಕ್ ಮೂಲದ ಸಂದೀಪ್ ದತ್ತಾ ಪಾಟೀಲ್ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು. ದರೋಡೆಯಾದ ಹಣದಲ್ಲಿ ರದ್ದುಗೊಂಡ 2,000 ರೂ. ಮುಖಬೆಲೆಯ ನೋಟುಗಳು ಸೇರಿದ್ದವು ಎನ್ನಲಾಗಿದೆ. ಈ ಹಣವು ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್ ಅವರಿಗೆ ಸೇರಿದ್ದುದಾಗಿ ದೂರುದಾರರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಬಂಧನದೊಂದಿಗೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯಾಂಶಗಳು ಬಹಿರಂಗವಾಗುವ ನಿರೀಕ್ಷೆಯಿದೆ. ತನಿಖಾಧಿಕಾರಿಗಳು ಎಲ್ಲ ಆಯಾಮಗಳಿಂದಲೂ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.