ಮಂಗಳೂರು :ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಮತ್ತೆ ಹೈಕೋರ್ಟ್ ತಡೆ ; ಪುತ್ತೂರು ಎಸಿ, ಪೊಲೀಸರಿಗೆ ಮತ್ತೆ ಮುಖಭಂಗ...!

ಮಂಗಳೂರು :ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಮತ್ತೆ ಹೈಕೋರ್ಟ್ ತಡೆ ; ಪುತ್ತೂರು ಎಸಿ, ಪೊಲೀಸರಿಗೆ ಮತ್ತೆ ಮುಖಭಂಗ...!

ಮಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಗೆ ಗಡೀಪಾರು ಮಾಡಿ ಆದೇಶಿಸಿದ್ದ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶಕ್ಕೆ ಹೈಕೋರ್ಟ್ ಮತ್ತೊಮ್ಮೆ ತಡೆಯಾಜ್ಞೆ ವಿಧಿಸಿದ್ದು, ವಿವೇಚನೆ ಬಳಸಿ ಮರು ಆದೇಶ ನೀಡುವಂತೆ ಮತ್ತೆ ಸೂಚಿಸಿದೆ. 

ಈ ಹಿಂದೆಯೂ ಮಹೇಶ್ ಶೆಟ್ಟಿ ಗಡಿಪಾರಿಗೆ ಪುತ್ತೂರು ವಿಭಾಗಾಧಿಕಾರಿ ಆದೇಶ ನೀಡಿದ್ದರೂ ಹೈಕೋರ್ಟ್ ತಡೆ ಹಾಕಿ ಸರಿಯಾದ ಆದೇಶ ನೀಡಿ ಎಂದು ಎರಡು ತಿಂಗಳ ಹಿಂದೆ ಹೇಳಿತ್ತು. ಆನಂತರ, ಮತ್ತೊಮ್ಮೆ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ನೀಡಿದ್ದರು. ಆದರೆ ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ ವಾದ ಆಲಿಸಿದ ಬಳಿಕ ಮತ್ತೆ ತಡೆ ಹಾಕಲಾಗಿದ್ದು ಎಸಿ‌ ಸ್ಟೆಲ್ಲಾ ವರ್ಗೀಸ್ ಮುಖಭಂಗ ಅನುಭವಿಸಿದ್ದಾರೆ. 

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಒಂಬತ್ತು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿಗೆ ಗಡಿಪಾರು ಮಾಡಿದ್ದ ಆದೇಶವನ್ನು ಶನಿವಾರ ಕರ್ನಾಟಕ ಹೈಕೋರ್ಟ್‌ ಬದಿಗೆ ಸರಿಸಿದೆ. ಇದೇ ವೇಳೆ, ಗಡಿಪಾರು ವಿಚಾರದಲ್ಲಿ ವಿವೇಚನೆ ಬಳಸಿ ಮೂರು ವಾರಗಳಲ್ಲಿ ಹೊಸದಾಗಿ ಆದೇಶ ಮಾಡುವಂತೆ ಉಪ ವಿಭಾಗಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ. ಉಪ ವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಮಹೇಶ್‌ ತಿಮರೋಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿದೆ. 

ಉಪ ವಿಭಾಗಾಧಿಕಾರಿ ಮಹೇಶ್‌ ತಿಮರೋಡಿಗೆ ನೀಡಿರುವ ಶೋಕಾಸ್‌ ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಬಹುತೇಕ ಪ್ರಕರಣಗಳಲ್ಲಿ ತಿಮರೋಡಿ ಖುಲಾಸೆಯಾಗಿದ್ದಾರೆ. ಈ ವಿಚಾರವನ್ನು ಆಕ್ಷೇಪಣೆಯ ಮೂಲಕ ಉಪ ವಿಭಾಗಾಧಿಕಾರಿ ಗಮನಕ್ಕೆ ತರಲಾಗಿದೆ. ಇದನ್ನು ಪರಿಗಣಿಸದೇ ಉಪ ವಿಭಾಗಾಧಿಕಾರಿ ಗಡಿಪಾರು ಆದೇಶ ಮಾಡಿದ್ದಾರೆ. ಇದನ್ನು ರಿಟ್‌ ಅರ್ಜಿಯ ಮೂಲಕ ಪ್ರಶ್ನಿಸಲಾಗಿದೆ. ವಿವೇಚನೆ ಬಳಸಿ, ಸೂಕ್ತ ಆದೇಶ ಹೊರಡಿಸುವಂತೆ ಈ ಹಿಂದೆ ಸಕ್ಷಮ ನ್ಯಾಯಾಲಯ ಆದೇಶಿಸಿತ್ತು. ಅದಕ್ಕೆ ಅನುಗುಣವಾಗಿ, ತಿಮರೋಡಿಯ ಆಕ್ಷೇಪಣೆಯನ್ನು ಪರಿಗಣಿಸಿ, ವಿವೇಚನೆ ಬಳಸಿ, ಸೂಕ್ತ ಆದೇಶವನ್ನು ಹೊಸದಾಗಿ ಮೂರು ವಾರಗಳಲ್ಲಿ ಹೊರಡಿಸಬೇಕು ಎಂದು ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿ ನ್ಯಾಯಾಲಯವು ಅರ್ಜಿಯನ್ನು ಇತ್ಯರ್ಥಪಡಿಸಿದೆ.

Ads on article

Advertise in articles 1

advertising articles 2

Advertise under the article