ಬೆಂಗಳೂರು :ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗಿಯಲ್ಲಿ ಯುವರಾಜ್ ಸಿಂಗ್ ಫೌಂಡೇಶನ್ ಆರೋಗ್ಯ ಕ್ರಾಂತಿ, ನಾಲ್ಕು ಸಾವಿರ ಮಹಿಳೆಯರ ತಪಾಸಣೆ, 565 ಶಂಕಿತ ಪ್ರಕರಣ ಪತ್ತೆ...!!

ಬೆಂಗಳೂರು : ಭಾರತದಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಯುವಿ ಕ್ಯಾನ್ ಫೌಂಡೇಷನ್ ಆರಂಭಿಸಿರುವ ಸ್ವಸ್ಥ ಮಹಿಳೆ–ಸ್ವಸ್ಥ ಭಾರತ ಕಾರ್ಯಕ್ರಮ ಕಲಬರಗಿ ಜಿಲ್ಲೆಯಲ್ಲಿ ನಡೆದಿದ್ದು ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಯೋಜನೆಯ ಮೊದಲ ಹಂತದಲ್ಲಿ 14,000 ಮಹಿಳೆಯರನ್ನು ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದ್ದು, ಸೇವಾವಂಚಿತ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕರ್ನಾಟಕದ ಉತ್ತರ ಭಾಗ ಕಲಬುರಗಿ ಜಿಲ್ಲೆಯಲ್ಲಿ ನಾಲ್ಕು ಸಾವಿರ ಮಹಿಳೆಯರನ್ನು ಸ್ಕ್ರೀನಿಂಗ್ ಒಳಪಡಿಸಿದ್ದಾರೆ. ಈ ವೇಳೆ, 565 ಅನುಮಾನಾಸ್ಪದ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ಕು ಸ್ತನ ಕ್ಯಾನ್ಸರ್ ಪ್ರಕರಣಗಳು ದೃಢಪಟ್ಟಿವೆ.

ಮೊದಲ ಹಂತದಲ್ಲಿ ಸಮುದಾಯ ತಲುಪುವಿಕೆ ಮತ್ತು ಜಾಗೃತಿ ಶಿಬಿರಗಳ ಮೂಲಕ 21,000ಕ್ಕೂ ಹೆಚ್ಚು ಮಹಿಳೆಯರಿಗೆ ಸ್ತನ ಆರೋಗ್ಯ, ಸ್ವಯಂ ಪರೀಕ್ಷೆ ಮತ್ತು ಆರಂಭಿಕ ಪತ್ತೆಯ ಮಹತ್ವದ ಕುರಿತು ಮಾಹಿತಿ ನೀಡಲಾಗಿದೆ.
ಯೋಜನೆಯ ಕುರಿತು ಮಾತನಾಡಿದ ಯುವರಾಜ್ ಸಿಂಗ್, “ಸ್ತನ ಕ್ಯಾನ್ಸರ್‌ನಿಂದ ಉಂಟಾಗುವ ಸಾವುಗಳನ್ನು ಕಡಿಮೆ ಮಾಡಲು ಆರಂಭಿಕ ಪತ್ತೆ ಅತ್ಯಂತ ಮುಖ್ಯ. ನಮ್ಮಲ್ಲಿ ಚಿಕಿತ್ಸೆಯ ಕೊರತೆಯಿಲ್ಲ. ಜನರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿಯ ಕೊರತೆ ಇದೆ. ತಂತ್ರಜ್ಞಾನ ನೆರವಿನ ಸ್ಕ್ರೀನಿಂಗ್ ಮತ್ತು ಬೇರುಮಟ್ಟದ ಜಾಗೃತಿ ಮೂಲಕ ಸ್ತನ ಕ್ಯಾನ್ಸರ್ ಎದುರಿಸಲು ಸಾಧ್ಯವಿದೆ” ಎಂದು ಹೇಳಿದರು.
ಜುಲೈ 2024ರಲ್ಲಿ ಆರಂಭಗೊಂಡ ಬೃಹತ್ ಆರೋಗ್ಯ ಜಾಗೃತಿ ಕಾರ್ಯಕ್ರಮವು, 15 ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದ್ದು, ಹಿಂದುಳಿದ ಪ್ರದೇಶಗಳ ಮೇಲೆ ಕೇಂದ್ರೀಕೃತವಾಗಿದೆ. ರಾಷ್ಟ್ರ ಮಟ್ಟದಲ್ಲಿ 5 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಜಾಗೃತಿ ನೀಡಲಾಗಿದ್ದು, 2 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸ್ಕ್ರೀನಿಂಗ್, 2,700ಕ್ಕೂ ಹೆಚ್ಚು ಅನುಮಾನಾಸ್ಪದ ಪ್ರಕರಣಗಳ ಗುರುತಿಸಲಾಗಿದೆ. 13 ದೃಢಪಟ್ಟ ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಮೊದಲ ಹಂತದ ಯಶಸ್ಸಿನ ಆಧಾರದಲ್ಲಿ ಸ್ವಸ್ಥ ಮಹಿಳಾ–ಸ್ವಸ್ಥ ಭಾರತ ಎರಡನೇ ಹಂತವನ್ನೂ ಘೋಷಿಸಲಾಗಿದೆ.