ಮಂಗಳೂರು :ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ ಪ್ರಗತಿ, ವಸ್ತುಸ್ಥಿತಿ ವರದಿ ಕೇಳಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್...!!

ಮಂಗಳೂರು, ಫೆ.4 : ಧರ್ಮಸ್ಥಳದಲ್ಲಿ 1990ರಿಂದ 2021ರ ನಡುವೆ ಸಂಭವಿಸಿವೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ ಈಗಿನ ವಸ್ತುಸ್ಥಿತಿ, ಈವರೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಸರಕಾರದ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ "74 ಅಸಹಜ ಸಾವುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಬಹುತೇಕ ಮಿಸ್ಸಿಂಗ್ ಪ್ರಕರಣಗಳು ಮುಕ್ತಾಯವಾಗಿವೆ. ಆದರೂ ಯಾವ ಪ್ರಕರಣ ಯಾವ ಹಂತದಲ್ಲಿದೆ. ಈವರೆಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಂಪೂರ್ಣ ವಿವರಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎಸ್.ಬಾಲನ್, '"ಎಲ್ಲಾ 74 ಕೂಡ ತನಿಖೆ ಮತ್ತು ವಿಚಾರಣೆ ಗೊಳಪಡಿಸಬೇಕಾದ ಪ್ರಕರಣಗಳಾಗಿವೆ ಎಂದರು. ಅದಕ್ಕೆ ನ್ಯಾಯಪೀಠ, "ಮೊದಲು ಸರಕಾರದಿಂದ ಮಾಹಿತಿ ಬರಲಿ, ನಂತರ ಮುಂದಿನ ವಿಚಾರ ನೋಡೋಣ ಎಂದು ಹೇಳಿತು. ಅಲ್ಲದೆ, ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಪ್ರಕರಣಗಳ ಈಗಿನ ವಸ್ತುಸ್ಥಿತಿ, ಈವರೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕೆಂದಿರುವ ಕ್ರಮಗಳ ಕುರಿತು ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ಈ ಮಧ್ಯೆ, ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ರಾಜ್ಯ ಸರಕಾರವನ್ನು ಮಾಡಿಲ್ಲ ಎಂಬ ವಿಚಾರವನ್ನು ಸರಕಾರಿ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಈ ಸಂಬಂಧ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
"ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲೇ 74 ಅಸಹಜ ಸಾವುಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಈ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಸರಕಾರ ಎಸ್‌ಐಟಿ ರಚಿಸಿದೆ. ಆದರೆ, ಎಸ್‌ಐಟಿ ಕೇವಲ ಒಂದು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಉಳಿದ ನಾಪತ್ತೆ, ಸಾವು, ಕೊಲೆ ಪ್ರಕರಣಗಳಿಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.