ನವದೆಹಲಿ :ಕೋವಿಡ್‌ಗಿಂತಲೂ ಇದು ಭೀಕರ! ಎಐನಿಂದ ಉದ್ಯೋಗ ಕಡಿತದ ಆತಂಕ..!!

ನವದೆಹಲಿ :ಕೋವಿಡ್‌ಗಿಂತಲೂ ಇದು ಭೀಕರ! ಎಐನಿಂದ ಉದ್ಯೋಗ ಕಡಿತದ ಆತಂಕ..!!

ನವದೆಹಲಿ :2026 ಜನವರಿ ಆರಂಭವಾದಾಗಿನಿಂದ ಎದ್ದಿರುವ ಆ ಒಂದಿಷ್ಟು ಬದಲಾವಣೆಗಳು ಮನುಕುಲದ ಮುಂದೆ ಭಾರಿ ಬಿರುಗಾಳಿಯನ್ನೇ ಹೊತ್ತು ತರುತ್ತಿವೆ. ಅದರಲ್ಲೂ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಉದ್ಯೋಗ ಕಡಿತ.

ಹೌದು, ಎಐ ಎಂಬುದು ಸಹಜವಾಗಿ ಜಗತ್ತನ್ನು ಆವರಿಸಿಕೊಂಡು ಹೋಗುತ್ತಿದೆ ಎಂದೇ ಮೊನ್ನೆ ಮೊನ್ನೆವರೆಗೂ ಅನೇಕರು ಭಾವಿಸಿದ್ದರು. ಆದರೆ, ಈ ವರ್ಷಾರಂಭದಿಂದ ಎದ್ದಿರುವ ಆ ಎಐ ಅಲೆಗಳು ಉದ್ಯೋಗ ಹಾಗೂ ಆರ್ಥಿಕತೆ ಮೇಲೆ ಬಿರುಗಾಳಿ, ಚಂಡಮಾರುತವನ್ನೇ ಸೃಷ್ಟಿಸಲು ರೆಡಿಯಾಗಿವೆ.

ಪ್ರಕರಣ 1: ಇದೇ ಫೆಬ್ರುವರಿ 4ರಂದು ಅಮೆರಿಕ, ಭಾರತದಲ್ಲಿ ಐಟಿ ಸೇವೆಗಳು, ಕಾನೂನು ಸೇವೆಗಳನ್ನು ಒದಗಿಸುವ ಕೆಲವು ಕಂಪನಿಗಳ ಷೇರುಗಳ ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಒಂದೇ ದಿನ ಷೇರುಪೇಟೆ 28,500 ಕೋಟಿ ಡಾಲರ್‌ಗಳ ನಷ್ಟ ಅನುಭವಿಸಿತ್ತು. ಭಾರತದ ಷೇರುಪೇಟೆಯಲ್ಲಿ ಇನ್ನೊಸಿಸ್, ವಿಪ್ರೊ, ಟಿಸಿಎಸ್ ಮುಂತಾದ ಐಟಿ ಕಂಪನಿಗಳ ಷೇರುಗಳ ಮೌಲ್ಯ ಶೇ 7ರಷ್ಟು ಕುಸಿತ ಕಂಡರೆ, ಅಮೆರಿಕದ ಕಂಪನಿಗಳ ಷೇರುಗಳು ಶೇ 12ರಷ್ಟು ಕುಸಿತ ದಾಖಲಿಸಿದವು. ‘ಸಾಫ್ಟ್‌ವೇರ್ ಸೇವೆಗಳಲ್ಲಿ ಮಹಾಪ್ರಳಯ’ (SaaSpocalypse) ಎಂದೇ ಅದನ್ನು ಕರೆಯಲಾಯಿತು. ಇಂಥ ಮಹಾಪತನಕ್ಕೆ ಕಾರಣವಾಗಿದ್ದು ಒಂದು ಎಐ ಟೂಲ್.ಆಂತ್ರೋಪಿಕ್ ಎನ್ನುವ ಕೃತಕ ಬುದ್ಧಿಮತ್ತೆ (ಎಐ) ಕಂಪನಿಯು ಇದೇ ಜನವರಿಯಲ್ಲಿ ಕ್ಲಾಡ್ ಕೋವರ್ಕ್ (Claude Cowork) ಎನ್ನುವ ಎಐ ಏಜೆಂಟ್ ಅನ್ನು ಬಿಡುಗಡೆ ಮಾಡಿತ್ತು. ಆಂತ್ರೋಪಿಕ್‌ನ ಕ್ಲಾಡ್ ಚಾಟ್‌ಬಾಟ್ ಅಲ್ಪ ಅವಧಿಯಲ್ಲೇ ಭಾರಿ ಜನಪ್ರಿಯತೆ ಗಳಿಸಿತ್ತು. ಸಾಫ್ಟ್‌ವೇರ್ ಕೋಡಿಂಗ್ ಮಾಡುವವರಿಗಾಗಿಯೇ ಕ್ಲಾಡ್ ಕೋಡ್ ವಿಶೇಷ ಆವೃತ್ತಿ ಬಿಡುಗಡೆ ಮಾಡಿತ್ತು. ಅದರ ಕ್ಷಿಪ್ರ ಯಶಸ್ಸಿನಿಂದ ಸ್ಫೂರ್ತಿ ಪಡೆದ ಆಂತ್ರೋಪಿಕ್ ಕಂಪನಿಯು, ಕ್ಲಾಡ್ ಗೆ ಹೆಚ್ಚುವರಿ ಜನವರಿ ಅಂತ್ಯದಲ್ಲಿ ಪ್ಲಗ್-ಇನ್‌ಗಳನ್ನು ಬಿಡುಗಡೆ ಮಾಡಿತು.

ಸ್ವಯಂಚಾಲಿತವಾಗಿ ಕೆಲಸ ಮಾಡುವ ಇವುಗಳು ವಿಶ್ಲೇಷಣೆ, ಕೋಡಿಂಗ್‌ನಂತಹ ಸಂಕೀರ್ಣ ಕೆಲಸಗಳನ್ನೂ ಮಾಡುತ್ತವೆ. ಫೆಬ್ರುವರಿ ಮೊದಲ ವಾರದಲ್ಲಿ ಅದರ ಕಾರ್ಯನಿರ್ವಹಣೆಯಗಳು ಬಹಿರಂಗಗೊಂಡಿದ್ದು ಷೇರು ಮಾರುಕಟ್ಟೆಯಲ್ಲಿ ಹಾಗೂ ಉದ್ಯೋಗಗಳ ಸೃಷ್ಟಿಯಲ್ಲಿ ತಲ್ಲಣ ಉಂಟು ಮಾಡಿತು.

ಪ್ರಕರಣ 2 ; Hyperwrite ಎಂಬ ಎಐ ಸ್ಟಾರ್ಟ್‌ ಅಪ್ ಒಂದರ ಸಿಇಒ ಮ್ಯಾಟ್ ಶುಮರ್ ಎನ್ನುವರು ಎಐ ಎಬ್ಬಿಸಿರುವ ಅಲೆಯ ಬಗ್ಗೆ ಇತ್ತೀಚೆಗೆ ಒಂದು ಬ್ಲಾಗ್ ಬರೆದಿದ್ದರು. ಅದು ಭಾರಿ ವೈರಲ್ ಆಗಿದ್ದು ಅನೇಕರನ್ನು ಬೆಚ್ಚಿ ಬೀಳಿಸಿದೆ. ಅವರು ಹೇಳುವ ಪ್ರಕಾರ ಎಐ ನಾವು-ನೀವು ಅಂದುಕೊಂಡತಿಲ್ಲ, ಅದು ಭವಿಷ್ಯದಲ್ಲಿಲ್ಲ, ನಮ್ಮೊಳಗೆ ಈಗಾಗಲೇ ಅದು ಬಂದು ಬಿಟ್ಟಿದೆ. ವಾಸ್ತವದಲ್ಲಿದೆ ಎಂದು ಹೇಳಿದ್ದಾರೆ. ಇನ್ನೂ ಮುಂದುವರೆದು ಉದ್ಯೋಗಗಳ ಮೇಲೆ ಪರಿಣಾಮ ಬೀರಲು ಬಂದಿರುವ ಎಐ ಕೋವಿಡ್-19 ಅಲೆಗಿಂತಲೂ ಭೀಕರವಾಗಿರಲಿದೆ ಎಂದು ಬ್ಲಾಗ್‌ನಲ್ಲಿ ಹೇಳಿದ್ದಾರೆ. ಅವರ ಲೇಖನ ಪರ ವಿರೋಧದ ಭಾರಿ ಚರ್ಚೆಯನ್ನೇ ಹುಟ್ಟುಹಾಕಿದೆ. ಅಲ್ಲದೇ ಉದ್ಯೋಗ ಕಡಿತದ ಬಗ್ಗೆ ಆತಂಕವನ್ನೂ ಆವರಿಸಿಕೊಳ್ಳುವಂತೆ ಮಾಡಿದೆ. ಇನ್ನು 3 ವರ್ಷದಲ್ಲಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹೊಸ ಉದ್ಯೋಗಗಳ ಸೃಷ್ಟಿ ಆಗಲಿವೆ ಎಂದಾದರೂ ಅದರ ಪ್ರಮಾಣ ಕಡಿಮೆ ಇರಲಿದೆ. ಎಐ ಬಗ್ಗೆ ಅಸಡ್ಡೆ ಬೇಡವೇ ಬೇಡ ಎಂದು ಗಂಭೀರ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ಪ್ರಕರಣ 3: ಆಕಾಶದಲ್ಲೂ ಎಐ! ಬಾಹ್ಯಾಕಾಶದಲ್ಲಿ ಕೃತಕ ಬುದ್ದಿಮತ್ತೆ (ಎಐ) ಡೇಟಾ ಸೆಂಟರ್ ಸ್ಥಾಪಿಸಲು ಇಲಾನ್‌ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಭಾರಿ ಪ್ರಯತ್ನ ಆರಂಭಿಸಿದೆ. ಎಐ ಅಭಿವೃದ್ಧಿಗೆ ಡೇಟಾಸೆಂಟ‌ರ್ ಅಗತ್ಯ. ಅದರ ಕಾರ್ಯನಿರ್ವಹಣೆಗೆ ನಿರಂತರ ವಿದ್ಯುತ್‌ ಪೂರೈಕೆ ಬೇಕೆಬೇಕು. ಅಂತರಿಕ್ಷದಲ್ಲಿ ಎಐ ಡೇಟಾ ಸೆಂಟರ್ ಭೂಮಿಗಿಂತ 5 ಪಟ್ಟು ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಎಐ ಲೋಕಕ್ಕೆ ಇದು ಭಾರಿ ಲಾಭದಾಯಕ ಹಾಗೂ ಚಿಮ್ಮು ಹಲಗೆ. ಇದನ್ನು ಸ್ಪೇಸ್ ಎಕ್ಸ್ ಇನ್ನೇನು ಮೂರು ವರ್ಷಗಳಲ್ಲಿ ಸ್ಥಾಪಿಸಿ ಕೇಕೆ ಹಾಕಲಿದೆ ಎನ್ನಲಾಗಿದ್ದು, ಸ್ವತಃ ಇಲಾನ್ ಮಸ್ಕ್ ಅವರೇ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಪ್ರಕರಣ 4: ಎಐನಿಂದಾಗಿ ಇನ್ನೇನು ಐದೇ ಐದು ವರ್ಷಗಳಲ್ಲಿ ಐಟಿ ಮತ್ತು ಔಟ್ ಸೋರ್ಸ್ ಕೆಲಸಗಳು ಮಾಯವಾಗಲಿವೆ. 10-15 ವರ್ಷಗಳಲ್ಲಿ ಪರಿಣತಿ ಬೇಡುವ ಕೆಲಸಗಳೂ ಇಲ್ಲವಾಗಲಿವೆ’ ಎಂದು ಭಾರತ ಮೂಲದ ಅಮೆರಿಕನ್ ಟೆಕ್ ಉದ್ಯಮಿ, ಕೋಟ್ಯಧಿಪತಿ ವಿನೋದ್ ಖೋಸ್ಲಾ ದೆಹಲಿ ಎಐ ಸಮ್ಮಿಟ್‌ನಲ್ಲಿ ಹೇಳಿರುವುದು ವೈರಲ್ ಆಗಿದೆ. ‘ಎಐ ಬಂದು ಹೊಸ ಕಂಪನಿಗಳನ್ನು ಹುಟ್ಟುಹಾಕುತ್ತಿದೆ. ಇಷ್ಟು ವರ್ಷಗಳಲ್ಲಿ ಬಂದ ತಂತ್ರಜ್ಞಾನಗಳು ಕೆಲಸ ಮಾಡುವುದರಲ್ಲಿ ಸಹಾಯ ಮಾಡುತ್ತಿದ್ದರೆ, ಎಐ ಮಾತ್ರ ಮನುಷ್ಯರ ಕೆಲಸವನ್ನು ಮಾಡಲು ಆರಂಭಿಸಿದೆ. ಕಲೆ, ತ್ಯದಂತಹ ಸೃಜನಶೀಲ ಕ್ಷೇತ್ರಗಳು ಇದರಿಂದ ಶಿತಾಗಿದ್ದರೂ, 5 ವರ್ಷಗಳಲ್ಲಿ ಎಐ ಮಾನವರನ್ನು ಸರಿಗಟ್ಟುತ್ತದೆ. ಅಮೆರಿಕ ಸೇರಿದಂತೆ ವಿಶ್ವದ ಆರ್ಥಿಕತೆಯನ್ನೇ ಪರಿವರ್ತಿಸುತ್ತದೆ’ ಎಂದು ಬೋಸ್ಲಾ ಹೇಳಿರುವುದು ಅಚ್ಚರಿ ಆತಂಕವನ್ನು ಒಮ್ಮೊಟ್ಟಿಗೆ ತಂದಿದೆ.

ಪ್ರಕರಣ-5: ಭಾರತದ ನವದೆಹಲಿಯಲ್ಲಿ India AI Impact Summit 2026 ಇದೇ ಫೆಬ್ರುವರಿ 16ರಿಂದ 20ವರೆಗೆ ಆಯೋಜನೆಗೊಂಡಿರುವುದು ಜಾಗತಿಕವಾಗಿ ಸದ್ದು ಮಾಡಿದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹಾಗೂ ಗ್ರಾಹಕ ಮಾರುಕಟ್ಟೆ ಹೊಂದಿರುವ ಭಾರತಕ್ಕೆ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ಭಾರತ ದಾಪುಗಾಲು ಇಡುತ್ತಿರುವುದರಿಂದ ಈ ಎಐ ಟೆಕ್ ಸಮ್ಮಿಟ್ ದೇಶದ ಉದ್ಯಮಿಗಳ, ಟೆಕಿಗಳ, ಸಂಶೋಧಕರ, ವಿದ್ಯಾರ್ಥಿಗಳ ಭಾರಿ ಗಮನ ಸೆಳೆದಿದೆ. ಈ ಸಮ್ಮಿಟ್‌ನಲ್ಲಿ ಜಗತ್ತಿನ ಪ್ರಮುಖ ಟೆಕ್ ಕಂಪನಿಗಳಾದ ಗೂಗಲ್, ಮೈಕ್ರೋಸಾಫ್ಟ್, ಒಪನ್ ಎಐ, ಇನ್ಫೋಸಿಸ್, ವಿಪ್ರೊ, ಟಿಸಿಎಸ್, ಮೆಟಾ ಸೇರಿದಂತೆ ಅನೇಕ ದೈತ್ಯ ಕಂಪನಿಗಳ ಘಟಾನಾನುಘಟಿಗಳೇ ಹಾಜರಾಗಿ ಎಐ ಅನ್ನು ಹೊತ್ತು ಮೆರೆಸುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ಉದ್ಯೋಗ ಕಡಿತದ ಆತಂಕ ವ್ಯಾಪಕವಾಗುತ್ತಿದೆ. ಅದರಲ್ಲೂ ಯುವ ಪಡೆ ಜಾಸ್ತಿ ಇರುವ ಭಾರತಕ್ಕಂತೂ ಇನ್ನೂ ದೊಡ್ಡ ತಲೆನೋವಾಗಿದೆ. ಸಾಫ್ಟ್‌ವೇರ್ ಸೇವೆಗಳು, ಬ್ಯಾಂಕಿಗ್- ಹಣಕಾಸು ಸೇವೆ, ಔಟ್‌ಸೋರ್ಸಿಂಗ್‌, ಕಾನೂನು ಸೇವೆಯಂಥ ಮುಂತಾದ ವಲಯಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಉದ್ಯೋಗ ಕಡಿತಕ್ಕೆ ಪ್ರಮುಖ ಇವಾಗಲಿದೆ ಎನ್ನಲಾಗಿದೆ.

2023-24ರಲ್ಲಿ ಭಾರತದ ಪ್ರಮುಖ ಐಟಿ ಕಂಪನಿಗಳು ಹೊಸಬರ ನೇಮಕಾತಿಯನ್ನು ಗಣನೀಯವಾಗಿ ಕಡಿಮೆಗೊಳಿಸಿವೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ಸ್ಟಾರ್ಟ್‌ ಅಪ್‌ಗಳಲ್ಲಿ ಸುಮಾರು 30,000 ದಿಂದ 35,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಇತ್ತೀಚಿನ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

ಪರಿಸ್ಥಿತಿ ಹೀಗಿರುವಾಗ ಪ್ರತಿ ವರ್ಷ ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಇಂಜಿನಿಯರಿಂಗ್ ಪದವೀಧರರು ಕಾಲೇಜುಗಳಿಂದ ಹೊರಬರುತ್ತಿದ್ದಾರೆ.

ಅನೇಕ ಕಂಪನಿಗಳು ಈ ಹಿಂದೆ ಮಾಡುತ್ತಿದ್ದ ಬೃಹತ್ ನೇಮಕಾತಿ, ಕ್ಯಾಂಪಸ್‌ ಸೆಲೆಕ್ಷನ್ ನಿಲ್ಲಿಸಿವೆ. ಪದವಿಗಿಂತ ಹೆಚ್ಚಾಗಿ Productivity ತೋರುವವರಿಗೆ ಮಾತ್ರ ಮಣೆ ಹಾಕುತ್ತಿವೆ.

ಎಐನಿಂದಾಗಿ ಜನರು ಕೆಲಸ ಕಳೆದುಕೊಳ್ಳುವುದು ಒಂದು ಕಡೆಯಾದರೆ, ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಹೊಸ ಉದ್ಯೋಗಗಳ ಸೃಷ್ಟಿ ಕಡಿಮೆಯಾಗುತ್ತಿವೆ. ಎಐನ ಕಾರ್ಯದಕ್ಷತೆ ಹೆಚ್ಚಳ, ಅದರ ಸಹಾಯದಿಂದ ಕೆಲಸಗಳು ವೇಗವಾಗಿ ನಡೆಯುತ್ತಿರುವುದರಿಂದ ಕಂಪನಿಗಳಿಗೆ ಈಗ ಕಡಿಮೆ ಜನಬಲದ ಅವಶ್ಯಕತೆ ಸಾಕು ಎನಿಸುತ್ತಿದೆ. ಒಂದು ರೀತಿ ‘ಜಾಬ್ ಕಂಪ್ರೆಷನ್’ಗೆ ಜೈ ಎನ್ನುವಂತಾಗಿದೆ. ತಾಂತ್ರಿಕ ಕೆಲಸಗಳನ್ನು ಮನುಷ್ಯರು ಮಾಡುವ ಬದಲು, ಎಐಗೆ ಸೂಚನೆ ನೀಡಿ ಅದು ನೀಡುವ ಫಲಿತಾಂಶವನ್ನು ಮೇಲ್ವಿಚಾರಣೆ ಮಾಡುವುದಷ್ಟೇ ಮನುಷ್ಯರ ಕೆಲಸವಾಗುತ್ತಿದೆ.

ಎಐನಿಂದ ಏನೂ ಆಗದು ಎಂಬ ಅಸಡ್ಡೆ ಭಾರಿ ಅಪಾಯಕಾರಿ ಎಂಬುದನ್ನು ದೆಹಲಿ ಎಐ ಸಮ್ಮಿಟ್‌ನಲ್ಲಿ ಅನೇಕ ಟೆಕ್ ದೈತ್ಯರು ಎಚ್ಚರಿಸಿದ್ದಾರೆ. ಎಐ ಕ್ರಾಂತಿ ಇಡೀ ವ್ಯವಸ್ಥೆಯನ್ನು ಬದಲಿಸುತ್ತಿದೆ. ಈಗಾಗಲೇ ಅಮೆರಿಕ, ಚೀನಾ, ಜಪಾನ್‌ನಂತಹ ದೇಶಗಳು ಅದಕ್ಕೆ ಸಿದ್ದವಾಗಿವೆ.

ಭಾರತದ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಕೇವಲ ಹಳೆಯ ಪಠ್ಯಕ್ರಮಕ್ಕೆ ಅಂಟಿಕೊಳ್ಳದೆ, ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯತೆಯಾಗಿದೆ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದಾರೆ.


Ads on article

Advertise in articles 1

advertising articles 2

Advertise under the article