ಬೆಂಗಳೂರು: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅಂಡಾಣು ದಾನ ದಂಧೆ..!!

ಬೆಂಗಳೂರು : ಮಹಿಳೆಯರಿಗೆ ಹಣದ ಆಮಿಷವೊಡ್ಡಿ, ವಿವಿಧೆಡೆಗಳಿಂದ ಬೆಂಗಳೂರಿಗೆ ಕರೆತಂದು ಕಾನೂನುಬಾಹಿರವಾಗಿ ಅಂಡಾಣುವನ್ನು ಹೊರತೆಗೆಯುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಅಮಾಯಕ ಮಹಿಳೆಯರ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದ್ದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಅಶ್ವಿನಿ ಚಬುಸ್ಕವಾರ್ (29), ಮಂಜುಷಾ ವಾಂಖೆಡೆ (46), ಸೋನಲ್ ಗಡೇವಾಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಕೃತಕ ಗರ್ಭಧಾರಣೆ ಮಾಡಲು ಮಹಿಳೆಯರಿಂದ ಅಂಡಾಣುವನ್ನು ದಾನ ಪಡೆಯಲಾಗುತ್ತದೆ. ಅದನ್ನು ಸಂತಾನಾಪೇಕ್ಷಿ ಪುರುಷನ ವೀರ್ಯದೊಂದಿಗೆ ಸಂಯೋಗಿಸಿ ಮಗುವನ್ನು ಸೃಷ್ಟಿಸಲಾಗುತ್ತದೆ. ಈ ರೀತಿ ಅಂಡಾಣುವನ್ನು ದಾನ ಮಾಡಲು ಕಾನೂನಿದೆ. ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ-2021, ಓರ್ವ ಮಹಿಳೆಯರ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಅಂಡಾಣು ದಾನ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಸದ್ಯ ಬಲೆಗೆ ಬಿದ್ದಿರುವ ಜಾಲ ಪ್ರತಿ ಮಹಿಳೆಯಿಂದ ಕಾನೂನುಬಾಹಿರವಾಗಿ 33 ಸಲ ಅಂಡಾಣುವನ್ನು ಹೊರತೆಗೆದ ಆಘಾತಕಾರಿ ಸಂಗತಿ ಬಯಲಾಗಿದೆ.
ಅಂಡಾಣು ದಾನ ಮಾಡಿದರೆ 25,000ದಿಂದ 30,000 ರು. ನೀಡುವುದಾಗಿ ಮಹಿಳೆಯರಿಗೆ ಖದೀಮರು ಆಮಿಷ ಒಡ್ಡುತ್ತಿದ್ದರು. ನಂತರ ವಿವಿಧ ಸ್ಥಳಗಳಿಂದ ಅವರನ್ನು ಬೆಂಗಳೂರಿಗೆ ಕರೆತಂದು, ಸೂಕ್ತ ವೈದ್ಯಕೀಯ ನಿಯಮಗಳ ಪಾಲನೆಯನ್ನು ಸಹ ಮಾಡದೆ ಅಕ್ರಮವಾಗಿ ಅಂಡಾಣುವನ್ನು ಹೊರತೆಗೆಯಲಾಗುತ್ತಿತ್ತು. ಕೆಲಸ ಮುಗಿದ ಬಳಿಕ ಅವರಿಗೆ ಹಣ ಕೊಡದೆ ವಂಚಿಸಲಾಗುತ್ತಿತ್ತು. ಹೀಗೆ ಕನಿಷ್ಠ 40 ಮಹಿಳೆಯರು ವಂಚನೆಗೆ ಒಳಗಾಗಿದ್ದರು. ತನ್ನಿಂದ ಅಂಡಾಣು ದಾನ ಪಡೆದು ಹಣ ಕೊಡದೆ ಮೋಸ ಮಾಡಿದ್ದಾರೆಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಆಗ ಕಿಂಗ್‌ಪಿನ್ ಸುಲಕ್ಷಣಾ ಗಡೇಕರ್ (44) ಎಂಬಾಕೆಯ ಮನೆ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಹಾರ್ಮೋನ್ ಇಂಜೆಕ್ಷನ್‌ಗಳು ಪತ್ತೆಯಾಗಿವೆ.
ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡಿರುವ ಉಲ್ಲಾಸನಗರದ ಉಪ ಪೊಲೀಸ್ ಕಮಿಷನರ್ ಸಚಿನ್ ಗೋರೆ, “ಈವರೆಗೆ 20ಕ್ಕೂ ಹೆಚ್ಚು ಮಹಿಳೆಯರು ಈ ದಂಧೆಗೆ ಬಲಿಯಾಗಿರುವ ಸಾಧ್ಯತೆಯಿದೆ. ದಂಧೆಯು ಇತ್ತೀಚೆಗೆ ಬದ್ಲಾಪುರಕ್ಕೆ ಸ್ಥಳಾಂತರಗೊಳ್ಳುವ ಮೊದಲು ವಂಗಾನಿಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಮಾಹಿತಿ ಇದೆ. ನಾವು ದಂಧೆಯಲ್ಲಿ ಐವಿಎಫ್ ಕೇಂದ್ರಗಳು, ವೈದ್ಯರು ಹಾಗೂ ಆಸ್ಪತ್ರೆಗಳ ಪಾಲುದಾರಿಕೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಅಕ್ರಮ ದಂಧೆಯ ವಹಿವಾಟು ಕೋಟ್ಯಂತರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.