ಆರೋಗ್ಯ :ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿಸುವ ಪುರುಷರ ಅಭ್ಯಾಸಗಳು..!ಪತ್ನಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಪತಿಯರ ಅಭ್ಯಾಸಗಳು ಯಾವುವು ಎಂಬುದನ್ನು ತಿಳಿಯೋಣ...!!!

ವಿಶ್ವ ಆರೋಗ್ಯ ಸಂಸ್ಥೆ(WHO) ತಿಳಿಸುವ ಪ್ರಕಾರ, ಭಾರತದ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಯಿಲೆ ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಆತಂಕಕಾರಿಯಾಗಿ ಗರ್ಭಕಂಠದ ಸೋಂಕುಗಳು ಯಾವುದೇ ನೋವು ಇಲ್ಲವೇ ಲಕ್ಷಣಗಳಿಲ್ಲದೆ ಮೌನವಾಗಿ ಸಂಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಗಂಡಂದಿರ ಕೆಲವು ಅಭ್ಯಾಸಗಳು ಹೆಂಡತಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಋತುಚಕ್ರದ ಸಮಯದಲ್ಲಿ ಲೈಂಗಿಕ ಕ್ರಿಯೆ: ಅನೇಕ ದಂಪತಿ ಮುಟ್ಟಿನ ಸಮಯದಲ್ಲೂ ಸಂಭೋಗದಲ್ಲಿ ತೊಡಗುತ್ತಾರೆ. ಮುಟ್ಟಿನ ಸಮಯದಲ್ಲಿ ಸಂಭೋಗ ವೈದ್ಯಕೀಯವಾಗಿ ಸುರಕ್ಷಿತ ಹಾಗೂ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇದು ಸೋಂಕು ಹಾಗೂ ಅನಗತ್ಯ ಗರ್ಭಧಾರಣೆಯ ಅಪಾಯವನ್ನು ಹೊಂದಿರುತ್ತದೆ. ಋತುಚಕ್ರದ ಸಮಯದಲ್ಲಿ ಸಂಭೋಗ ಮಾಡುವುದು ನೇರವಾಗಿ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ. ಆದರೆ, ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯು ತಿಳಿಸುವ ಪ್ರಕಾರ, ಋತುಚಕ್ರದ ಸಮಯದಲ್ಲಿ ಸಂಭೋಗದಲ್ಲಿ ತೊಡಗಿಸುವುದರಿಂದ HPV (ಹ್ಯೂಮನ್ ಪ್ಯಾಪಿಲೋಮವೈರಸ್) ಅಪಾಯ ಹೆಚ್ಚಿಸಬಹುದು. ಈ ಸಮಯದಲ್ಲಿ ಗರ್ಭಕಂಠ ಹೆಚ್ಚು ದುರ್ಬಲವಾಗಿರುತ್ತದೆ. ಇದು ಸಂಭೋಗದ ನಂತರ ರಕ್ತಸ್ರಾವಕ್ಕೆ ಕಾರಣವಾಗಬಹುದು (ಪೋಸ್ಟ್‌ಕೊಯಿಟಲ್ ರಕ್ತಸ್ರಾವ), ಕ್ಯಾನ್ಸರ್‌ನ ಸಂಕೇತವೂ ಆಗಿರಬಹುದು.
ಇದಲ್ಲದೆ, ಧೂಮಪಾನ ಮಾಡುವ ಮಹಿಳೆಯರು ಧೂಮಪಾನ ಮಾಡದವರಿಗಿಂತ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚು. ಧೂಮಪಾನ ಮಾಡುವ ಮಹಿಳೆಯರ ಗರ್ಭಕಂಠದ ಲೋಳೆಯಲ್ಲಿ ತಂಬಾಕು ಘಟಕಗಳಿವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಹಾನಿಕಾರಕ ವಸ್ತುಗಳು ಗರ್ಭಕಂಠದ ಕೋಶಗಳ ಡಿಎನ್‌ಎಗೆ ಹಾನಿ ಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್ ಬೆಳವಣಿಗೆಗೆ ಕೊಡುಗೆ ನೀಡುತ್ತವೆ. ಧೂಮಪಾನವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. HPV ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆ ಮಾಡುತ್ತದೆ.
ಕಾಂಡೋಮ್ ಬಳಸದಿರುವುದು: ಕೆಲವು ಜನರು ಆತ್ಮತೃಪ್ತಿ ಮತ್ತಿತರೆ ಕಾರಣಗಳಿಂದ ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳನ್ನು ಬಳಸುವುದನ್ನು ತಪ್ಪಿಸುತ್ತಾರೆ. ಈ ಅಭ್ಯಾಸ ಅಪಾಯಕಾರಿ. ನೀವು ಬಹು ಪಾಲುದಾರರನ್ನು ಹೊಂದಿದ್ದರೆ ಇಲ್ಲವೇ ಮಾದಕ ದ್ರವ್ಯಗಳಿಗೆ ವ್ಯಸನಿಯಾಗಿದ್ದರೆ, ಕಾಂಡೋಮ್ ಇಲ್ಲದೆ ಲೈಂಗಿಕ ಕ್ರಿಯೆ ನಡೆಸುವುದು ಅಪಾಯಕಾರಿ. ಉದಾಹರಣೆಗೆ, ಒಬ್ಬ ಪುರುಷನಿಗೆ HPV ವೈರಸ್ ಇದ್ದರೆ, ಆತ ಅದನ್ನು ಸುಲಭವಾಗಿ ತನ್ನ ಸಂಗಾತಿಗೆ ರವಾನಿಸಬಹುದು. ಕಾಂಡೋಮ್‌ಗಳು ಕೇವಲ ಜನನ ನಿಯಂತ್ರಣ ವಿಧಾನವಲ್ಲ ಎಂಬುದನ್ನು ನೆನಪಿನಲ್ಲಿಡಿ. ಲೈಂಗಿಕವಾಗಿ ಹರಡುವ ಸೋಂಕುಗಳನ್ನು ತಡೆಗಟ್ಟುವಲ್ಲಿ ಅವುಗಳು ನಿರ್ಣಾಯಕವಾಗಿವೆ.

- ಅಸಹಜ ಯೋನಿ ರಕ್ತಸ್ರಾವ
- ಸಂಭೋಗದ ನಂತರ ರಕ್ತಸ್ರಾವ
- ಋತುಬಂಧದ ನಂತರ ರಕ್ತಸ್ರಾವ
- ಋತುಚಕ್ರದ ನಡುವೆ ಇಲ್ಲವೇ ಅಸಾಮಾನ್ಯವಾಗಿ ಭಾರೀ, ದೀರ್ಘಕಾಲದ ಮುಟ್ಟಿನ ನಡುವೆ ರಕ್ತಸ್ರಾವ
- ಡೌಚಿಂಗ್ ನಂತರ ರಕ್ತಸ್ರಾವ
ಅಸಹಜ ಯೋನಿ ಸ್ರಾವ:
- ರಕ್ತದ ಕುರುಹುಗಳನ್ನು ಹೊಂದಿರಬಹುದು, ಮುಟ್ಟಿನ ನಡುವೆ ಅಥವಾ ಮುಟ್ಟಿನ ನಂತರ ಸಂಭವಿಸಬಹುದು.
- ದುರ್ವಾಸನೆಯ ಹಳದಿ ದ್ರವ ವಿಸರ್ಜನೆ, ಕೆಳ ಹೊಟ್ಟೆ ನೋವು, ಆಗಾಗ್ಗೆ ಮೂತ್ರ ವಿಸರ್ಜನೆ ಅಥವಾ ಮೂತ್ರ ವಿಸರ್ಜನೆಯಲ್ಲಿ ತೊಂದರೆ.
- ಲೈಂಗಿಕ ಸಂಭೋಗದ ಸಮಯದಲ್ಲಿ ನೋವು.
- ಯೋನಿಯ ನೋವು.
- ಕ್ಯಾನ್ಸರ್ ಮುಂದುವರೆದಂತೆ, ಲಕ್ಷಣಗಳು ಹೆಚ್ಚು ತೀವ್ರವಾಗಬಹುದು ಮತ್ತು ಇವುಗಳನ್ನು ಒಳಗೊಂಡಿರಬಹುದು.
- ಕಾಲುಗಳಲ್ಲಿ ಊತ
- ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆಯಲ್ಲಿ ತೊಂದರೆ, ಕೆಲವೊಮ್ಮೆ ಕ್ಯಾನ್ಸರ್ ಮೂತ್ರಕೋಶ ಅಥವಾ ಗುದನಾಳಕ್ಕೆ ಹರಡಿದ್ದರೆ ಮೂತ್ರ ಅಥವಾ ಮಲದಲ್ಲಿ ರಕ್ತ
- ಆಯಾಸ ಮತ್ತು ವಿವರಿಸಲಾಗದ ತೂಕ ನಷ್ಟ
- ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಈ ಯಾವುದೇ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ಅಥವಾ ಹೆಚ್ಚಿನ ಅಪಾಯದ ಅಭ್ಯಾಸಗಳಲ್ಲಿ ತೊಡಗಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
- ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ತಡೆಗಟ್ಟುವಿಕೆ, ಆರಂಭಿಕ ಪತ್ತೆ ಬಹಳ ಮುಖ್ಯ ಎಂದು ವೈದ್ಯರು ತಿಳಿಸುತ್ತಾರೆ.