ಹೈದರಾಬಾದ್ :ಡೆತ್‌ನೋಟ್ ಬರೆದಿಟ್ಟು ರೈಲ್ವೇ ಹಳಿಯಲ್ಲಿ ತಾಯಿ- ಮಕ್ಕಳು ಆತ್ಮ*ಹತ್ಯೆಗೆ ಶರಣು...!!!

ಹೈದರಾಬಾದ್: ಮಹಿಳೆಯೊಬ್ಬಳು ಮತ್ತು ತನ್ನ ಇಬ್ಬರು ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್ ಹೊರವಲಯದಲ್ಲಿ ನಡೆದಿದೆ.
ಮೃತರನ್ನು ಪಿನ್ನಿಂಟಿ ವಿಜಯ ಶಾಂತಿ ರೆಡ್ಡಿ (38), ಆಕೆಯ ಮಗಳು ಚೇತನಾ ರೆಡ್ಡಿ (18) ಮತ್ತು ಮಗ ವಿಶಾಲ್ ರೆಡ್ಡಿ (17) ಎಂದು ಗುರುತಿಸಲಾಗಿದೆ. ವಿಜಯಾ ಶಾಂತಿ ರೆಡ್ಡಿ ತೆಲಂಗಾಣದ ಮೆಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯವಳಾಗಿದ್ದು, ಐಟಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಳು. ಅವರ ಇಬ್ಬರೂ ಮಕ್ಕಳು ಸ್ಥಳೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ವಿಜಯಾ ಮನೆಯಿಂದ ಹೊರಟು ತಮ್ಮ ಮಕ್ಕಳನ್ನು ಹಾಸ್ಟೆಲ್‌ಗಳಿಂದ ಕರೆದುಕೊಂಡು ಬಂದಿದ್ದಳು ಎಂದು ಸಿಕಂದರಾಬಾದ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ತಿಳಿಸಿದ್ದಾರೆ.
ನಂತರ ಕುಟುಂಬವು ರೈಲ್ವೆ ಹಳಿಗಳಿಗೆ ಕಾರಿನಲ್ಲಿ ಹೋಗಿ ಅಲ್ಲೇ ಸಮೀಪದಲ್ಲಿ ವಾಹನವನ್ನು ನಿಲ್ಲಿಸಿತ್ತು. ಬಳಿಕ ತಾಯಿ-ಮಕ್ಕಳು ಹಳಿಗಳ ಮೇಲೆ ನಡೆದುಕೊಂಡು ಹೋಗಿದ್ದರು. ಈ ವೇಳೆ ಗೂಡ್ಸು ರೈಲು ಆಗಮಿಸಿದೆ. ಮೂರು ಮಂದಿ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ನಿರಂತರವಾಗಿ ಹಾರ್ನ್ ಬಾರಿಸಿದ್ದಾರೆ. ಆದರೆ ಅವರು ಅಲ್ಲಿಂದ ಹೋಗಲಿಲ್ಲ. ಹೀಗಾಗಿ ರೈಲು ಡಿಕ್ಕಿ ಹೊಡೆದು ಮೂವರೂ ಮೃತಪಟ್ಟರು.
ಕಾರಿನಲ್ಲಿ ವಿಜಯಾ ಬರೆದಿದ್ದಾಳೆ ಎನ್ನಲಾದ ಕೈಬರಹದ ಪತ್ರವನ್ನು ಪೊಲೀಸರು ವಶಪಡಿಸಿಕೊಂಡರು. ಪತ್ರದಲ್ಲಿ ಆಕೆ ಸಂಬಂಧಿಕರಲ್ಲಿ ಕ್ಷಮೆಯಾಚಿಸಿದ್ದಾಳೆ. ತಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ಬರೆದಿದ್ದಾಳೆ. ತನ್ನ ಮಕ್ಕಳನ್ನು ಒಂಟಿಯಾಗಿ ಬಿಡುವ ಭಯವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಪತ್ರವನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದು, ಘಟನೆಗೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.