ಉಪ್ಪಿನಂಗಡಿ :ಪತ್ನಿಗೆ ಹಲ್ಲೆ ನಡೆಸಿದ ಪತಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ: ಪುತ್ರ ಸೇರಿ ಮೂವರ ಬಂಧನ...!!
ಉಪ್ಪಿನಂಗಡಿ : ಯುಡಿಆರ್ ಅಡಿಯಲ್ಲಿದ್ದ ದಾಖಲಾಗಿದ್ದ ವ್ಯಕ್ತಿಯೋರ್ವರ ಸಾವಿನ ಪ್ರಕರಣವು ಆತನ ಪತ್ನಿಯ ಸಹೋದರ ಹಾಗೂ ಸಂಬಂಧಿಯಿಂದ ನಡೆದ ಕೊಲೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಪ್ರಕರಣದಲ್ಲಿ ವ್ಯಕ್ತಿಯ ಮಗನೂ ಭಾಗಿಯಾಗಿದ್ದು, ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
73 ವರ್ಷದ ಕೆ.ಸಿ. ವರ್ಗೀಸ್ ಕೊಲೆಯಾದ ವ್ಯಕ್ತಿ. ಕೆ.ವಿ. ತೋಮಸ್ (ಮೃತನ ಪುತ್ರ) ಹಾಗೇ ಮೃತನ ಪತ್ನಿಯ ಸಹೋದರ ಸಿ.ಟಿ. ರಾಜು, ಸಂಬಂಧಿ ಚಾಕೊಚ್ಚ ಬಂಧಿತರು.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಇದೇ ಫೆಬ್ರವರಿ 9ರಂದು ಯುಡಿಆರ್ ಅಡಿಯಲ್ಲಿ ವರ್ಗೀಸ್ ಅವರದ್ದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿರುತ್ತದೆ. ಆದರೆ ವೈದ್ಯಕೀಯ ವರದಿಯಲ್ಲಿ ತಲೆಗೆ ಉಂಟಾದ ಗಂಭೀರ ಹಲ್ಲೆ ಮತ್ತು ದೇಹದ ಇತರ ಭಾಗಗಳಿಗೆ ಆಗಿರುವ ಗಾಯಗಳಿಂದ ವರ್ಗೀಸ್ ಮೃತಪಟ್ಟಿರುವುದು ದೃಢಪಟ್ಟಿರುತ್ತದೆ. ಈ ಹಿನ್ನೆಲೆ ಫೆ. 13 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೊದಲು ದಾಖಲಾಗಿದ್ದ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿ ಪೊಲೀಸರು ತನಿಖೆ ಆರಂಭಿಸಿದರು. ತನಿಖೆಯಲ್ಲಿ ಪೊಲೀಸರು ಮೊದಲು ಮೃತನ ಮಗನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಡೆದ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲದಿಂದ ಮಾಹಿತಿ ದೊರೆತಿದೆ.
ಹಲ್ಲೆಗೆ ಕೊಲೆ ಪ್ರತೀಕಾರ: ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಮೃತ ಕೆ.ಸಿ. ವರ್ಗೀಸ್ ಅವರು ತಮ್ಮ ಹೆಂಡತಿಗೆ ಹಲ್ಲೆ ನಡೆಸಿದ್ದಾರೆ. ಬಳಿಕ ಆಕೆ ಮನೆಯಿಂದ ಸ್ವಲ್ಪ ದೂರ ಹೋಗಿ ಕುಳಿತಿದ್ದರು. ಈ ಘಟನೆಯನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ವಿಷಯವನ್ನು ಆಕೆಯ ಮಗ ಕೆ.ವಿ. ತೋಮಸ್ಗೆ ತಿಳಿಸಿದ್ದಾರೆ. ತಕ್ಷಣವೇ ತೋಮಸ್ ಪರಿಚಯದ ಆಟೋ ರಿಕ್ಷಾ ಮೂಲಕ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಇದಾದ ನಂತರ ವರ್ಗೀಸ್ನ ಪತ್ನಿಯ ತಮ್ಮ ರಾಜು ಆಸ್ಪತ್ರೆಗೆ ಬಂದು ಪರಿಸ್ಥಿತಿ ಅರಿತು, ತಮ್ಮ ಮತ್ತೊಬ್ಬ ಸಂಬಂಧಿ ಚಾಕೊಚ್ಚ ಅವರಿಗೆ ಕರೆ ಮಾಡಿ, "ಅಕ್ಕನಿಗೆ ಗಂಡ ಹೊಡೆದಿದ್ದಾನೆ, ಬೇಗ ಬಾ" ಎಂದು ತಿಳಿಸಿದ್ದರು. ಬಳಿಕ ರಾಜು ಮತ್ತು ಚಾಕೊಚ್ಚ ಅವರು ವರ್ಗೀಸ್ನ ಪುತ್ರ ತೋಮಸ್ನನ್ನು ಸಂಪರ್ಕಿಸಿ ವರ್ಗೀಸ್ನನ್ನು ಹೆದರಿಸುವ ಕುರಿತು ಚರ್ಚೆ ನಡೆಸಿದ್ದರು.
ಬಳಿಕ ರಾಜು ಹಾಗೂ ಚಾಕೊಚ್ಚ ತೋಮಸ್ನನ್ನು ಸ್ವಲ್ಪ ದೂರದಲ್ಲಿ ಬಿಟ್ಟು ತಾವಿಬ್ಬರು ಮನೆ ಒಳಗೆ ಹೋಗಿ ವರ್ಗೀಸ್ ಅವರಿಗೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ನಂತರ ಹೊರಬಂದು ತೋಮಸ್ ಬಳಿ ಅವರಿಗೆ ಸರಿಯಾಗಿ ಹೊಡೆದಿದ್ದೇವೆ, ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳಿದ್ದರು.
ಆಸ್ಪತ್ರೆಯಲ್ಲಿ ತೋಮಸ್ ತನ್ನ ತಂದೆ ಮಂಚದಿಂದ ಕೆಳಗೆ ಬಿದ್ದು, ಕಲ್ಲಿಗೆ ತಲೆ ತಾಗಿ ಗಾಯಗೊಂಡು ಮೃತಪಟ್ಟಿರಬಹುದು. ಇದೊಂದು ಅಸ್ವಾಭಾವಿಕ ಸಾವು ಎಂದು ಹೇಳಿಕೆ ನೀಡಿದ್ದ. ಆದರೆ ವೈದ್ಯಕೀಯ ವರದಿ ಮತ್ತು ಕೂಲಂಕಶ ತನಿಖೆ ಬಳಿಕ ಹಲ್ಲೆಯಿಂದ ಸಾವಾಗಿರುವುದು ಬಹಿರಂಗವಾಗಿದೆ.
ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ