ಬೆಳಗಾವಿ :ಶತಾಯುಷಿಗಳು, ಹಿರಿಯರ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ಹುಟ್ಟುಹಬ್ಬ: ನೋಟಿನ ಮಾಲೆ, ಬೆಳ್ಳಿ ಖಡ್ಗ ಕೊಟ್ಟ ಅಭಿಮಾನಿಗಳು...!!!

ಬೆಳಗಾವಿ :ಶತಾಯುಷಿಗಳು, ಹಿರಿಯರ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ಹುಟ್ಟುಹಬ್ಬ: ನೋಟಿನ ಮಾಲೆ, ಬೆಳ್ಳಿ ಖಡ್ಗ ಕೊಟ್ಟ ಅಭಿಮಾನಿಗಳು...!!!

ಬೆಳಗಾವಿ: ಹಿರಿಯ ನಾಗರಿಕರು ನಡೆದು ಬಂದ ದಾರಿಯೇ ನಮಗೆ ದಿಕ್ಕು ತೋರಿಸುವ ನಕ್ಷೆ. ನೀವು ಅನುಭವಿಸಿದ ಸಂಕಷ್ಟಗಳೇ ನಮಗೆ ಬಲವಾದ ಪಾಠಗಳು. ನಾವು ಇಂದು ನಿಂತಿರುವ ಈ ನೆಲವನ್ನು ಗಟ್ಟಿ ಮಾಡಿದವರು ನೀವು. ನಾವು ಇಂದು ಮಾತನಾಡುತ್ತಿರುವ ಸ್ವಾತಂತ್ರ್ಯ, ಸೌಕರ್ಯ, ಅವಕಾಶಗಳ ಹಿಂದೆ ನಿಮ್ಮ ತ್ಯಾಗ ಇದೆ. ಅದಕ್ಕಾಗಿ ನನ್ನ ಜನ್ಮದಿನವನ್ನು ವೈಯಕ್ತಿಕ ಸಂಭ್ರಮವಾಗಿ ಅಲ್ಲ, ಹಿರಿಯರ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.
ತಮ್ಮ ಜನ್ಮದಿನದ ಅಂಗವಾಗಿ ಬೆಳಗಾವಿ ತಾಲೂಕಿನ ಬೆನಕನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಹಿರಿಯರು ಕೇವಲ ವಯಸ್ಸಾದವರು ಅಲ್ಲ, ಸಮಾಜದ ಅನುಭವದ ಗ್ರಂಥಗಳು. ನನ್ನ ಜನ್ಮದಿನವನ್ನು ವೈಯಕ್ತಿಕ ಆಚರಣೆಯಾಗಿ ಅಲ್ಲದೆ ಹಿರಿಯರ ಸೇವೆಗೆ ಸಮರ್ಪಿಸುವುದೇ ತಮಗೆ ಸಂತೋಷ ನೀಡುತ್ತದೆ. ಹಿರಿಯರನ್ನು ಗೌರವಿಸುವ ಸಮಾಜವೇ ನಿಜವಾದ ಅಭಿವೃದ್ಧಿಯ ಸಮಾಜ. ಇಂದು ನಾವು ತಂತ್ರಜ್ಞಾನದಲ್ಲಿ ಮುಂದೆ ಹೋಗುತ್ತಿದ್ದೇವೆ. ಆದರೆ ಮೌಲ್ಯಗಳಲ್ಲಿ ಹಿಂದೆ ಹೋಗಬಾರದು. ಆ ಮೌಲ್ಯಗಳ ಜೀವಂತ ರೂಪವೇ ಹಿರಿಯ ನಾಗರಿಕರು. ನಾನು ಜನಪ್ರತಿನಿಧಿಯಾಗಿ, ಸಚಿವೆಯಾಗಿ ಏನೇ ಸಾಧಿಸಿದ್ದರೂ, ಅದರ ಹಿಂದೆ ಹಿರಿಯರ ಮಾರ್ಗದರ್ಶನ, ಆಶೀರ್ವಾದ ಮತ್ತು ಸಂಸ್ಕಾರ ಇದೆ ಎಂದು ಹೇಳಿದರು.

ತಾಯಿಯು ನನಗೆ ದೇಹದ ಜನ್ಮ ನೀಡಿದ್ದರೂ, ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆ. ಅವರಿಂದಾಗಿಯೇ ನನಗೆ ಇಂದಿನ ಸ್ಥಾನ‌ ಸಿಕ್ಕಿದೆ. ಕ್ಷೇತ್ರದ ಜನರು ತಮಗೆ ಬೆಂಬಲ ನೀಡಿ ಬೆಳೆಸಿದ ಕಾರಣವೇ ರಾಜ್ಯದಲ್ಲಿ ಮಂತ್ರಿಯಾಗುವ ಅವಕಾಶ ದೊರಕಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕೃತಜ್ಞತೆ ಸಲ್ಲಿಸಿದರು.

ಹಿರಿಯರು ಮತ್ತು ಗುರುಗಳ ಮಾರ್ಗದರ್ಶನವೇ ತಮ್ಮ ಬದುಕಿನ ಆಧಾರ. ತಂದೆ-ತಾಯಿಯರ ಗೌರವವೇ ಭಾರತೀಯ ಸಂಸ್ಕೃತಿಯ ಮೂಲ ಮೌಲ್ಯ.‌ ಹಿರಿಯ ನಾಗರಿಕರಿಗೆ ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಪ್ರಯತ್ನ ಮುಂದುವರೆಯುತ್ತದೆ. ಇನ್ನು ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಶಕ್ತಿಯಾಗಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್​​ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ಸಚಿವರೊಬ್ಬರು ತಮ್ಮ ಅಧಿಕಾರ ಅವಧಿಯಲ್ಲಿ ಹಿರಿಯ ನಾಗರಿಕರೊಂದಿಗೆ ಜನ್ಮದಿನ ಆಚರಿಸಿರುವುದು ಅಪರೂಪದ ಘಟನೆ. ಯುವಕರು ಸೇರಿದಂತೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಸಾರ್ಥಕತೆಯನ್ನು ಮೆರೆಯುತ್ತಿದ್ದಾರೆ. ಕರ್ನಾಟಕ ಸರ್ಕಾರದ ಮಂತ್ರಿಯಾಗಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಗುರು ಹಿರಿಯರನ್ನು ಸನ್ಮಾನಿಸುವ ಮೂಲಕ ಸಚಿವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಯಾರೇ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಬೆನ್ನುತಟ್ಟುವುದು ನಮ್ಮ ಕರ್ತವ್ಯ. ಜನರ ಕಣ್ಣೀರು ಒರೆಸುವ ಸಲುವಾಗಿ ಕಿತ್ತೂರು ರಾಣಿ ಚನ್ನಮ್ಮ, ಲಕ್ಷ್ಮೀ ಹೆಬ್ಬಾಳ್ಕರ್​​ ಮೂಲಕ ಮತ್ತೆ ಹುಟ್ಟಿ ಬಂದಿದ್ದಾರೆ ಎನಿಸುತ್ತದೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

Ads on article

Advertise in articles 1

advertising articles 2

Advertise under the article