ಮಂಗಳೂರು:ನಿತ್ಯಾನಂದ ಶೆಟ್ಟಿಯವರ 'ಅಳವು ಅರಿಯದ ಭಾಷೆ' ಪುಸ್ತಕ ಬಿಡುಗಡೆ ; ಕಲೆ, ಸಮಾಜ, ಇತಿಹಾಸ ಪುಸ್ತಕವನ್ನು ಬಿಡುಗಡೆ ಮಾಡಿದ ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ..!!!
Friday, February 13, 2026
ಮಂಗಳೂರು, ಫೆ.13: ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ನಿತ್ಯಾನಂದ ಬಿ. ಶೆಟ್ಟಿ ಅವರ, 'ಅಳವು ಅರಿಯದ ಭಾಷೆ” ಕಲೆ, ಸಮಾಜ, ಇತಿಹಾಸ ಪುಸ್ತಕವನ್ನು ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ ಬಿಡುಗಡೆ ಮಾಡಿದರು.
ನಗರದ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಮತ್ತು ಕನ್ನಡ ವಿಭಾಗದ ವತಿಯಿಂದ ಸಂತ ಅಲೋಶಿಯಸ್ ವಿವಿಯ ಎಲ್.ಎಫ್. ಸಭಾಂಗಣದಲ್ಲಿ ಶುಕ್ರವಾರ ಕಾರ್ಯಕ್ರಮ ನಡೆಯಿತು.
ಜೇನಿನ ಪೆಟ್ಟಿಗೆಯಿಂದ ನೂತನ ಕೃತಿಯನ್ನು ಹೊರತೆಗೆಯುವ ಮೂಲಕ ಅನಾವರಣಗೊಳಿಸಿ ಮಾತನಾಡಿದ ಪಟ್ಲ ಸತೀಶ ಶೆಟ್ಟಿ, ಯಕ್ಷಗಾನ ಕಲೆ ಪ್ರಪಂಚದ ಶ್ರೀಮಂತ ಕಲೆಯಾಗಿ ಗುರುತಿಸಿಕೊಂಡಿದೆ. ಇಂತಹ ಕಲೆಯ ಕುರಿತಾದ ಈ ಕೃತಿ ರಚನೆ ಅಭಿನಂದನಾರ್ಹ ಎಂದರು.
ನೃತ್ಯ, ಅಭಿನಯ, ಸಂಗೀತ ಸೇರಿದಂತೆ ಎಲ್ಲಾ ರೀತಿಯ ಕಲಾ ಪ್ರಕಾರಗಳನ್ನು ಒಳಗೊಂಡ ಯಕ್ಷಗಾನ ಶುದ್ಧವಾದ ಕನ್ನಡವನ್ನು ಇಂದಿಗೂ ಉಳಿಸಿ, ಬೆಳೆಸುತ್ತಿದೆ. ಯಕ್ಷಗಾನ ಕಲೆಗೆ ಜಾತಿ, ಧರ್ಮ ಮೀರಿ ಕಲಾವಿದರ ಕೊಡುಗೆ ಇದೆ, ಅವರ ಪ್ರೀತಿ ಇದೆ ಎಂದು ಹೇಳಿದ ಅವರು, ಪುಂಡು ವೇಷಧಾರಿಯಾಗಿ ಪ್ರಸಿದ್ಧಿ ಪಡೆದಿರುವ ಕ್ರಿಶ್ಚಿಯನ್ ಬಾಬು ಹಾಗೂ ಯಕ್ಷಗಾನದ ಮೇರು ಪ್ರತಿಭೆ ಜಬ್ಬಾರ್ ಸುಮೋ ಅವರನ್ನು ನೆನಪಿಸಿಕೊಂಡರು.
ಕಾಂತಾವರ ಕನ್ನಡ ಸಂಘದ ಪ್ರಕಾಶನದದಿಂದ ಹೊರತರಲಾದ ಕೃತಿಯ ಬಗ್ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ಯಕ್ಷಗಾನದ ಇತಿಹಾಸದ ನೋಟ, ಕಲೆ ಸಾಹಿತ್ಯ- ಸಾಮಾಜಿಕ- ರಾಜಕೀಯ ಚಿಂತನೆಯನ್ನು ಪ್ರಸ್ತುತ ಪಡಿಸುವ ವಿಶೇಷ ರೀತಿಯ ಗ್ರಂಥ ಇದಾಗಿದೆ. ಇದು ಇತರ ಭಾಷೆಗಳಿಗೆ ತರ್ಜುಮೆ ಆಗಬೇಕಾದ ಕೃತಿ ಎಂದರು.
ಯಕ್ಷಗಾನದಲ್ಲಿ ಮಾತುಗಾರಿಕೆ ಪ್ರಮುಖವಾಗಿದ್ದು, ಮಾತು ಹದ ಮೀರಿದರೆ, ಲಯ ತಪ್ಪಿದರೆ ಪತನದ ಹಾದಿ ಹಿಡಿಯುತ್ತದೆ. ಕರಾವಳಿಯಲ್ಲಿ ಉಂಟಾಗಿರುವ ಈ ಸ್ಥಿತಿಯ ವಿವರವನ್ನು ನಿತ್ಯಾನಂದ ಶೆಟ್ಟಿಯವರು ಈ ಕೃತಿಯಲ್ಲಿ ನೀಡಿದ್ದಾರೆ. ಕಾವ್ಯ ಮೀಮಾಂಸೆಯ ಕುರಿತಂತೆ ಕೃತಿಗಳು ಪ್ರಕಟವಾಗಿದ್ದು, ಯಕ್ಷಗಾನ ಕಲಾ ಮೀಮಾಂಸೆಯಾಗಿ ಜನ ಜೀವನದ ಬದುಕಿನ ಮೀಮಾಂಸೆಯಾಗಿ ಈ ಕೃತಿ ಹೊರ ಬಂದಿದೆ ಎಂದವರು ಹೇಳಿದರು.
ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಸಹ ಕುಲಪತಿ ರೆ.ಫಾ. ಡಾ. ಮೆಲ್ವಿನ್ ಡಿಕುನ್ನಾ ಅಧ್ಯಕ್ಷತೆ ವಹಿಸಿದ್ದರು.
ಫ್ಯಾಮಿಲಿ ಟ್ರಸ್ಟ್‌ನ ಪ್ರಮುಖರಾದ ಕಿರಣ್ ಮಲ್ಯ, ಪ್ರಾಧ್ಯಾಪಕರಾದ ಡಾ. ದಿನೇಶ್ ನಾಯಕ್, ಮಹಾಲಿಂಗ ಭಟ್, ಕೃತಿಕಾರ ಡಾ. ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನಿ ಗಾಯಕ ಕೀರ್ತನ್ ನಾಯಕ್‌ರವರು ಜೇಡರ ದಾಸಿಮಯ್ಯರ ವಚನದ ಸಾಲನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಸ್ತಕ ಬಿಡುಗಡೆ ಬಳಿಕ 'ಹೊತ್ತಗೆಯ ಹೊತ್ತು' ಸಂವಾದ ನಡೆಯಿತು.