ಹಾವೇರಿ :ಹಿಪ್ಪುನೇರಳೆ ಸೊಪ್ಪಿಗೆ ಕ್ರಿಮಿನಾಶಕ ಸಿಂಪಡಿಸಿದ ದುಷ್ಕರ್ಮಿಗಳು; ಲಕ್ಷಾಂತರ ರೇಷ್ಮೆ ಹುಳುಗಳು ಸಾವು: ರೈತ ಕುಟುಂಬ ಕಂಗಾಲು..!!
ಹಾವೇರಿ: ದುಷ್ಕರ್ಮಿಗಳು ಸಿಂಪಡಿಸಿದ ಕ್ರಿಮಿನಾಶಕ ಮಿಶ್ರಿತ ಹಿಪ್ಪುನೇರಳೆ ಸೊಪ್ಪು ತಿಂದು ಲಕ್ಷಾಂತರ ರೇಷ್ಮೆ ಹುಳುಗಳು ಸಾವನ್ನಪ್ಪಿರುವ ಘಟನೆ ಹಾವೇರಿ ತಾಲೂಕು ಬಸನಕಟ್ಟೆ ಗ್ರಾಮದಲ್ಲಿ ನಡೆದಿದೆ. ಬಸನಕಟ್ಟೆ ಗ್ರಾಮದ ವಯೋವೃದ್ದೆ ಹನುಮವ್ವ ಪಾಟೀಲ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ಹನುಮವ್ವ ಮತ್ತು ಅವರ ಪುತ್ರ ಕಳೆದ ಕೆಲ ವರ್ಷಗಳಿಂದ ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದಾರೆ. ರೇಷ್ಮೆ ಸಾಕಾಣಿಕೆಯಲ್ಲಿ ಸ್ವಲ್ಪ ಆದಾಯ ಗಳಿಸಿದ್ದಾರೆ. ಇದನ್ನು ಸಹಿಸದ ದುಷ್ಕರ್ಮಿಗಳು ರೇಷ್ಮೆ ಹುಳುಗಳಿಗೆ ಹಾಕುವ ಹಿಪ್ಪುನೇರಳೆ ಗಿಡಗಳ ಸೊಪ್ಪಿಗೆ ಕ್ರಿಮಿನಾಶಕ ಸಿಂಪಡಿಸಿ ಪರಾರಿಯಾಗಿದ್ದಾರೆ. ಕ್ರಿಮಿನಾಶಕ ಸಿಂಪಡಿಸಿರುವ ಸೊಪ್ಪನ್ನೇ ರೇಷ್ಮೆ ಹುಳುಗಳು ತಿಂದು ಸಾವನ್ನಪ್ಪಿವೆ.
ಇನ್ನೇನು ಕೆಲವೇ ದಿನಗಳಲ್ಲಿ ಹುಳುಗಳು ಗೂಡು ಕಟ್ಟುತ್ತಿದ್ದವು. ಕನಿಷ್ಠ 3 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ ಹನುಮವ್ವನ ಕುಟುಂಬ ಇದೀಗ ಕಂಗಾಲಾಗಿದೆ. ತಿಂಗಳುಗಟ್ಟಲೆ ಕಷ್ಟಪಟ್ಟು ರೇಷ್ಮೆ ಸಾಕಿದ್ದ ಕುಟುಂಬ ಕಣ್ಣೀರು ಹಾಕುತ್ತಿದೆ.
ಹನುಮವ್ವ ಎರಡು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆದಿದ್ದರು. 20ಕ್ಕೂ ದಿನಗಳ ಹಿಂದೆ ರೇಷ್ಮೆ ಹುಳ ತಂದು ಸೊಪ್ಪು ಹಾಕಿದ್ದಾರೆ. ನಾಲ್ಕೈದು ದಿನಗಳು ಕಳೆದರೆ ಹುಳುಗಳು ಗೂಡು ಕಟ್ಟುತ್ತಿದ್ದವು. ತಿಂಗಳ ಕಾಲ ಕಷ್ಟಪಟ್ಟು ಬೆಳೆದ ರೇಷ್ಮೆ ದುಷ್ಕರ್ಮಿಗಳ ಕೃತ್ಯದಿಂದ ನಾಶವಾಗಿವೆ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು ಎನ್ನುತ್ತಿದ್ದಾರೆ ಹನುಮವ್ವ.
"ರಾತ್ರಿ ಹೊತ್ತು ಬಂದು ಈ ರೀತಿ ಮಾಡಿ ಹೋಗಿದ್ದಾರೆ. ಈಗ ಆಗಿರುವ ನಷ್ಟವನ್ನು ನಾನು ಮುಂದೆ ಗಳಿಸುತ್ತೇನೆ. ಆದರೆ ಇದರ ಪಾಪ, ಪುಣ್ಯ ಎರಡೂ ಅವರಿಗೇ ಸೇರಬೇಕು. ನನಗೆ ಯಾವುದೂ ಬೇಡ. ಕೆಲಸ ಮಾಡಿ ಸುಸ್ತಾಗಿ ನಾವು ಗಾಢ ನಿದ್ದೆಯಲ್ಲಿದ್ದೆವು. ಮನೆ ಮುಂದೆಯೇ ಬೈಕ್ ನಿಲ್ಲಿಸಿ ಈ ರೀತಿ ಮಾಡಿದ್ದಾರೆ. ಕೆಲಸ ಮಾಡಿದ ಸುಸ್ತಿನಲ್ಲಿ ಎದ್ದು ನೋಡುವ ಸಾಮರ್ಥ್ಯವಿರಲಿಲ್ಲ. ಅವರಿಗೆ ಇದೇ ದೊಡ್ಡ ಸಾಧನೆಯಾಗಿರಬಹುದು. ಹಾಕಿದ ಹಣ, ಮಕ್ಕಳು ಪಟ್ಟ ಕಷ್ಟ ಎಲ್ಲವೂ ವ್ಯರ್ಥವಾಗಿ ಹೋಯಿತು. ಅದನ್ನು ನೆನಪಿಸಿಕೊಂಡರೆ ರಾತ್ರಿ ಕಣ್ಣಿಗೆ ನಿದ್ದೆ ಹತ್ತುತ್ತಿಲ್ಲ" ಎಂದು ಹನುಮವ್ವ ಅಳಲು ತೋಡಿಕೊಂಡರು.