ಮಂಗಳೂರು :ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿ ನೂರಕ್ಕೂ ಹೆಚ್ಚು ಪ್ರಾಣಿಗಳ ಅಸಹಜ ಸಾವು ; ಹಸಿ ತರಕಾರಿ, ತ್ಯಾಜ್ಯದಲ್ಲಿ ರಾಸಾಯನಿಕ ಬಳಕೆಯೇ ಕಾರಣ! ಕ್ಯಾಬೇಜ್, ಕ್ಯಾಲಿಫ್ಲವರ್ ಎಲೆಗಳು ವಿಷ ಆಗುತ್ತಿದೆಯಾ?

ಮಂಗಳೂರು, ಫೆ.12: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಅಧೀನದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ 100ಕ್ಕೂ ಅಧಿಕ ಪ್ರಾಣಿಗಳು ಅಸಹಜ ರೀತಿಯಲ್ಲಿ ಮೃತಪಟ್ಟಿದ್ದು, ಇದಕ್ಕೆ ಪ್ರಾಣಿಗಳಿಗೆ ನೀಡಲಾಗುವ ಆಹಾರದಲ್ಲಿ ವಿಷಕಾರಿ ರಾಸಾಯನಿಕ ಬೆರಕೆಯಾಗಿದ್ದೇ ಕಾರಣ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಪ್ರಾಣಿಗಳ ಅಸಹಜ ಸಾವು, ಆಹಾರ ಪೂರೈಕೆಯಲ್ಲಿ ವ್ಯತ್ಯಯ, ಪ್ರಾಣಿಗಳ ವಿನಿಮಯ- ಲೆಕ್ಕಪತ್ರ ಅವ್ಯವಹಾರ ಸೇರಿದಂತೆ ವಿವಿಧ ರೀತಿಯ ಅಪರಾತಪರಾಗಳ ಕಾರಣಕ್ಕೆ ಕಳೆದ ಹಲವು ವರ್ಷಗಳಿಂದ ಪಿಲಿಕುಳ ಜೈವಿಕ ಉದ್ಯಾನವನ ಸುದ್ದಿಯಾಗುತ್ತಿದೆ. ಸುಮಾರು ನಾಲ್ಕು ವರ್ಷ ಗಳಿಂದ ಹುಲಿ, ಜಿಂಕೆ, ಕಡವೆ, ಹಂದಿ ಸೇರಿದಂತೆ 100ಕ್ಕೂ ಅಧಿಕ ಪ್ರಾಣಿಗಳು ಮೃತಪಟ್ಟಿವೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ನೀಡುವ ಆಹಾರವನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.


ಹೈಡೋಸೈನೈಡ್, ನೈಟ್ರೇಟ್ ಅಂಶ ಪತ್ತೆ !
2026ರ ಫೆ.5ರಂದು ಉದ್ಯಾನವನದಲ್ಲಿ ಜಿಂಕೆಯೊಂದು ಮೃತಪಟ್ಟಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿ ಹೊಟ್ಟೆಯಲ್ಲಿದ್ದ ಆಹಾರ ಮತ್ತು ಮಾಂಸದ ಮಾದರಿಯನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಹಿರಿಯ ಅಧಿಕಾರಿಗಳ ಕೈಸೇರಿದ್ದು ಪ್ರಾಣಿಯ ದೇಹದಲ್ಲಿ ಹೈಡ್ರೋ ಸೈನೇಡ್ ಏಸಿಡ್ ಮತ್ತು ನೈಟ್ರೇಟ್ ಎಂಬ ವಿಷಕಾರಿ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಪ್ರಾಣಿಗಳ ಸರಣಿ ಸಾವಿಗೆ ಇದು ಕೂಡ ಕಾರಣ ಎನ್ನಲಾಗುತ್ತಿದೆ.

ಸಾವಿಗೆ ಕಾರಣ ಆಗುತ್ತಿದ್ಯಾ ಕ್ಯಾಬೇಜ್ ಎಲೆಗಳು ?
ಸಾನಾನ್ಯವಾಗಿ ಕ್ಯಾಬೇಜ್, ಕ್ಯಾಲಿಫ್ಲವರ್ ಬೆಳೆಯುವಾಗ ರೋಗ ಬಾಧೆಗೆ ಹೈಡ್ರೋ ಸೈನೇಡ್ ಏಸಿಡ್ ಮತ್ತು ನೈಟ್ರೇಟ್ ಮಾದರಿಗಳನ್ನು ಸಿಂಪಡಿಸಲಾಗುತ್ತದೆ. ಆದರೆ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಕ್ಯಾಬೇಜ್, ಕಾಲಿಫ್ಲವರ್ ಎಲೆಗಳನ್ನು ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೆ, ಹಸಿಯಾಗಿಯೇ ನೀಡಲಾಗುತ್ತಿದೆ. ಇದನ್ನು ತಿಂದ ಪ್ರಾಣಿಗಳಿಗೆ ಸೈಡ್ ಎಫೆಕ್ಟ್ ಆಗುತ್ತಿದ್ದು ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಲು ಕಾರಣ ಆಗುತ್ತಿದೆಯಾ ಎಂಬ ಶಂಕೆ ಮೂಡಿದೆ. ಪಿಲಿಕುಳದ ಪ್ರಾಣಿಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗುತ್ತಿದ್ದಂತೆ ಕ್ಯಾಬೇಜ್, ಕ್ಯಾಲಿಫ್ಲವರ್ ಎಲೆಗಳನ್ನು ಆಹಾರವನ್ನಾಗಿ ನೀಡುವುದಕ್ಕೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ.
ಪಿಲಿಕುಳದಲ್ಲಿ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮೃತಪಟ್ಟ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಯನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು, ಆ ವರದಿಯಲ್ಲಿ ಹೈಡ್ರೋ ಸೈನೈಡ್ ಮತ್ತು ನೈಟ್ರೇಟ್ ಅಂಶ ಪತ್ತೆಯಾಗಿರುವುದು ನಿಜ. ಈ ಬಗ್ಗೆ ಪಿಲಿಕುಳ ಜೈವಿಕ ಉದ್ಯಾನವನದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಆಹಾರದಲ್ಲಿ ಬದಲಾವಣೆ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಪ್ರಾದೇಶಿಕ ಸಂಶೋಧನಾಧಿಕಾರಿ ಡಾ.ವಸಂತ್ ತಿಳಿಸಿದ್ದಾರೆ.
ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಅವ್ಯವಸ್ಥೆ ಬಗ್ಗೆ ವನ್ಯಜೀವಿ ಸಂರಕ್ಷಕ ಭುವನ್ ಕೋಡಿಕಲ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಪ್ರಾಣಿಗಳ ಆಹಾರ, ಅಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವ್ಯವಸ್ಥೆ ಬಗ್ಗೆ ಮಾಹಿತಿ ಕೇಳಿ ಗರಂ ಆಗಿದ್ದ ನ್ಯಾಯಾಧೀಶರು, ಪ್ರಾಣಿ ಸಂಗ್ರಹಾಲಯದ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಚ್ಚಬೇಕಾದೀತು ಎಂದು ಕಳೆದ ವಿಚಾರಣೆಯಲ್ಲಿ ಎಚ್ಚರಿಕೆ ನೀಡಿದ್ದರು. ರಾಜ್ಯ ಸರಕಾರ ಪ್ರತಿವಾದಕ್ಕೆ ಹೆಚ್ಚುವರಿ ಸಮಯ ಕೇಳಿದ್ದು, ಮುಂದಿನ ವಿಚಾರಣೆ ಮುಂದಿನ ಮಾ.8ರಂದು ನಡೆಯಲಿದೆ.