ನವದೆಹಲಿ :ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗೆ ಅಡ್ಡಿ ಬಂದ ಹೆತ್ತವರು, ಕಾರಿನಲ್ಲೇ ಲಾಕ್ ಮಾಡಿಕೊಂಡು ಸಾವು !!!..

ನವದೆಹಲಿ: ಪ್ರೇಮಿಗಳ ದಿನಾಚರಣೆ ದಿನವೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜೋಡಿ ದುರಂತ ಅಂತ್ಯಕಂಡ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದ ಸೆಕ್ಟರ್ 39ರಲ್ಲಿ ಪಾರ್ಕ್ ಮಾಡಿದ್ದ ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಪ್ರೇಮಿಗಳಾದ ಸುಮಿತ್ ಹಾಗೂ ರೇಖಾ ಎಂಬಿಬ್ಬರ ಶವಗಳು ಪತ್ತೆಯಾಗಿವೆ. ತಮ್ಮ ಕೊನೆಯ ಕ್ಷಣಗಳನ್ನು ಈ ಜೋಡಿ ಇದೇ ಕಾರಿನಲ್ಲಿ ಕಳೆದಿದ್ದಾರೆ. ಸುಮಿತ್ ಹಾಗೂ ರೇಖಾ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದರ ನಡುವೆ, ರೇಖಾಗೆ ಮನೆಯಲ್ಲಿ ಬೇರೆ ವರನನ್ನು ನೋಡಿದ್ದು, ಮದುವೆಗೆ ಮುಂದಾಗಿದ್ದರು. ಈ ವಿಷಯ ತಿಳಿದ ಸುಮಿತ್ ಕೊನೆಯದಾಗಿ ಭೇಟಿಯಾಗುವುದಾಗಿ ಹೇಳಿ ರೇಖಾಳ ಕರೆದಿದ್ದು, ಕಾರಿನಲ್ಲಿ ಕೂರಿಸಿಕೊಂಡು ಸೆಕ್ಟರ್ 39ರ ಬಳಿ ಬಂದಿದ್ದಾನೆ. ಬಳಿಕ ರಿವಾಲ್ವರ್ ತೆಗೆದು ಮೊದಲು ರೇಖಾ ಹಣೆಗೆ ಗುಂಡಿಕ್ಕಿದ್ದರೆ, ಬಳಿಕ ತನ್ನ ತಲೆಗೆ ಗುಂಡಿಕ್ಕಿ ದುರಂತ ಅಂತ್ಯ ಕಂಡಿದ್ದಾರೆ
ಸುಮಿತ್ ಕಳುಗಿಸಿದ ಮೆಸೇಜ್‌ನಲ್ಲಿ ಪ್ರೀತಿ, ಮದುವೆ ವಿಚಾರ ಹೇಳಿಕೊಂಡಿದ್ದ. ನನ್ನ ನಿರ್ಧಾರಕ್ಕೆ ರೇಖಾ ಕಾರಣ. ಕಳೆದ 15 ವರ್ಷದಿಂದ ನಾವು ಪ್ರೀತಿಸುತ್ತಿದ್ದೇವೆ. ಇದೀಗ ಆಕೆ ಬೇರೆಯೊಬ್ಬನ ಮದುವೆಯಾಗುತ್ತಿದ್ದಾಳೆ. ನನಗೆ ಮೋಸ ಮಾಡಿದ್ದಾಳೆ. ಇದು ನನಗೆ ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಬದುಕು ಅಂತ್ಯಗೊಳಿಸುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ.
ಶುಕ್ರವಾರ ರೇಖಾಳ ಜೊತೆ ತೆರಳಿದ್ದು ಇಬ್ಬರೂ ಮನೆಗೆ ಮರಳಿಲ್ಲ. ಗಾಬರಿಗೊಂಡ ಎರಡೂ ಮನೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಟವರ್ ಲೋಕೇಶನ್ ಪತ್ತೆಹಚ್ಚಿ ಹುಡುಕಿದಾಗ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಒಳಗಿನಿಂದ ಲಾಕ್ ಮಾಡಿಕೊಂಡು ಇಬ್ಬರೂ ದುರಂತ ಅಂತ್ಯ ಕಂಡಿದ್ದಾರೆ. ಮೇಲ್ನೋಟಕ್ಕೆ ಪ್ರೀತಿ ವಿಚಾರದಲ್ಲಿ ಬದುಕು ಅಂತ್ಯಗೊಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.