ಮಧ್ಯ ಪ್ರದೇಶ :ಬಸ್ - ಪಿಕಪ್ ಟ್ರಕ್ ಮಧ್ಯೆ ಭೀಕರ ಅಪಘಾತ: 10 ಜನರ ದುರ್ಮರಣ, 30 ಜನರಿಗೆ ಗಾಯ...!!
ಮಧ್ಯಪ್ರದೇಶ: ಛಿಂದ್ವಾರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುರುವಾರ ಸಂಜೆ ಛಿಂದ್ವಾರದ ನಾಗ್ಪುರ ರಸ್ತೆಯ ಸಿಮಾರಿಯಾ ಬಳಿ ಪ್ರಯಾಣಿಕರ ಬಸ್ ಬೆಳ್ಳುಳ್ಳಿ ತುಂಬಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹರೇಂದ್ರ ನಾರಾಯಣ್ ಮಾಹಿತಿ ನೀಡಿದರು.
ಗಾಯಾಳುಗಳೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಓವರ್‌ಟೇಕ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಫಲಾನುಭವಿಗಳ ಸಮಾವೇಶ ಮತ್ತು ಸಾರ್ವಜನಿಕ ಸಭೆಯನ್ನು ಚಿಂದ್ವಾರ ಪೊಲೀಸ್ ಮೈದಾನದಲ್ಲಿ ನಡೆಸಲಾಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಂಡಾರಕುಂಡ್‌ನಿಂದ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರು. ಸಿಮಾರಿಯಾ ಬಳಿ ಹಿಂತಿರುಗುವಾಗ ಅಪಘಾತ ನಡೆದಿದೆ. ಅಪಘಾತದಲ್ಲಿ ಆರು ಜನ ಪುರುಷರು, ಮೂವರು ಮಹಿಳೆಯರು ಮತ್ತು ಒಂದು ಮಗು ಸಾವನ್ನಪ್ಪಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಡಿಸಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಂಡೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ನಾಗ್ಪುರ ರಸ್ತೆಯ ಸಿಮಾರಿಯಾ ಬಳಿ ಈ ಘಟನೆ ಸಂಭವಿಸಿದೆ. ಆರು ಪುರುಷರು, ಮೂವರು ಮಹಿಳೆಯರು ಮತ್ತು ಐದು ವರ್ಷದ ಮಗು ಅಪಘಾತದಲ್ಲಿ ಸಾವನ್ನಪ್ಪಿದೆ" ಎಂದು ಹೇಳಿದರು.
ಕೊತ್ವಾಲಿ ಸ್ಟೇಷನ್ ಹೌಸ್ ಅಧಿಕಾರಿ ಆಶಿಶ್ ಕುಮಾರ್ ಮಾತನಾಡಿ, "ಅಪಘಾತದ ಸಮಯದಲ್ಲಿ ಬಸ್‌ನಲ್ಲಿ 40 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು" ಎಂದು ಹೇಳಿದರು.
ಗಾಯಾಳುಗಳನ್ನು ಆಂಬ್ಯುಲೆನ್ಸ್ ಮತ್ತು ಇತರ ವಾಹನಗಳ ಮೂಲಕ ಜಿಲ್ಲಾಸ್ಪತ್ರೆ ಮತ್ತು ಹತ್ತಿರದ ಇತರೆ ವೈದ್ಯಕೀಯ ಕೇಂದ್ರಗಳಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವನಾಥ್ ಅವರು ಜಿಲ್ಲಾಸ್ಪತ್ರೆಗೆ ದೌಡಾಯಿಸಿದರು, ಅಲ್ಲಿ ಅವರು ಗಾಯಾಳುಗಳನ್ನು ಭೇಟಿಯಾದರು. ಅಷ್ಟಮಿಯಂದು ಸಿಎಂ ಮೋಹನ್ ಯಾದವ್ ಅವರ ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಅಗತ್ಯವೇನಿತ್ತು ಪ್ರಶ್ನಿಸಿದರು. ಈ ಸಾವಿಗೆ ಬಿಜೆಪಿ ಕಾರಣ ಎಂದು ಅವರು ಆರೋಪಿಸಿದರು. ಸಂತ್ರಸ್ತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕಮಲ್ ನಾಥ್ ಮತ್ತು ನಕುಲ್ ನಾಥ್ ಸಂತಾಪ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಜಿಲ್ಲೆಯ ಮಾಜಿ ಸಂಸದ ನಕುಲ್ ನಾಥ್ ಈ ಭೀಕರ ರಸ್ತೆ ಅಪಘಾತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. "ಚಿಂದ್ವಾರ-ನಾಗ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ಸುದ್ದಿ ಕೇಳಿ ತೀವ್ರ ದುಃಖ ತರಿಸಿದೆ. ಅಗಲಿದವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಕಮಲ್ ನಾಥ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
"ಚಿಖ್ಲಿ ಗ್ರಾಮದ ಬಳಿ ನಡೆದ ಬಸ್ ಅಪಘಾತದಲ್ಲಿ ಅನೇಕ ಜನರು ಸಾವನ್ನಪ್ಪಿದ ಸುದ್ದಿ ದುಃಖಕರವಾಗಿದೆ. ಅಗಲಿದವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ನಕುಲ್ ನಾಥ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.