ಬೆಂಗಳೂರು :ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ: ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್...!

ಬೆಂಗಳೂರು :ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ: ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್...!

BENGALURU  MANGALURU BLAST CASE  ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್  ಮೊಹಮ್ಮದ್ ಶಾರೀಕ್ COOKER BOMB BLAST

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಹೊರವಲಯದಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮೊಹಮ್ಮದ್ ಶಾರೀಕ್ ತಾನು ಕೃತ್ಯವೆಸಗಿರುವುದಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಸಲ್ಲಿಸಿದ್ದ ತಪ್ಪೊಪ್ಪಿಗೆ ಅರ್ಜಿಯನ್ನ ಎನ್ಐಎ ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ.

ಪ್ರಕರಣ ಸಂಬಂಧ 2024ರಲ್ಲಿ ಶಾರೀಕ್, ಸೈಯದ್ ಯಾಸೀನ್ ವಿರುದ್ಧ ನ್ಯಾಯಾಲಯಕ್ಕೆ ಎನ್ಐಎ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಶಾರೀಕ್ ತಾನು ನಿರಾಪರಾಧಿ ಎಂದು ಹೇಳಿಕೆ ನೀಡಿ ತನ್ನ ಮೇಲಿನ ಆರೋಪವನ್ನ ತಳ್ಳಿ ಹಾಕಿದ್ದ. ಈ ಮಧ್ಯೆ 2025ರ ಡಿಸೆಂಬರ್ ನಲ್ಲಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ನನ್ನ ವಿರುದ್ಧ ಎನ್ಐಎ ತನಿಖಾಧಿಕಾರಿಗಳು ಚಾರ್ಜ್ ಶೀಟ್​​ನಲ್ಲಿ ನಮೂದಿಸಿರುವ ಆರೋಪಗಳು ಸತ್ಯವಾಗಿದ್ದು, ಕುಕ್ಕರ್​​ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಟ್ಟು ಸ್ಫೋಟಕ್ಕೆ ಕಾರಣನಾಗಿರುವೆ. ನನಗೆ ಈಗ ಪಶ್ಚಾತಾಪವಾಗಿದೆ. ಕಾನೂನು ಪ್ರಕಾರ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದ. ಮೂರು ತಿಂಗಳ ವಿಚಾರಣೆ ಬಳಿಕ ನ್ಯಾಯಾಲಯವು ಶಂಕಿತನ ಅರ್ಜಿಯನ್ನ ಮಾನ್ಯ ಮಾಡಿದೆ.

2022ರ ನ.19ರಂದು ಸಂಜೆ 4.40 ಸುಮಾರಿಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಶಾರೀಖ್ ತೆರಳುವಾಗ (ಐಇಡಿ) ಕುಕ್ಕರ್ ಸ್ಫೋಟಗೊಂಡಿತ್ತು. ಸ್ಫೋಟದ ರಭಸಕ್ಕೆ ಶಂಕಿತನ ಜೊತೆ ಆಟೋ ಚಾಲಕ ಸಹ ಗಂಭೀರ ಗಾಯಗೊಂಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶಂಕಿತನನ್ನ ಬಂಧಿಸಿದ್ದರು. ಕೃತ್ಯದ ಹಿಂದೆ ಐಸಿಸ್ ನಂಟು ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿ ಎನ್ಐಎ ತನಿಖೆ ಕೈಗೊಂಡಿತ್ತು. ಸದ್ಯ ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ತನ್ನ ಪಾತ್ರವಿರುವುದಾಗಿ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಶಾರೀಕ್, ಐಸಿಎಸ್ ಹಾಗೂ ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ. ಶಿವಮೊಗ್ಗ ಐಸಿಸ್ ಮಾಡ್ಯುಲ್ ಸದಸ್ಯನಾಗಿದ್ದ. ಈತ 2020ರಲ್ಲಿ ಮಂಗಳೂರಿನ ಗೋಡೆ ಬರಹ ಹಾಗೂ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ನಡೆಸಿದ್ದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದಾನೆ. ಸದ್ಯ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಮಾತ್ರ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕರ್ನಾಟಕದ ಧರ್ಮಸ್ಥಳ, ಕದ್ರಿ ಮಂಜುನಾಥ ದೇವಾಲಯ ಸೇರಿದಂತೆ ದಕ್ಷಿಣ ಭಾರತದ ದೇವಾಲಯಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದು ಶಂಕಿತ ಉಗ್ರರ ಹುನ್ನಾರವಾಗಿತ್ತು. ಇದೇ ಭಾಗವಾಗಿ ಕುಕ್ಕರ್​​ನಲ್ಲಿ ಇಎಲ್​ಡಿ ಇಟ್ಟು ಟೈಮರ್ ಫಿಕ್ಸ್ ಮಾಡಲಾಗಿತ್ತು. 90 ನಿಮಿಷಗಳ ಫಿಕ್ಸ್ ಮಾಡುವ ಬದಲು 9 ನಿಮಿಷಕ್ಕೆ ತಪ್ಪಾಗಿ ನಿಗದಿಪಡಿಸಿದ್ದರಿಂದ ಆಟೋದಲ್ಲಿ ತೆರಳುವಾಗ ಮಾರ್ಗ ಮಧ್ಯೆ ಸ್ಫೋಟಗೊಂಡಿತ್ತು. ಪ್ರಕರಣದ ಎರಡನೇ ಆರೋಪಿ ಸೈಯದ್ ಯಾಸೀನ್ ಬಾಂಬ್ ತಯಾರಿಕೆಗೆ ಅಗತ್ಯವಾದ ಉಪಕರಣಗಳನ್ನ ಪೂರೈಸಿದ ಆರೋಪದಡಿ ಬಂಧಿಸಲಾಗಿತ್ತು.

Ads on article

Advertise in articles 1

advertising articles 2

Advertise under the article