ಉತ್ತರ ಪ್ರದೇಶ :ಬಾಲಕಿ ಕತ್ತು ಸೀಳಿ ಹತ್ಯೆ ಮಾಡಿ ದೇಹವನ್ನು ಡ್ರಮ್‌ನಲ್ಲಿ ತುಂಬಿಸಿದ್ದ ಕೊಲೆಗಾರ: ಎನ್ಕೌಂಟರ್ ಮಾಡಿದ ಪೊಲೀಸರು!!!!

ಉತ್ತರ ಪ್ರದೇಶ: 8 ವರ್ಷದ ಅಮಾಯಕ ಬಾಲಕಿಯನ್ನು ಕೊಂದು ಆಕೆಯ ಶವವನ್ನು ಡ್ರಮ್‌ನೊಳಗೆ ಬಚ್ಚಿಟ್ಟ ಕೊಲೆ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದರಿಂದ ಆತ ಗಾಯಗೊಂಡಿದ್ದ, ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ ಎಂದು ಡಿಸಿಪಿ ಸೈಯದ್ ಅಲಿ ಅಬ್ಬಾಸ್ ಹೇಳಿದ್ದಾರೆ.
ಆಗ್ರಾದಲ್ಲಿ ಶುಕ್ರವಾರ ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ಕೂಡ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆಹಿಡಿದವರಿಗೆ ₹25,000 ಬಹುಮಾನ ಕೂಡಾ ಘೋಷಿಸಲಾಗಿತ್ತು.

70 ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ತಂಡವು ತಲೆಮರೆಸಿಕೊಂಡಿದ್ದ ಆರೋಪಿ ಸುನಿಲ್‌ಗಾಗಿ ಹುಡುಕಾಟ ನಡೆಸಿತ್ತು ಎಂದು ನಗರ ಡಿಸಿಪಿ ಸೈಯದ್ ಅಲಿ ಅಬ್ಬಾಸ್ ಬಹಿರಂಗಪಡಿಸಿದ್ದಾರೆ. ತನಿಖೆಯ ಸಮಯದಲ್ಲಿ 250 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತಂಡಗಳು ನಿರಂತರ ದಾಳಿ ನಡೆಸುತ್ತಿದ್ದವು. ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಲು, ಅವರ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಸೇರಿದಂತೆ 22 ವ್ಯಕ್ತಿಗಳನ್ನು ವಿಚಾರಣೆಗಾಗಿ ಈಗಾಗಲೇ ಬಂಧಿಸಲಾಗಿತ್ತು.
ಶುಕ್ರವಾರ ತಡರಾತ್ರಿ ಕೊಲೆ ಆರೋಪಿ ಸುನಿಲ್ ಬಗ್ಗೆ ಪೊಲೀಸ್ ತಂಡಗಳಿಗೆ ನಿಖರವಾದ ಗುಪ್ತಚರ ಮಾಹಿತಿ ಸಿಕ್ಕಿತ್ತು. ಬಮ್ರೌಲಿ ಕತಾರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಿಯಮಿತ ತಪಾಸಣೆ ನಡೆಸುತ್ತಿದ್ದಾಗ, ಕೊಲೆ ಆರೋಪಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದ. ಪೊಲೀಸರು ತನ್ನನ್ನು ಸುತ್ತುವರೆದಿದ್ದಾರೆ ಎಂದು ಗೊತ್ತಾದ ಆರೋಪಿ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಗುಂಡ ಹಾರಿಸಿದ್ದ ಎಂದು ನಗರ ಡಿಸಿಪಿ ಸೈಯದ್ ಅಲಿ ಅಬ್ಬಾಸ್ ಮಾಹಿತಿ ನೀಡಿದ್ದಾರೆ.
ಎಸ್ಐ ವಿಶ್ವಜೀತ್ ರಾಣಾ ಈ ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ. ಪೊಲೀಸ್ ಪಡೆ ಇದಕ್ಕೆ ಪ್ರತಿಯಾಗಿ ತಮ್ಮ ಜೀವರಕ್ಷಣೆಗಾಗಿ ಪ್ರತಿದಾಳಿ ನಡೆಸಿದವು. ಈ ಘರ್ಷಣೆಯ ಸಮಯದಲ್ಲಿ ಆರೋಪಿ ಸುನಿಲ್ ಗುಂಡೇಟಿನಿಂದ ಗಾಯಗೊಂಡರು. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಆತ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು ಎಂದು ಡಿಸಿಪಿ ತಿಳಿಸಿದ್ದಾರೆ. ಈತನ ತಲೆ ಮೇಲೆ 25 ಸಾವಿರ ಬಹುಮಾನ ಕೂಡಾ ಘೋಷಣ ಮಾಡಲಾಗಿತ್ತು ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಆರೋಪಿ ಬಳಿ ಇದ್ದ ಒಂದು ಮೋಟಾರ್ ಸೈಕಲ್, ಒಂದು ದೇಶೀಯ ನಿರ್ಮಿತ ಪಿಸ್ತೂಲ್, ಆರು ಬಳಕೆಯಲ್ಲಿದ್ದ ಕಾರ್ಟ್ರಿಡ್ಜ್‌ಗಳು ಮತ್ತು ಮೂರು ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬ್ಬಾಸ್ ಮಾಹಿತಿ ನೀಡಿದ್ದಾರೆ.
ಮಾರ್ಚ್ 24 ರಂದು ಕಾಣೆಯಾಗಿದ್ದ ಬಾಲಕಿ: ಮಾರ್ಚ್ 24, 2026 ರಂದು, ಸಿದ್ಧಾರ್ಥ್ ನಗರದ ನಿವಾಸಿ ಮತ್ತು ಶೂ ಉದ್ಯಮಿ ದಿನೇಶ್ ಕುಮಾರ್ ಅವರ ಪುತ್ರಿ ಪ್ರದ್ನ್ಯಾ (8) ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದಳು. ಆಕೆಯ ಕುಟುಂಬ ಸದಸ್ಯರು ಆಕೆಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಡ್ರಮ್‌ನಲ್ಲಿ ಬಾಲಕಿ ಶವ ಪತ್ತೆ; ಘಟನೆಯ ಬಗ್ಗೆ ತಾಜ್‌ಗಂಜ್ ಠಾಣೆಯ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇಪ್ಪತ್ತೆಂಟು ಗಂಟೆಗಳ ನಂತರ, ಮನೆಯ ಒಂದು ಭಾಗವನ್ನು ಬಾಡಿಗೆಗೆ ಪಡೆದಿದ್ದ ಸುನಿಲ್ ಎಂಬುವವರ ಕೋಣೆಯಲ್ಲಿ ಇರಿಸಲಾಗಿದ್ದ ಹಿಟ್ಟಿನ ಡ್ರಮ್‌ನಲ್ಲಿ ಅಮಾಯಕ ಬಾಲಕಿಯ ಶವ ಪತ್ತೆಯಾಗಿತ್ತು.
ಆಕೆಯ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿತ್ತು. ಘಟನೆ ನಡೆದಾಗಿನಿಂದಲೂ ಆರೋಪಿ ಬಾಡಿಗೆದಾರ ಸುನಿಲ್ ತಲೆಮರೆಸಿಕೊಂಡಿದ್ದರು. ಅನುಮಾನದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಹಾಗೂ ಆತನ ತಂದೆ, ತಾಯಿ ಮತ್ತು ಸಹೋದರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಈ ಪ್ರಕರಣದಲ್ಲಿ ಪೊಲೀಸರು ಸುಮಾರು 22 ಮಂದಿಯನ್ನು ಬಂಧಿಸಿದ್ದರು. ಆದರೆ ತಲೆಮರೆಸಿಕೊಂಡಿರುವ ಆರೋಪಿ ಪತ್ತೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ 70 ಪೊಲೀಸರ ತಂಡಗಳನ್ನು ನಿಯೋಜನೆ ಮಾಡಲಾಗಿತ್ತು. ಈತನ ಸುಳಿವು ನೀಡಿದವರಿಗೆ 25 ಸಾವಿರ ರೂ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.