ಶಿವಮೊಗ್ಗ:ನೀರಾನೆ ದಾಳಿಗೆ ಪಶುವೈದ್ಯೆ ಸಾವು: ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ..!!
ಶಿವಮೊಗ್ಗ: ನೀರಾನೆ ದಾಳಿಯಿಂದ ಪಶು ವೈದ್ಯೆ ಸಾವನ್ನಪ್ಪಿರುವ ಘಟನೆ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ ಡಾ.ಸಮೀಕ್ಷಾ ರೆಡ್ಡಿ ಮೃತಪಟ್ಟಿದ್ದಾರೆ. ಹುಲಿ ಮತ್ತು ಸಿಂಹಧಾಮದ ಪಶು ವೈದ್ಯಾಧಿಕಾರಿಯಾಗಿ ಇವರು ಗುತ್ತಿಗೆ ಆಧಾರದ ಮೇಲೆ ಇತ್ತೀಚೆಗೆ ಆಯ್ಕೆಯಾಗಿದ್ದರು.
ಆಗಿದ್ದೇನು?: ಸಮೀಕ್ಷಾ ರೆಡ್ಡಿ ಗುರುವಾರ ರಾತ್ರಿ 10:30ರ ಸುಮಾರಿಗೆ ಹುಲಿ ಮತ್ತು ಸಿಂಹಧಾಮದ ಸನ್ ಕಾನರ್ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ರಾತ್ರಿ 11:45ಕ್ಕೆ ಗರ್ಭಿಣಿ ನೀರಾನೆಯ ದೇಹದ ಉಷ್ಣಾಂಶವನ್ನು ಧರ್ಮಲ್ ಕ್ಯಾಮರಾ ಮೂಲಕ ಪರೀಕ್ಷೆ ನಡೆಸಲು ಮುಂದಾದಾಗ ಅದು ಏಕಾಏಕಿ ದಾಳಿ ನಡೆಸಿದೆ. ಇದರಿಂದ ರೆಡ್ಡಿ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 6:30ಕ್ಕೆ ಸಾವನ್ನಪ್ಪಿದ್ದಾರೆ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಹಕ ನಿರ್ದೇಶಕ ಡಾ.ಅಮರಕ್ಷರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವರ ಸಂತಾಪ: ಡಾ.ಸಮೀಕ್ಷಾ ರೆಡ್ಡಿ ಅವರಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಂತಾಪ ಸೂಚಿಸಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯೆಯ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯ, ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸಚಿವ ಖಂಡ್ರೆ ಪ್ರಾರ್ಥಿಸಿದ್ದಾರೆ.
ತನಿಖೆಗೆ ಸೂಚನೆ: ಮೃತ ಯುವ ವೈದ್ಯೆಯ ಕುಟುಂಬದವರಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡುವಂತೆ ಸೂಚಿಸಿರುವ ಅವರು, ರಾಜ್ಯದ ಎಲ್ಲ ಮೃಗಾಲಯಗಳಲ್ಲಿರುವ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವಾಗ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಪಾಲಿಸಬೇಕು. ಈ ದುರಂತದ ಬಗ್ಗೆ ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡದಿಂದ ತನಿಖೆ ಮಾಡಿಸಿ, 7 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ತ್ಯಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೀರಾನೆ ದಾಳಿಯಿಂದ ಯುವ ಪಶುವೈದ್ಯ ಡಾ.ಸಮೀಕ್ಷಾ ರೆಡ್ಡಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಶವಾಗಾರಕ್ಕೆ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ಎಸ್ಪಿ ನಿಖಿಲ್ ಬಿ ಆಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡರು.
ಡಾ.ಸಮೀಕ್ಷಾ ರೆಡ್ಡಿ ಅವರ ಸೋದರ ಮಾವ ರಾಜಶೇಖರ್ ಮಾತನಾಡಿ, "ಪ್ರಾಣಿಯೊಂದರ ದಾಳಿಯಿಂದ ಗಾಯಗೊಂಡು ಸಮೀಕ್ಷಾ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ನಮಗೆ ತಿಳಿಸಿದರು. ಹೊಟ್ಟೆಗೆ ಗಾಯವಾಗಿದೆ ಎಂದು ಹೇಳಿದ್ದರು. ನಂತರ ನಾವು ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಸಂಪರ್ಕಿಸಿದೆವು, ಅವರು ಲಿವರ್ ಡ್ಯಾಮೇಜ್ ಆಗಿದೆ ಎಂದು ಹೇಳಿದರು. ನಂತರ ಆಪರೇಷನ್ ಮಾಡಿದ್ದಾರೆ. ಸಮೀಕ್ಷಾ ರೆಡ್ಡಿ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಬಂದು ಒಂದೂವರೆ ತಿಂಗಳಾಗಿತ್ತು. ನಿನ್ನೆ ನೀರಾನೆ ಬಳಿ ಹೋದಾಗ ಇನ್ನೊಬ್ಬ ಹುಡುಗ ಇದ್ದ. ಆದರೆ, ಇವರು ಟ್ರೈನಿ ಆಗಿದ್ದ ಕಾರಣಕ್ಕೆ ಒಬ್ಬರನ್ನೇ ಕಳುಹಿಸುವಂತಿಲ್ಲ. ಆದರೂ ಸಹ ಇಂತಹ ದೊಡ್ಡ ಪ್ರಾಣಿಯ ಬಳಿ ಯಾಕೆ ಬಿಟ್ಟರೋ ಗೊತ್ತಿಲ್ಲ" ಎಂದು ಹೇಳಿದರು.
ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ: ಡಾ.ಸಮೀಕ್ಷಾ ರೆಡ್ಡಿ ಅವರು ಪಶು ವೈದ್ಯಕೀಯ ಪದವಿಯ ಪ್ರಥಮ ವರ್ಷವನ್ನು ಶಿವಮೊಗ್ಗದಲ್ಲಿ ಮಾಡಿದ್ದು, ನಂತರ ಬೆಂಗಳೂರಿನಲ್ಲಿ ಕೋರ್ಸ್ ಮುಗಿಸಿದ್ದರು. ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.